Delhi Bomb Blast: ದೆಹಲಿಯಲ್ಲಿ ಮತ್ತೊಂದು ಭಾರೀ ಸ್ಫೋಟದ ಶಬ್ಧ- ಮತ್ತೆ ಆತಂಕ
Delhi Mahipalpur Blast Sound: ದೆಹಲಿ ಮಹಿಪಾಲ್ಪುರ್ ಪ್ರದೇಶದಲ್ಲಿ ಭಾರಿ ಸ್ಫೋಟದ ಶಬ್ಧ ಕೇಳಿಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿವೆ. ದೆಹಲಿ ಪೊಲೀಸರು ಪ್ರದೇಶವನ್ನು ಪರಿಶೀಲಿಸಿದ್ದು, ಅನುಮಾನಾಸ್ಪದ ವಸ್ತುಗಳು ಏನೂ ಕಂಡುಬಂದಿಲ್ಲ ಎಂದು ದೃಢಪಡಿಸಿದ್ದಾರೆ.
ದೆಹಲಿಯ ಮಹಿಪಾಲಪುರದಲ್ಲಿ ಕೇಳಿಬಂತು ಸ್ಫೋಟದ ಶಬ್ಧ(ಸಾಂದರ್ಭಿಕ ಚಿತ್ರ) -
ನವದೆಹಲಿ: ಗುರುವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯ ಮಹಿಪಾಲ್‌ಪುರದ ರಾಡಿಸನ್ ಬ್ಲೂ ಹೋಟೆಲ್ ಬಳಿ ಸ್ಫೋಟದ ಶಬ್ಧ ಕೇಳಿಬಂದಿದೆ (Delhi Mahipalpur Blast Sound) ಎಂದು ವರದಿಯಾಗಿದೆ. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ (Fire Engines) ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಪ್ರಕಾರ, ಅವರು ಬೆಳಗ್ಗೆ 9:18ಕ್ಕೆ ಕರೆ ಸ್ವೀಕರಿಸಿದರು. ಕೂಡಲೇ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿವೆ. ಪ್ರಸ್ತುತ, ದೆಹಲಿ ಪೊಲೀಸರು (Delhi Police) ಪ್ರದೇಶವನ್ನು ಪರಿಶೀಲಿಸಿದ್ದು, ಅನುಮಾನಾಸ್ಪದ ವಸ್ತುಗಳು ಏನೂ ಕಂಡುಬಂದಿಲ್ಲ ಎಂದು ದೃಢಪಡಿಸಿದ್ದಾರೆ.
ಮಹಿಪಾಲ್‌ಪುರದ ರಡ್ಡಿಸನ್ ಬಳಿ ಸ್ಫೋಟದ ಕರೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕರೆ ಮಾಡಿದವರನ್ನು ಸಂಪರ್ಕಿಸಲಾಯಿತು. ಕರೆ ಮಾಡಿದವರು ಗುರುಗ್ರಾಮ್‌ಗೆ ಹೋಗುವ ದಾರಿಯಲ್ಲಿದ್ದಾಗ, ದೊಡ್ಡ ಶಬ್ಧ ಕೇಳಿಸಿದೆ ಎಂದು ತಿಳಿಸಲಾಯಿತು ಎಂದು ಸೌತ್ ವೆಸ್ಟ್ ಡಿಸಿಪಿ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಧೌಲಾ ಕುವಾನ್ ಕಡೆಗೆ ಹೋಗುತ್ತಿದ್ದ ಡಿಟಿಸಿ ಬಸ್‌ನ ಹಿಂಭಾಗದ ಟೈರ್ ಸಿಡಿದಿದೆ. ಆದ್ದರಿಂದ ಶಬ್ಧ ಬಂದಿದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. ಪರಿಸ್ಥಿತಿ ಸಾಮಾನ್ಯವಾಗಿದ್ದು, ಚಿಂತಿಸುವ ಯಾವುದೇ ಅಗತ್ಯವಿಲ್ಲ ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ: Delhi Bomb Blast: ದೆಹಲಿ ಆತ್ಮಾಹುತಿ ಬಾಂಬ್ ಸ್ಫೋಟ- ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯ ಸೆರೆ, ಇಲ್ಲಿದೆ ವಿಡಿಯೊ
ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯ ಬಳಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 12 ಜನರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡ ಕೇವಲ ಮೂರು ದಿನಗಳ ನಂತರ ಇದು ಸಂಭವಿಸಿದೆ.
ದೆಹಲಿ ಬಾಂಬ್ ಸ್ಫೋಟ
ನವೆಂಬರ್ 10ರಂದು ನಡೆದ ಸ್ಫೋಟವು ಐತಿಹಾಸಿಕ ಸ್ಮಾರಕದ ಹೊರಗಿನ ಜನದಟ್ಟಣೆಯ ಬೀದಿಯಲ್ಲಿ ಸಂಭವಿಸಿತು. ಪ್ರಬಲವಾದ ಸ್ಫೋಟವು ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸಿತು. ರಾಜಧಾನಿಯ ಅತ್ಯಂತ ಜನದಟ್ಟಣೆಯ ಭಾಗಗಳಲ್ಲಿ ಒಂದಾದ ಹಳೆ ದೆಹಲಿಯಾದ್ಯಂತ ಭೀತಿಯನ್ನು ಉಂಟುಮಾಡಿತು.
ತನಿಖಾಧಿಕಾರಿಗಳು ಆರಂಭದಲ್ಲಿಯೇ ಬಾಂಬ್ ದಾಳಿ ನಡೆಸಿದವ ಡಾ. ಉಮರ್ ಎಂದು ಶಂಕಿಸಿದ್ದರು. ದಾಳಿಗೆ ಬಳಸಿದ ಬಿಳಿ ಹುಂಡೈ i20 ಕಾರನ್ನು ಸ್ಫೋಟಕ್ಕೆ ಕೇವಲ 11 ದಿನಗಳ ಮೊದಲು ಖರೀದಿಸಿದ್ದರು. ಪುಲ್ವಾಮಾ ಜಿಲ್ಲೆಯಲ್ಲಿ ಅವರ ಕುಟುಂಬದಿಂದ ತೆಗೆದುಕೊಳ್ಳಲಾದ ಡಿಎನ್ಎ ಮಾದರಿಗಳು ಕಾರಿನಿಂದ ವಶಪಡಿಸಿಕೊಂಡ ಮಾನವ ಅವಶೇಷಗಳೊಂದಿಗೆ ಹೊಂದಿಕೆಯಾಗುತ್ತವೆ. ಈ ಮೂಲಕ ಡಾ. ಉಮರ್ ಕಾರು ಚಲಾಯಿಸುತ್ತಿದ್ದ ಎಂಬುದು ದೃಢಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bomb Threat: ಖ್ಯಾತ ನಟನ ಮನೆಗೆ ಬಾಂಬ್ ಬೆದರಿಕೆ; ಹೈ ಅಲರ್ಟ್ ಘೋಷಣೆ
ಲಕ್ನೋ ಮತ್ತು ದಕ್ಷಿಣ ಕಾಶ್ಮೀರದ ನಡುವೆ ಕಾರ್ಯನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಲಾಜಿಸ್ಟಿಕ್ಸ್ ಘಟಕದೊಂದಿಗೆ ಡಾ. ಉಮರ್ ಸಂಪರ್ಕ ಹೊಂದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುಂಪಿನಲ್ಲಿ ಒಂಭತ್ತರಿಂದ ಹತ್ತು ಸದಸ್ಯರು ಸೇರಿದ್ದಾರೆ ಎಂದು ಹೇಳಲಾಗಿದ್ದು, ಅವರಲ್ಲಿ ಐದರಿಂದ ಆರು ವೈದ್ಯರು ಸೇರಿದ್ದಾರೆ. ಅವರು ತಮ್ಮ ವೈದ್ಯಕೀಯ ಅರ್ಹತೆಗಳನ್ನು ಬಳಸಿಕೊಂಡು ರಾಸಾಯನಿಕಗಳು ಮತ್ತು ಸ್ಫೋಟಕ ವಸ್ತುಗಳನ್ನು ಖರೀದಿಸಿದ್ದಾರೆ.
ಈ ಮಧ್ಯೆ, ಬುಧವಾರ ಕೇಂದ್ರ ಸಚಿವ ಸಂಪುಟವು ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟವನ್ನು ಮೊದಲ ಬಾರಿಗೆ ಭಯೋತ್ಪಾದಕ ದಾಳಿ ಎಂದು ಗುರುತಿಸಿ ನಿರ್ಣಯವನ್ನು ಅಂಗೀಕರಿಸಿತು. 12 ಜನರು ಮೃತಪಟ್ಟು, ಹಲವಾರು ಮಂದಿ ಗಾಯಗೊಂಡ ಆಘಾತಕಾರಿ ಘಟನೆ ನಡೆದಿದೆ. ಈ ಹೇಡಿತನದ ಘಟನೆಯನ್ನು ಖಂಡಿಸಿದೆ.