Jagdeep Dhankhar: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ಗೆ ದೆಹಲಿಯಲ್ಲಿ ಹೊಸ ಬಂಗಲೆ ಮಂಜೂರು
ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜಗದೀಪ್ ಧನಕರ್ ರಾಜಕೀಯ ಬದುಕಿನಿಂದ ಹೊರ ಬಂದು ತಮ್ಮ ನಿವೃತ್ತಿ ಜೀವನ ಆರಂಭಿಸಿದ್ದಾರೆ. ಈ ಮಧ್ಯೆ ಅವರಿಗೆ ಸಿಗುವ ಸೌಲಭ್ಯದ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದು, ಶಾಸಕರಾಗಿ, ರಾಜ್ಯಪಾಲರಾಗಿ ಹಾಗೂ ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದ ಅವರಿಗೆ ದೆಹಲಿಯಲ್ಲಿ ಬಂಗಲೆ ನೀಡಲಾಗಿದೆ.

ಜಗದೀಪ್ ಧನಕರ್ -

ನವದೆಹಲಿ: ಮಾಜಿ ಉಪರಾಷ್ಟ್ರಪತಿ (Former Vice President) ಜಗದೀಪ್ ಧನಕರ್‌ಗೆ (Jagdeep Dhankhar) ದೆಹಲಿಯ (Delhi) ಲುಟಿಯನ್ಸ್ (Lutyens) ವಲಯದ 34 ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಟೈಪ್ VIII ಬಂಗಲೆಯನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧನಕರ್ ತಮ್ಮ ಅಧಿಕೃತ ನಿವಾಸದಿಂದ ಹೊರಗೆ ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಧನಕರ್ ತಮ್ಮ ಉಪರಾಷ್ಟ್ರಪತಿ ಸ್ಥಾನಕ್ಕೆ ಜುಲೈ 21, ರಂದು ರಾಜೀನಾಮೆ ನೀಡಿದ ನಂತರ, ಸಂಪ್ರದಾಯದಂತೆ ಸರ್ಕಾರಿ ವಸತಿಯನ್ನು ಮಂಜೂರು ಮಾಡದೆ, INLD ನಾಯಕ ಅಭಯ್ ಚೌತಾಲರ ಫಾರ್ಮ್‌ಹೌಸ್‌ಗೆ ತೆರಳಿದ್ದರು. ಈಗ ಮಂಜೂರಾದ ಬಂಗಲೆಯನ್ನು ಈ ಹಿಂದೆ ಮಿಜೋರಾಂನ ಗವರ್ನರ್ ಮತ್ತು ಕೇಂದ್ರ ರಾಜ್ಯ ಸಚಿವರಾಗಿದ್ದ ವಿ.ಕೆ. ಸಿಂಗ್ ಆಕ್ರಮಿಸಿಕೊಂಡಿದ್ದರು. ಆದರೆ, ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯವು ಈ ಮಂಜೂರಾತಿಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಧನಕರ್, ಆರೋಗ್ಯ ಕಾರಣಗಳಿಂದ ಸಂಸತ್‌ನ ಮಾನ್ಸೂನ್ ಅಧಿವೇಶನದ ಮೊದಲ ದಿನವೇ ರಾಜೀನಾಮೆ ಸಲ್ಲಿಸಿದ್ದರು. ಇದು ದೇಶದ ಇತಿಹಾಸದಲ್ಲಿ ಉಪರಾಷ್ಟ್ರಪತಿಯಾಗಿ ಅವಧಿ ಪೂರ್ಣಗೊಳಿಸದೆ ರಾಜೀನಾಮೆ ನೀಡಿದ ಮೂರನೇ ಘಟನೆಯಾಗಿದೆ. ರಾಜೀನಾಮೆಯ ನಂತರ ಧನಕರ್ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವುಳಿದಿದ್ದಾರೆ. ವಿರೋಧ ಪಕ್ಷದ ನಾಯಕರು, ರಾಜಕೀಯ ವಿಭಿನ್ನತೆಯಿಂದ ಧನಕರ್ ಅವರರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಹನಿಮೂನ್‌ಗೆ ಹೋಗಿದ್ದ ಭಾರತೀಯ ದಂಪತಿ ಮೇಲೆ ಚೀನಾ ವ್ಯಕ್ತಿಯಿಂದ ಮನಸೋಇಚ್ಛೆ ಹಲ್ಲೆ
74 ವರ್ಷದ ಧನಕರ್‌ಗೆ ಉಪರಾಷ್ಟ್ರಪತಿಯ ಪಿಂಚಣಿ, ವಸತಿ ಮತ್ತು ಇತರ ಸೌಲಭ್ಯ ನಿಯಮಗಳ ಅಡಿಯಲ್ಲಿ ತಿಂಗಳಿಗೆ 42,000 ರೂ. ಪಿಂಚಣಿ, ವೈದ್ಯಕೀಯ ಸೌಲಭ್ಯ, ಮತ್ತು ಪ್ರಯಾಣ ಭತ್ಯೆ ಸಿಗಲಿದೆ. ರಾಜ್ಯ ವಿಧಾನಸಭೆಯಿಂದಲೂ ಪಿಂಚಣಿ ಲಭ್ಯವಿದೆ. ಸರ್ಕಾರದ ಮೂಲಗಳ ಪ್ರಕಾರ, ಧನಕರ್ ಅವರ ಕಚೇರಿಯಿಂದ ವಸತಿಗಾಗಿ ಔಪಚಾರಿಕ ವಿನಂತಿ ಸಲ್ಲಿಸಿರಲಿಲ್ಲ. ಧನಕರ್ ಅವರ ರಾಜೀನಾಮೆ ಮತ್ತು ವಸತಿ ವಿವಾದವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಜಿ ಉಪರಾಷ್ಟ್ರಪತಿಗಳಿಗೆ ಸರ್ಕಾರಿ ವಸತಿಯ ಮಂಜೂರಾತಿಯ ವಿಳಂಬವು ಆಡಳಿತದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.