ಮಧ್ಯಪ್ರದೇಶ: ಪಾಂಗ್ರಿ ಅಣೆಕಟ್ಟು ಯೋಜನೆಯ (Pangri Dam Project) ಪರಿಣಾಮ ಭೂಮಿ ಕಳೆದುಕೊಂಡ ರೈತರು ತಮಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ (Burhanpur district ) ನಡೆದಿದೆ. ಸೊಂಟಕ್ಕೆ ಬಾಳೆ ಎಲೆ ಕಟ್ಟಿ, ತಲೆಗೆ ತೇಗದ ಎಲೆಯ ಕಿರೀಟ ಧರಿಸಿದ ರೈತರು (farmer protest) ಭೂ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದರು. 2013ರ ಭೂ ಕಾನೂನು ಗ್ರಾಮೀಣ ಭೂಸ್ವಾಧೀನಕ್ಕೆ (rural Land Acquisition Act 2013) ಹೆಚ್ಚಿನ ಪರಿಹಾರ ಮತ್ತು ಪುನರ್ವಸತಿಯ ಖಾತರಿ ನೀಡುತ್ತದೆ. ಆದರೆ ಇಲ್ಲಿನ ಪ್ರಕರಣದಲ್ಲಿ ಅದನ್ನು ಪಾಲಿಸಲಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುರ್ಹಾನ್‌ಪುರ ಜಿಲ್ಲೆಯಲ್ಲಿ ಪಾಂಗ್ರಿ ಅಣೆಕಟ್ಟು ಯೋಜನೆಯಿಂದಾಗಿ ಸಂತ್ರಸ್ತರಾಗಿರುವ ಮಧ್ಯಪ್ರದೇಶದ ರೈತರು ಸೊಂಟಕ್ಕೆ ಬಾಳೆ ಎಲೆ ಮತ್ತು ತಲೆಗೆ ತೇಗದ ಎಲೆಗಳನ್ನು ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಾ ಪರಿಹಾರಕ್ಕಾಗಿ ಆಗ್ರಹಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಗ್ರಾಮೀಣ ಪ್ರದೇಶಗಳಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಎರಡು ಪಟ್ಟು ಪರಿಹಾರ ನೀಡಬೇಕು ಎಂದು 2013ರ ಭೂಸ್ವಾಧೀನ ಕಾಯ್ದೆಯಲ್ಲಿ ಹೇಳಲಾಗಿದ್ದರೂ ಇದನ್ನು ಇಲ್ಲಿ ಪಾಲಿಸಿಲ್ಲ ಎಂದು ದೂರಿದ್ದಾರೆ.
ಕಳೆದ ಮೂರು ವರ್ಷಗಳಿಂದ ಧರಣಿ, ಮನವಿಗಳನ್ನು ನೀಡಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು. ಆಡಳಿತಕ್ಕೆ ಪದೇ ಪದೇ ಮನವಿ ಮಾಡಿದರೂ ಕೂಡ ಇಲ್ಲಿನ ರೈತರ ಸಮಸ್ಯೆಗಳು ಪರಿಹಾರವಾಗಿಲ್ಲ.ಹೀಗಾಗಿ ಇಲ್ಲಿ 2013ರ ಭೂಸ್ವಾಧೀನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ರೈತರು ಸಾಂವಿಧಾನಿಕ ರಕ್ಷಣೆಗಳನ್ನು ಸಹ ಉಲ್ಲೇಖಿಸಿರುವ ಪ್ರತಿಭಟನಾಕಾರರು, ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುವ 21 ನೇ ವಿಧಿ ಮತ್ತು ಆಸ್ತಿಯ ಹಕ್ಕನ್ನು ರಕ್ಷಿಸುವ 300A ವಿಧಿಯನ್ನು ಉಲ್ಲೇಖಿಸಿ ಪರಿಹಾರ ನೀಡುವಲ್ಲಿ ಪಾರದರ್ಶಕತೆ, ಒಪ್ಪಿಗೆ ಮತ್ತು ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿದರು.
ಶಾಲಾ ಬಾಲಕನ ಬೆನ್ನಟ್ಟಿದ ಸಾಕು ನಾಯಿಗಳು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಡಾ. ರವಿಕುಮಾರ್ ಪಟೇಲ್ ಮಾತನಾಡಿ, ಸರ್ಕಾರವು ತನ್ನ ಕಾನೂನು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು. ಇದಕ್ಕೆ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಲಸಂಪನ್ಮೂಲ ಸಚಿವ ತುಳಸಿರಾಮ್ ಸಿಲಾವತ್, ಸರ್ಕಾರ ರೈತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.