ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

“ನನಗೆ ಭಯವಿಲ್ಲ, ನಾನು 47 ವರ್ಷಗಳ ಹಿಂದೆಯೇ ಸತ್ತಿದ್ದೇನೆ”: ರಕ್ತ ಸುರಿಸುತ್ತಲೇ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಪ್ರತಿಭಟನೆ

ಇರಾನ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ನೇತೃತ್ವದ ಇಸ್ಲಾಮಿಕ್ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು 12ನೇ ದಿನಕ್ಕೂ ಮುಂದುವರಿದಿವೆ. ಪ್ರತಿಭಟನೆಗಳನ್ನು ನಿಗ್ರಹಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ವೃದ್ಧ ಮಹಿಳಾ ಪ್ರತಿಭಟನಾಕಾರರೊಬ್ಬರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇಸ್ಲಾಮಿಕ್ ಆಡಳಿತದ ವಿರುದ್ಧ ವೃದ್ಧೆಯ ಪ್ರತಿಭಟನೆ

-

Profile
Sushmitha Jain Jan 9, 2026 11:30 AM

ಇರಾನ್‌ (Iran)ನಲ್ಲಿ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ನೇತೃತ್ವದ ಇಸ್ಲಾಮಿಕ್ (Islamic) ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಇಂದಿಗೆ 12 ದಿನಕ್ಕೆ ಕಾಲಿಟ್ಟಿವೆ. ಖಮೇನಿ ಸರ್ಕಾರವು ಈ ಪ್ರತಿಭಟನೆಗಳನ್ನು ದಮನ ಮಾಡಲು ಆಡಳಿತ ಕ್ರಮಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ವೃದ್ಧ ಮಹಿಳಾ ಪ್ರತಿಭಟನಾಕಾರರೊಬ್ಬರು ಇಸ್ಲಾಮಿಕ್ ಆಡಳಿತವನ್ನು ಧಿಕ್ಕರಿಸುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ವೃದ್ಧ ಮಹಿಳೆಯು ಬಾಯಿಯಿಂದ ರಕ್ತಸ್ರಾವ ಆಗುತ್ತಿದ್ದರೂ ಲೆಕ್ಕಿಸದೇ ತೆಹರಾನ್ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಾ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತಿರುವುದು ಕಂಡುಬಂದಿದೆ. ಇದು ಖಮೇನಿ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕರ ಆಕ್ರೋಶ ಹಾಗೂ ಆರ್ಥಿಕ ಸಂಕಷ್ಟದಿಂದ ಉದ್ಭವಿಸಿರುವ ರಾಷ್ಟ್ರವ್ಯಾಪಿ ಆಂದೋಲನ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಆ ಮಹಿಳೆ “ನನಗೆ ಯಾವುದೇ ಭಯವಿಲ್ಲ. ನಾನು 47 ವರ್ಷಗಳ ಹಿಂದೆಯೇ ಸತ್ತಿದ್ದೇನೆ,” ಎಂದು ಕೂಗುತ್ತಿರುವುದು ಆ ವಿಡಿಯೋದಲ್ಲಿ ಕಾಣಿಸಿದೆ.



ಇರಾನಿನ ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾದ ಮಸೀಹ್ ಅಲಿನೇಜಾದ್ ಅವರು ಈ ವಿಡಿಯೋವನ್ನು ಸಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ನನಗೆ ಯಾವುದೇ ಭಯವಿಲ್ಲ. ನಾನು 47 ವರ್ಷಗಳ ಹಿಂದೆಯೇ ಸತ್ತಿದ್ದೇನೆ. ಇದು ಇಸ್ಲಾಮಿಕ್ ಗಣರಾಜ್ಯದಿಂದ ಬೇಸತ್ತಿರುವ ಇರಾನ್ ಮಹಿಳೆಯ ಧ್ವನಿ,” ಎಂದು ಬರೆದುಕೊಂಡಿದ್ದಾರೆ. “47 ವರ್ಷಗಳ ಹಿಂದೆ ಇಸ್ಲಾಮಿಕ್ ಗಣರಾಜ್ಯ ನಮ್ಮ ಹಕ್ಕುಗಳನ್ನು ಕಸಿದುಕೊಂಡು ಒಂದು ರಾಷ್ಟ್ರವನ್ನೇ ಒತ್ತೆಯಾಳನ್ನಾಗಿ ಮಾಡಿಕೊಂಡಿತು. ಇಂದು ಇಲ್ಲಿಯ ಜನರಿಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಈಗ ಅವರು ದೌರ್ಜನ್ಯದ ವಿರುದ್ಧ ಎದ್ದು ನಿಂತಿದ್ದಾರೆ...ಇರಾನ್ 'ಪುಟಿದೆದ್ದಿದೆ,” ಎಂದು ಮಸೀಹ್ ಅಲಿನೇಜಾದ್ ಹೇಳಿದ್ದಾರೆ.

Iran protests: ಇರಾನ್‌ನಲ್ಲಿ ಬೀದಿಗಿಳಿದ ಜನ, ಭಾರಿ ಪ್ರತಿಭಟನೆ, 7 ಮಂದಿ ಸಾವು

ಇರಾನ್‌ನಿಂದ ಗಡಿಪಾರು ಆಗಿರುವ ಯುವರಾಜ ರೇಜಾ ಪಹ್ಲವಿ ಅವರು ಗುರುವಾರ ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ್ದ ಬೆನ್ನಲ್ಲೇ ತಡರಾತ್ರಿ ಟೆಹರಾನ್‌ ಮತ್ತು ಇತರ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಖಮೇನಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದಾರೆ. ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಖಮೇನಿ ಸರ್ಕಾರ ಇಂಟರ್‌ನೆಟ್ ಹಾಗೂ ಅಂತರರಾಷ್ಟ್ರೀಯ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿತು. ಅಷ್ಟೇ ಅಲ್ಲದೇ ಇರಾನ್‌ನಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಇರಾನಿ ಸರ್ಕಾರಿ ಮಾಧ್ಯಮಗಳು ಸೀಮಿತ ಪ್ರಸಾರವನ್ನು ನೀಡುತ್ತಿವೆ. ಅಲ್ಲದೇ ದೇಶಿಯ ಹಾಗೂ ವಿದೇಶಿ ಪತ್ರಕರ್ತರು ನಿರ್ಬಂಧ ಮತ್ತು ಬಂಧನ ಭೀತಿ ಎದರಿಸುವಂತಾಗಿದೆ.

ಇನ್ನೂ ಡಿಸೆಂಬರ್ ಅಂತ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಇರಾನ್ ಭದ್ರತಾ ಪಡೆಗಳು ಎಂಟು ಅಪ್ರಾಪ್ತ ವಯಸ್ಕರು ಸೇರಿದಂತೆ ಕನಿಷ್ಠ 45 ಪ್ರತಿಭಟನಾಕಾರರನ್ನು ಕೊಂದಿವೆ ಎಂದು ನಾರ್ವೆ ಮೂಲದ ಎನ್‌ಜಿಒ ಇರಾನ್ ಮಾನವ ಹಕ್ಕುಗಳು ತಿಳಿಸಿವೆ.