ಎಸ್‌ಐಆರ್ ಪರಿಶೀಲನೆ ವೇಳೆ 35 ವರ್ಷಗಳ ನಂತರ ಒಂದಾದ ಸಹೋದರರು: ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾಯ್ತು ಆ ಒಂದು ಫೋನ್ ಕರೆ
Family Reunites After 35 Years: ಮತದಾರರ ಪರಿಶೀಲನಾ ಪ್ರಕ್ರಿಯೆಯು ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾದ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ. ಬರೋಬ್ಬರಿ ಮೂರೂವರೆ ದಶಕಗಳ ನಂತರ ಇಬ್ಬರು ಸಹೋದರರು ಭೇಟಿಯಾಗಿದ್ದಾರೆ. ಸದ್ಯ ಈ ವಿಚಾರ ದೇಶದ ಗಮನ ಸೆಳೆದಿದೆ.
ಹರಿಯಾಣದಲ್ಲಿ 35 ವರ್ಷಗಳ ಬಳಿಕ ಒಂದಾದ ಸಹೋದರರು -
ಚಂಡೀಗಢ, ಸೆ. 6: ಮತದಾರರ ಪರಿಶೀಲನಾ ಪ್ರಕ್ರಿಯೆಯು (SIR Verification) ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾದ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ. ನಿಯಮಿತ ಮತದಾರರ ಪರಿಶೀಲನಾ ಪ್ರಕ್ರಿಯೆಯ ವೇಳೆ ಸುಮಾರು 35 ವರ್ಷಗಳಿಂದ ಬೇರ್ಪಟ್ಟಿದ್ದ ಇಬ್ಬರು ಸಹೋದರರು ಸರ್ಕಾರಿ ಶಾಲೆಯೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪರಿಶೀಲನಾ ಪ್ರಕ್ರಿಯೆಯ ಸಂದರ್ಭದಲ್ಲಿ, ಈ ಮರುಮಿಲನ ನಡೆದಿದೆ. ದಶಕಗಳ ಬೇರ್ಪಡಿಕೆಯ ನಂತರ ಪರಸ್ಪರ ಭೇಟಿಯಾದ ಇಬ್ಬರು ಸಹೋದರರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.
ಸೀತಾರಾಮ್ ಎಂಬವವರು ತಮ್ಮ ಪ್ರಮಾಣಪತ್ರವನ್ನು ಪಡೆಯಲು ಶಾಲೆಗೆ ಬಂದಿದ್ದರು. ಸಂವಾದದ ಸಮಯದಲ್ಲಿ, ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಕೃಷ್ಣ ಕುಮಾರ್, ಅವರ ಗ್ರಾಮ, ತಂದೆ ಮತ್ತು ಸಹೋದರನ ಬಗ್ಗೆ ವಿವರಗಳನ್ನು ಕೇಳಿದರು. ಸೀತಾರಾಮ್ ತಮ್ಮ ಸಹೋದರನ ಹೆಸರನ್ನು ಬಲ್ಬೀರ್ ಎಂದು ಉಲ್ಲೇಖಿಸಿದರು. ನಂತರ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ಬಿಎಲ್ಒ ಬಲ್ಬೀರ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿದರು.
ಸೀತಾರಾಮನ ಹೆಸರನ್ನು ಕೇಳಿದ ತಕ್ಷಣ ಬಲ್ಬೀರ್ ಗುರುತಿಸಿದರು. “ಹೌದು, ಆತ ತನ್ನ ಸಹೋದರ. 35 ವರ್ಷಗಳಿಂದ ನಾನು ಅವನನ್ನು ಹುಡುಕುತ್ತಿದ್ದೇನೆ” ಎಂದು ಬಲ್ಬೀರ್ ಫೋನ್‌ನಲ್ಲಿ ಹೇಳಿದರು. ನಂತರ ಬಲ್ಬೀರ್ ತನ್ನ ಸಹೋದರನನ್ನು ಭೇಟಿಯಾಗಲು ಶಾಲೆಗೆ ಧಾವಿಸಿದರು.
ತಾಯಿ-ಮಗನ ಪುನರ್ಮಿಲನ, ಕುಖ್ಯಾತ ಅಪರಾಧಿಯ ಬಂಧನಕ್ಕೆ ಕಾರಣವಾಯ್ತು SIR
ಕೊನೆಗೂ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾದಾಗ ಪರಸ್ಪರ ಅಪ್ಪಿಕೊಂಡು ಕಣ್ಣೀರು ಸುರಿಸಿದರು. ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ ನಂತರ ಸಹೋದರರು ಭೇಟಿಯಾದಾಗ ಅವರಿಬ್ಬರ ದುಃಖದ ಕಟ್ಟೆಯೊಡೆದಿತ್ತು. ನೆರೆದಿದ್ದವರು ಕೂಡ ಅಣ್ಣ-ತಮ್ಮನ ಬಾಂಧವ್ಯನ ಕಂಡು ಭಾವುಕರಾದರು.
ಕುಟುಂಬವು ಹಲವು ವರ್ಷಗಳಿಂದ ಸೀತಾರಾಮನಿಗಾಗಿ ಹುಡುಕುತ್ತಿತ್ತು. ಕೊನೆಗೆ ಆತನ ಸುಳಿವು ಲಭ್ಯವಾಗದೇ ಇದ್ದುದರಿಂದ ಮೃತಪಟ್ಟಿರಬಹುದು ಎಂದೇ ಭಾವಿಸಿದ್ದರು. ಸೀತಾರಾಮ್ ತನ್ನ ಸಹೋದರ ಬಲ್ಬೀರ್ ಹೆಸರನ್ನು ನೀಡಿದಾಗ ಗುರುತಿನ ಪರಿಶೀಲನೆ ಅನಿರೀಕ್ಷಿತ ತಿರುವು ಪಡೆದುಕೊಂಡಿತು.
ಅಂದಹಾಗೆ ಸೀತಾರಾಮ್ ಪಂಜಾಬ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಸರ್ಕಾರಿ ಉದ್ಯೋಗಿಯಾಗಿದ್ದರು. ಅದಕ್ಕೂ ಮೊದಲು ಅವರು ಖಾಸಗಿ ಶಾಲೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಮನೋಹರ್‌ಪುರದ ಸರ್ಕಾರಿ ಶಾಲೆಯಿಂದ ತಮ್ಮ ಶಾಲಾ ಪ್ರಮಾಣಪತ್ರವನ್ನು ಪಡೆಯಲು 35 ವರ್ಷಗಳ ನಂತರ ಅವರು ಹರಿಯಾಣಕ್ಕೆ ಹಿಂತಿರುಗಿದರು. ಪರಿಶೀಲನಾ ಪ್ರಕ್ರಿಯೆಯಲ್ಲಿ ಹಂಚಿಕೊಂಡ ಮಾಹಿತಿಯು ಅಂತಿಮವಾಗಿ ಅವರು ಕುಟುಂಬದೊಂದಿಗೆ ಮತ್ತೆ ಒಂದಾಗಲು ಕಾರಣವಾಯಿತು. ಆರು ಸಹೋದರರಲ್ಲಿ ಸೀತಾರಾಮ್ ಐದನೆಯವರು.
ಶಾಲೆಯಲ್ಲಿ ಉಪಸ್ಥಿತರಿದ್ದ ಮತ್ತೊಬ್ಬ ಅಧಿಕಾರಿ ರಮೇಶ್ ಕುಮಾರ್, ಈ ಪುನರ್ಮಿಲನವನ್ನು ಸ್ಮರಣೀಯ ಅನುಭವ ಎಂದು ಬಣ್ಣಿಸಿದರು. ಈ ಘಟನೆಯು ಕೇವಲ ಆಡಳಿತಾತ್ಮಕ ಪರಿಶೀಲನೆಯನ್ನು ಮೀರಿ, ದಶಕಗಳಿಂದ ಬೇರ್ಪಟ್ಟಿದ್ದ ಕುಟುಂಬ ಸದಸ್ಯರನ್ನು ಮತ್ತೆ ಸಂಪರ್ಕಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.