ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಡ್ಯಾರಿಲ್‌ ಮಿಚೆಲ್‌ಗೆ ಚೆಂಡಿನಿಂದ ಥ್ರೋ ಹೊಡೆದ ಅರ್ಷದೀಪ್‌ ಸಿಂಗ್‌ಗೆ ದಂಡ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ವೇಳೆ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಡ್ಯಾರಿಲ್‌ ಮಿಚೆಲ್‌ ಎದುರು ಅನಗತ್ಯವಾಗಿ ಥ್ರೋ ಮಾಡಿ ಕಿರಿಕ್‌ ಮಾಡಿದ್ದ ಭಾರತ ತಂಡದ ಯುವ ವೇಗಿ ಅರ್ಷದೀಪ್‌ ಸಿಂಗ್‌ಗೆ ಐಸಿಸಿ ದಂಡವನ್ನು ವಿಧಿಸಿದೆ. ಕಿವೀಸ್‌ ತಂಡದ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು.

ಡ್ಯಾರಿಲ್‌ ಮಿಚೆಲ್‌ ಜೊತೆ ಕಿರಿಕ್‌ ಮಾಡಿಕೊಂಡಿದ್ದ ಅರ್ಷದೀಪ್‌ಗೆ ದಂಡ!

ಅರ್ಷದೀಪ್‌ ಸಿಂಗ್‌ಗೆ ದಂಡ ವಿಧಿಸಿದ ಐಸಿಸಿ. -

Profile
Ramesh Kote Mar 10, 2026 5:12 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತ ತಂಡದ ಯುವ ವೇಗಿ ಅರ್ಷದೀಪ್‌ ಸಿಂಗ್‌ಗೆ (Arshdeep Singh) ಐಸಿಸಿ ಪಂದ್ಯದ ಸಂಭಾವನೆಯಲ್ಲಿ ಶೇ 15 ರಷ್ಟು ದಂಡವನ್ನು ವಿಧಿಸಿದೆ. ಅರ್ಷದೀಪ್‌ ಸಿಂಗ್‌ ಅವರು ಕಿವೀಸ್‌ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುತ್ತಿದ್ದ ಡ್ಯಾರಿಲ್‌ ಮಿಚೆಲ್‌ (Daryl Mitchell) ಅವರ ಮೇಲೆ ಅನಗತ್ಯವಾಗಿ ಚೆಂಡಿನಿಂದ ಥ್ರೋ ಮಾಡಿದ್ದರು. ಆ ಮೂಲಕ ಐಸಿಸಿ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಇದನ್ನು ಗಮನಿಸಿದ ಐಸಿಸಿ ಯುವ ವೇಗಿಗೆ ದಂಡವನ್ನು ವಿಧಿಸಿದೆ.

ಮಾರ್ಚ್ 10 ರಂದು ಮಂಗಳವಾರ ಐಸಿಸಿ ತನ್ನ ನಿರ್ಧಾರವನ್ನು ಪ್ರಕಟಿಸಿತು. ಐಸಿಸಿ ನಡವಳಿಕೆ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ಅರ್ಷದೀಪ್‌ಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ. ಆಟಗಾರರು ಹಾಗೂ ಆಟಗಾರರ ಬೆಂಬಲ ಸಿಬ್ಬಂದಿಗೆ ಸಂಬಂಧಿಸಿದ ಐಸಿಸಿ ನಡವಳಿಕೆ ಸಂಹಿತೆಯ ವಿಧಿ 2.9 ಅನ್ನು ಅರ್ಷದೀಪ್ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ವಿಧಿಯ ಪ್ರಕಾರ, ಅಂತಾರಾಷ್ಟ್ರೀಯ ಟೂರ್ನಿಯ ಪಂದ್ಯದ ವೇಳೆ ಆಟಗಾರನ ಕಡೆಗೆ ಅಥವಾ ಅವರ ಸಮೀಪಕ್ಕೆ ಚೆಂಡನ್ನು (ಅಥವಾ ಕ್ರಿಕೆಟ್ ಉಪಕರಣದ ಯಾವುದೇ ವಸ್ತುವನ್ನು) ಅಸಮರ್ಪಕ ಅಥವಾ ಅಪಾಯಕಾರಿಯಾದ ರೀತಿಯಲ್ಲಿ ಎಸೆಯಬಾರದು.

IND vs NZ: ಡ್ಯಾರಿಲ್‌ ಮಿಚೆಲ್‌‌ ಬಳಿ ಕ್ಷಮೆ ಕೇಳಲು ನಿರಾಕರಿಸಿದ ಅರ್ಷದೀಪ್‌ ಸಿಂಗ್‌ಗೆ ವಾರ್ನಿಂಗ್‌! ವಿಡಿಯೊ

ದಂಡ ವಿಧಿಸುವ ಜೊತೆಗೆ ಅರ್ಷದೀಪ್‌ ಸಿಂಗ್‌ ಒಂದು ಡೀಮೆರಿಡ್‌ ಅಂಕವನ್ನು ಕೂಡ ನೀಡಲಾಗಿದೆ. 24 ತಿಂಗಳ ಅವಧಿಯಲ್ಲಿ ಭಾರತ ತಂಡದ ವೇಗಿಯ ಮೊದಲ ಪ್ರಮಾದ ಇದಾಗಿದೆ. ಐಸಿಸಿ ಅಧಿಕಾರಿಗಳು ತೆಗೆದುಕೊಂಡು ತೀರ್ಪನ್ನು ಅರ್ಷದೀಪ್‌ ಸಿಂಗ್‌ ಒಪ್ಪಿಕೊಂಡಿದ್ದಾರೆ, ಹಾಗಾಗಿ ಯುವ ವೇಗಿ ಯಾವುದೇ ವಿಚಾರಣೆಯಲ್ಲಿ ಭಾಗಿಯಾಗುವ ಅಗತ್ಯವಿಲ್ಲ.



ಅಂದ ಹಾಗೆ ಫೈನಲ್‌ ಪಂದ್ಯದ ಬಳಿಕ ಅರ್ಷದೀಪ್‌ ಸಿಂಗ್‌ ಹಾಗೂ ಡ್ಯಾರಿಲ್‌ ಮಿಚೆಲ್‌ ಅವರು ಒಂದು ಕಡೆ ಕಾಣಿಸಿಕೊಂಡಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೊದಲ್ಲಿ ಅರ್ಷದೀಪ್‌ ಸಿಂಗ್‌ ಅವರು ಕಿವೀಸ್‌ ಹಿರಿಯ ಬ್ಯಾಟ್ಸ್‌ಮನ್‌ ಬಳಿ ಕ್ಷಮೆಯಾಚಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 96 ರನ್‌ಗಳ ಗೆಲುವಿನ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು.

ಅರ್ಷದೀಪ್‌-ಮಿಚೆಲ್‌ ನಡುವಣ ಘಟನೆ ಏನು?

ಭಾರತ ತಂಡ ನೀಡಿದ್ದ 256 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ ಬಹುಬೇಗ ತನ್ನ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಸಮಯ ಕಳೆದಿದ್ದ ಡ್ಯಾರಿಲ್‌ ಮಿಚೆಲ್‌ 17 ರನ್‌ ಸಿಡಿಸಿದ್ದರು. ಅಂದ ಹಾಗೆ 11ನೇ ಓವರ್‌ನಲ್ಲಿ ಅರ್ಷದೀಪ್‌ ಸಿಂಗ್‌ ಬೌಲಿಂಗ್‌ನಲ್ಲಿ ಡ್ಯಾರಿಲ್‌ ಮಿಚೆಲ್‌ ಎರಡು ಸತತ ಸಿಕ್ಸರ್‌ಗಳನ್ನು ಬಾರಿಸಿದ್ದರು. ನಂತರ ಕೆರಳಿದ ಅರ್ಷದೀಪ್‌ ಸಿಂಗ್‌ ಮುಂದಿನ ಎರಡು ಎಸೆತಗಳನ್ನು ಟಾಟ್‌ ಬಾಲ್‌ ಮಾಡಿದರು, ಬಳಿಕ ಐದನೇ ಎಸೆತದಲ್ಲಿ ವೈಡ್‌ ಯಾರ್ಕರ್‌ ಅನ್ನು ಡ್ಯಾರಿಲ್‌ ಮಿಚೆಲ್‌ ದೊಡ್ಡ ಹೊಡೆತನ್ನು ಹೊಡೆಯಲು ಹೋಗಿ ವಿಫಲರಾದರು. ಈ ವೇಳೆ ಅರ್ಷದೀಪ್‌ ಸಿಂಗ್‌ ಚೆಂಡನ್ನು ಹಿಡಿದು ಡ್ಯಾರಿಲ್‌ ಮಿಚೆಲ್‌ ಥೈಪ್ಯಾಡ್‌ಗೆ ಬಲವಾಗಿ ಹೊಡೆದರು.

IND vs NZ: ಸಂಜು ಸ್ಯಾಮ್ಸನ್‌ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ!

ಇದರಿಂದ ಆಕ್ರೋಶಭರಿತರಾದ ಡ್ಯಾರಿಲ್‌ ಮಿಚೆಲ್‌, ಯುವ ವೇಗಿಯ ಎದುರು ಕಿಡಿಕಾರಿದರು ಹಾಗೂ ಫೀಲ್ಡ್‌ ಅಂಪೈರ್‌ಗೆ ದೂರು ನೀಡಿದರು. ಈ ವೇಳೆ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಮಿಚೆಲ್‌ ಬಳಿ ಬಂದು ಸಮಾಧಾನ ಮಾಡಿದರು. ನಂತರ ಅಂಪೈರ್‌ ಯುವ ವೇಗಿಯನ್ನು ಕರೆಸಿಕೊಂಡು ಎಚ್ಚರಿಕೆ ನೀಡಿದರು. ಆದರೂ ಅರ್ಷದೀಪ್‌ ಸಿಂಗ್‌ ಬ್ಯಾಟ್ಸ್‌ಮನ್‌ ಬಳಿ ಕ್ಷಮೆ ಕೇಳಲಿಲ್ಲ. ನಂತರ ಬಲವಂತವಾಗಿ ಡ್ಯಾರಿಲ್‌ ಮಿಚೆಲ್‌ ಬಳಿ ತೆರಳಿದ ಅರ್ಷದೀಪ್‌, ಬ್ಯಾಟರ್‌ನ ಬೆನ್ನು ತವರಿ ಬಂದರು. ಅಂದ ಹಾಗೆ ಈ ಘಟನೆಯಲ್ಲಿ ಅರ್ಷದೀಪ್‌ ಸಿಂಗ್‌ ಅವರೇ ಅನಗತ್ಯವಾಗಿ ಚೆಂಡನ್ನು ಥ್ರೋ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಐಸಿಸಿ ದಂಡ ವಿಧಿಸಿದೆ.