ನವದೆಹಲಿ: ಪಶ್ಚಿಮ ಏಷ್ಯಾ (West Asia conflict) ಭಾಗದಲ್ಲಿ ಉದ್ಭವವಾಗಿರುವ ಸಂಘರ್ಷದ ಪರಿಣಾಮ ಉಂಟಾಗಿರುವ ಸವಾಲುಗಳನ್ನು ಎದುರಿಸಲು ನಾವೆಲ್ಲರೂ ಜೊತೆಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಅವರು ಭಾನುವಾರ ಮನ್ ಕಿ ಬಾತ್‌ನಲ್ಲಿ (Mann ki Baat) ಮಾತನಾಡಿ, ನಮ್ಮ ನೆರೆ ಹೊರೆಯ ರಾಷ್ಟ್ರಗಳಲ್ಲಿ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಸಂಘರ್ಷದ ಪರಿಣಾಮ ಹಲವಾರು ರೀತಿಯ ಸವಾಲುಗಳು ಎದುರಾಗಿವೆ. ಇದನ್ನು ನಾವು ಜಂಟಿಯಾಗಿ ಎದುರಿಸಬೇಕಾಗಿದೆ ಎಂದು ತಿಳಿಸಿದರು.
ಯುದ್ಧದಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಎಲ್ಲಾ ನಾಗರಿಕರು ಒಟ್ಟಾಗಬೇಕು. ಜಾಗರೂಕರಾಗಿರಬೇಕು ಮತ್ತು ವದಂತಿಗಳಿಗೆ ಕಿವಿಗೊಡಬಾರದು ಎಂದ ಅವರು, ಗಲ್ಫ್ ರಾಷ್ಟ್ರಗಳು ವಾಸಿಸುವ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಿದ್ದಕ್ಕಾಗಿ ದೇಶದ ಜನತೆಗೆ ಕೃತಜ್ಞರಾಗಿರುವುದಾಗಿ ಹೇಳಿದರು.
ಇರಾನ್ ಅಧ್ಯಕ್ಷರೊಂದಿಗೆ ಷರೀಫ್ ಮಾತುಕತೆ: ಪಾಕಿಸ್ತಾನದಲ್ಲಿ ಮಧ್ಯಪ್ರಾಚ್ಯ ಶಾಂತಿ ಮಾತುಕತೆಗೆ ಸಿದ್ಧತೆ
ಇದೊಂದು ಸವಾಲಿನ ಸಮಯ. ಈ ಸವಾಲನ್ನು ಎದುರಿಸಲು ನಾವೆಲ್ಲರೂ ಒಂದಾಗಬೇಕು. ಇದಕ್ಕಾಗಿ ದೇಶದ 140 ಕೋಟಿ ಜನರು ಕೂಡ ಒಗ್ಗೂಡಬೇಕು ಎಂದು ಮನವಿ ಮಾಡುವುದಾಗಿ ಅವರು ತಿಳಿಸಿದರು.
ಕಳೆದ ಫೆಬ್ರವರಿ 28ರಿಂದ ಪ್ರಾರಂಭವಾಗಿರುವ ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಅಮೆರಿಕ ಮತ್ತು ಇಸ್ರೇಲ್ ನೆರೆಯ ಇಸ್ಲಾಮಿಕ್ ಗಣರಾಜ್ಯ ದೇಶವಾದ ಇರಾನ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಯುಎಸ್ ಸೇನಾ ನೆಲೆಗಳು ಇರುವ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿವೆ. ಇದರ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಬೀರಿದೆ.
ಯುದ್ಧ ಪ್ರಾರಂಭವಾದ ಬಳಿಕ ವಿಶ್ವದ ಇಂಧನದ ಸಾಗಾಟದ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿ ಮೇಲೆ ಇರಾನ್ ನಿಯಂತ್ರಣ ಸಾಧಿಸಿದ್ದು, ಇಲ್ಲಿ ದಾರಿಯನ್ನು ನಿರ್ಬಂಧಿಸಿ ಕೆಲವೇ ಕೆಲವು ಹಡಗುಗಳಿಗೆ ದಾಟಲು ಅನುಮತಿ ನೀಡಿದೆ. ಸಂಘರ್ಷ ಮತ್ತು ಅದರ ಪರಿಣಾಮಗಳ ಕುರಿತು ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಸೌದಿ ಅರೇಬಿಯಾ, ಯುಎಇ, ಕತಾರ್, ಬಹರೈನ್, ಕುವೈತ್, ಜೋರ್ಡಾನ್, ಇರಾನ್, ಫ್ರಾನ್ಸ್, ಇಸ್ರೇಲ್ ಮತ್ತು ಮಲೇಷ್ಯಾ ಸೇರಿದಂತೆ ಹಲವಾರು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.
ಲೋಕಸಭೆಯಲ್ಲೂ ಮಾತನಾಡಿರುವ ಅವರು, ಪಶ್ಚಿಮ ಏಷ್ಯಾ ಸಂಘರ್ಷದ ಈ ಸಮಯದಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಒಗ್ಗಟ್ಟಾಗಿ ನಿಂತಂತೆ ನಾವೆಲ್ಲರೂ ಜೊತೆಯಾಗಿ ನಿಂತು ಹೋರಾಡಬೇಕಿದೆ ಎಂದು ತಿಳಿಸಿದ್ದರು.
ಸಂಘರ್ಷದ ಪರಿಣಾಮ ದೇಶದಲ್ಲಿ ಇಂಧನ, ರಸಗೊಬ್ಬರ, ರಾಷ್ಟ್ರೀಯ ಭದ್ರತೆ ಮೇಲೆ ಬೀರಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದ ಅವರು, ದೇಶವಾಸಿಗಳಿಗೆ ಹೆಚ್ಚಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಕೇರಳ ಚುನಾವಣೆ: ಫಲಿತಾಂಶ ನಿರ್ಧರಿಸಲಿವೆ ಈ 5 ಪ್ರಮುಖ ಕ್ಷೇತ್ರಗಳು
ಮಾನವೀಯತೆ ಮತ್ತು ಶಾಂತಿಗೆ ಭಾರತದ ಬದ್ಧತೆಗೆ ಬಗ್ಗೆ ಪುನರುಚ್ಚರಿಸಿರುವ ಮೋದಿ, ಉದ್ವಿಗ್ನತೆಯನ್ನು ಶಮನಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕ ಪರಿಹಾರವೊಂದೇ ಮಾರ್ಗವಾಗಿದೆ. ಭಾರತವು ಉದ್ವಿಗ್ನತೆಯನ್ನು ಶಮನಗೊಳಿಸುವ ಮತ್ತು ಯುದ್ಧವನ್ನು ನಿಲ್ಲಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.