ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉತ್ತರ ಪ್ರದೇಶದ ಕೋಚಿಂಗ್‌ ಸೆಂಟರ್‌ನಲ್ಲಿ ಭೀಕರ ಸ್ಫೋಟ; ಇಬ್ಬರ ಸಾವು

ಉತ್ತರ ಪ್ರದೇಶದ ಫಾರೂಕಾಬಾದ್‌ನ ಕೋಚಿಂಗ್‌ ಸೆಂಟರ್‌ನಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, 7 ಮಂದಿ ಗಾಯಗೊಂಡಿದ್ದಾರೆ. ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಅತಿಯಾದ ಮೀಥೇನ್‌ ಗ್ಯಾಸ್‌ ಶೇಖರಣೆಯಾಗಿ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಕೋಚಿಂಗ್‌ ಸೆಂಟರ್‌ನಲ್ಲಿ ಭೀಕರ ಸ್ಫೋಟ; ಇಬ್ಬರ ಸಾವು

-

Ramesh B Ramesh B Oct 4, 2025 9:24 PM

ಲಖನೌ: ಉತ್ತರ ಪ್ರದೇಶದ ಫಾರೂಕಾಬಾದ್‌ನ (Farrukhabad) ಕೋಚಿಂಗ್‌ ಸೆಂಟರ್‌ನಲ್ಲಿ ಶನಿವಾರ (ಅಕ್ಟೋಬರ್‌ 4) ಮಧ್ಯಾಹ್ನ ಭೀಕರ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, 7 ಮಂದಿ ಗಾಯಗೊಂಡಿದ್ದಾರೆ. ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಅತಿಯಾದ ಮೀಥೇನ್‌ ಗ್ಯಾಸ್‌ ಶೇಖರಣೆಯಾಗಿ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ (Methane Explosion). ಗಾಯಗೊಂಡವರನ್ನು ಲೋಹಿಯಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೀಥೇನ್ ಹೆಚ್ಚು ದಹಿಸುವ ಅನಿಲವಾಗಿದ್ದು, ಸೆಪ್ಟಿಕ್ ಟ್ಯಾಂಕ್‌ನಂತಹ ಸ್ಥಳದಲ್ಲಿ ಸಂಗ್ರಹವಾದಾಗ ಸರಿಯಾಗಿ ಗಾಳಿ ಬೀಸದಿದ್ದರೆ ಗಮನಾರ್ಹ ಅಪಾಯನ್ನು ಉಂಟು ಮಾಡುತ್ತದೆ ಎಂದಯ ತಜ್ಞರು ತಿಳಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಫಾರೂಕಾಬಾದ್‌ನ ಕೋಚಿಂಗ್‌ ಸೆಂಟರ್‌ ಬಳಿ ನಡೆದ ಸ್ಫೋಟ:



ಈ ಸುದ್ದಿಯನ್ನೂ ಓದಿ: Bomb Blast: ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ: ಓರ್ವ ಸಾವು

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ತ್ವರಿತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸ್ಫೋಟವನ್ನು ʼದುರಂತʼ ಎಂದು ಕರೆದ ಅವರು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.

ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶವನ್ನೂ ಹೊರಡಿಸಿದ್ದಾರೆ. ಸಂತ್ರಸ್ತರು ಮತ್ತು ಗಾಯಗೊಂಡವರಿಗೆ ಎಲ್ಲ ರೀತಿಯ ನೆರವು ನೀಡಿದುವಾಗಿ ಘೋಷಿಸಿದ್ದಾರೆ. ಅವರ ಸೂಚನೆ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲಿ ಸ್ಥಳಕ್ಕೆ ಹಲವರು ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನಸಮೂಹವನ್ನು ಚದುರಿಸಲು ಸ್ಥಳೀಯಾಡಳಿತವು ಪೊಲೀಸ್ ಪಡೆಯನ್ನು ನಿಯೋಜಿಸಬೇಕಾಯ್ತು. ಸ್ಫೋಟದ ಕಾರಣವನ್ನು ಕಂಡುಹಿಡಿಯಲು ತಂಡವು ತನಿಖೆಯನ್ನು ಪ್ರಾರಂಭಿಸಿದೆ. “ಸ್ಫೋಟದಲ್ಲಿ ಹಲವು ಮಕ್ಕಳು ಮತ್ತು ಕೆಲವು ವಯಸ್ಕರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಇಬ್ಬರು ಮೃತಪಟ್ಟಿದ್ದಾರೆʼʼ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, "ನನ್ನ ಜೀವಮಾನದಲ್ಲೇ ಅತ್ಯಂತ ದೊಡ್ಡ ಶಬ್ದವನ್ನು ಇಂದು ಕೇಳಿದೆ. ಆ ಕ್ಷಣದಲ್ಲಿ ಏನಾಯಿತು ಎಂದು ನನಗೆ ಅರ್ಥವಾಗಲಿಲ್ಲ. ಎಲ್ಲರೂ ಇದ್ದಕ್ಕಿದ್ದಂತೆ ಇದನ್ನು ಭಯೋತ್ಪಾದಕ ದಾಳಿ ಎಂದು ಭಾವಿಸಿದರು. ಜನರು ಭಯಭೀತರಾಗಿ ಓಡಲು ಪ್ರಾರಂಭಿಸಿದರು, ಕಿರುಚುತ್ತಿದ್ದರು. ಗಾಯಗೊಂಡವರು ನೆಲದ ಮೇಲೆ ಮಲಗಿರುವುದು ಕಂಡುಬಂತುʼʼ ಎಂದು ಭೀಕರತೆಯನ್ನು ವಿವರಿಸಿದ್ದಾರೆ.