ನವದೆಹಲಿ: ಕಳೆದ ಮೇ ತಿಂಗಳಲ್ಲಿ ಕಾಶ್ಮೀರದ (Kashmir) ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam terror attack) ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆ ಗಡಿ ಭಾಗದಲ್ಲಿದ್ದ ಭಾರತೀಯ ನಾಗರಿಕರ ರಕ್ಷಣೆಗೆ ಪ್ರಾಣವನ್ನು ಪಣಕ್ಕಿಟ್ಟಿದ್ದ ಸಿಐಎಸ್ ಎಫ್ (CISF) ಯೋಧರನ್ನು ಮಂಗಳವಾರ ಸಮ್ಮಾನಿಸಲಾಯಿತು. ಭದ್ರತಾ ಸಿಬ್ಬಂದಿಯ ಧೈರ್ಯ ಮತ್ತು ರಾಷ್ಟ್ರದ ಬಗೆಗಿನ ಅವರ ಬದ್ಧತೆಯನ್ನು ಗುರುತಿಸಲು ಅವರಿಗೆ ಮಹಾನಿರ್ದೇಶಕರ ಪದಕ (Director General's Disc) ನೀಡಿ ಗೌರವಿಸಲಾಯಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಉರಿಯಲ್ಲಿ ಜಲವಿದ್ಯುತ್ ಯೋಜನೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಗಡಿಯುದ್ದಕ್ಕೂ ಶೆಲ್ ದಾಳಿಗಳನ್ನು ನಡೆಸಿದೆ. ಈ ಸಂದರ್ಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಹತ್ತೊಂಬತ್ತು ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇದ್ದ ಸುಮಾರು 250 ನಾಗರಿಕರನ್ನು ಸ್ಥಳಾಂತರಿಸಿದ್ದರು.
ಇದನ್ನೂ ಓದಿ: ಗ್ರೀನ್ ಜೆಟ್ಸ್ ಕಂಪನಿ ರಾಜ್ಯಕ್ಕೆ ಬಂದರೆ ಪೂರ್ಣ ನೆರವು: ಎಂ.ಬಿ. ಪಾಟೀಲ್
ಈ ಕುರಿತು ಪ್ರಕಟಣೆ ನೀಡಿರುವ ಸಿಐಎಸ್ ಎಫ್, 2025ರ ಮೇ ತಿಂಗಳಲ್ಲಿ ತೀವ್ರವಾದ ಗಡಿಯಾಚೆಗಿನ ಶೆಲ್ ದಾಳಿಯ ವೇಳೆ ಉರಿ ಜಲ ವಿದ್ಯುತ್ ಯೋಜನೆಗಳಲ್ಲಿನ ಸಿಐಎಸ್ ಎಫ್ ತಂಡವು ಕಮಾಂಡೆಂಟ್ ರವಿ ಯಾದವ್ ನೇತೃತ್ವದಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದೆ. ಈ ಮೂಲಕ ಪ್ರಮುಖ ರಾಷ್ಟ್ರೀಯ ಸ್ವತ್ತುಗಳನ್ನು ರಕ್ಷಿಸಿತ್ತು. ತಮ್ಮ ಪ್ರಾಣಕ್ಕೆ ಅಪಾಯವಿದ್ದರೂ 250 ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದವು. ಭದ್ರತಾ ಸಿಬ್ಬಂದಿಯ ಧೈರ್ಯ ಮತ್ತು ರಾಷ್ಟ್ರದ ಬಗೆಗಿನ ಬದ್ಧತೆಯನ್ನು ಗುರುತಿಸಿ ಅವರಿಗೆ ಮಹಾನಿರ್ದೇಶಕರ ಪದಕ ನೀಡಿ ಗೌರವಿಸಲಾಗಿದೆ. ಸಿಐಎಸ್ಎಫ್ ಸಿಬ್ಬಂದಿ ರಕ್ಷಿಸಿದ ನಾಗರಿಕರಲ್ಲಿ ರಾಷ್ಟ್ರೀಯ ಜಲವಿದ್ಯುತ್ ನಿಗಮದ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸೇರಿದ್ದಾರೆ ಎಂದು ತಿಳಿಸಿದೆ.
ಘಟನೆಯ ವೇಳೆ ಸಮೀಪದಲ್ಲೇ ಅಪಾಯಕಾರಿ ಗುಂಡುಗಳು ಬೀಳುತ್ತಿದ್ದರೂ ಸಿಐಎಸ್ಎಫ್ ಸಿಬ್ಬಂದಿ ಬಂಕರ್ ಗಳನ್ನು ಬಲಪಡಿಸಿ, ವಿವಿಧ ರೀತಿಯ ವ್ಯವಸ್ಥೆಗಳ ಮೂಲಕ ಸಂವಹನ ಮಾರ್ಗಗಳನ್ನು ನಿರ್ವಹಿಸಿದ್ದರು. ಅಲ್ಲದೇ ತುರ್ತು ಸಹಾಯವನ್ನು ಒದಗಿಸಿದ್ದರು ಎಂದು ಸಿಐಎಸ್ಎಫ್ ಹೇಳಿದೆ.
ಈ ಸಂದರ್ಭದಲ್ಲಿ ಕಮಾಂಡಿಂಗ್ ಅಧಿಕಾರಿ ರವಿ ಯಾದವ್ ಅವರೊಂದಿಗೆ ಉಪ ಕಮಾಂಡೆಂಟ್ ಮನೋಹರ್ ಸಿಂಗ್, ಸಹಾಯಕ ಕಮಾಂಡೆಂಟ್ ಸುಭಾಷ್ ಕುಮಾರ್, ಇನ್ ಸ್ಪೆಕ್ಟರ್ ದೀಪಕ್ ಕುಮಾರ್ ಝಾ, ಸಬ್- ಇನ್ ಸ್ಪೆಕ್ಟರ್ ಗಳಾದ ಅನಿಲ್ ಕುಮಾರ್, ದೀಪಕ್ ಕುಮಾರ್, ಸಹಾಯಕ ಸಬ್- ಇನ್ ಸ್ಪೆಕ್ಟರ್ ಗಳಾದ ರಾಜೀವ್ ಕುಮಾರ್ ಮತ್ತು ಸುಖದೇವ್ ಸಿಂಗ್, ಹೆಡ್ ಕಾನ್ಸ್ ಟೇಬಲ್ ಗಳಾದ ಮನೋಜ್ ಕುಮಾರ್ ಶರ್ಮಾ, ರಾಮ್ ಲಾಲ್ ಮತ್ತು ಗುರ್ಜಿತ್ ಸಿಂಗ್ ಅವರಿಗೆ ಪದಕ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಪಾನ್ ಮಸಾಲಾ ಉದ್ಯಮದ ದೊರೆ ಕಮಲ್ ಕಿಶೋರ್ ಚೌರಾಸಿಯಾ ಸೊಸೆ ನೇಣು ಬಿಗಿದು ಆತ್ಮಹತ್ಯೆ
ಅಲ್ಲದೇ ಈ ಸಂದರ್ಭದಲ್ಲಿ ಕಾನ್ಸ್ ಟೇಬಲ್ ಗಳಾದ ಸುಶೀಲ್ ವಿ. ಕಾಂಬಳೆ, ರಾಝಿಕ್ ರಫೀಕ್, ರವೀಂದ್ರ ವಾಂಖೆಡೆ, ತ್ರಿದೇವ್ ಚಕ್ಮಾ, ಸೋಹನ್ ಲಾಲ್, ಮುಫೀದ್ ಅಹ್ಮದ್, ಮಹೇಶ್ ಕುಮಾರ್ ಮತ್ತು ಸಂದೇನಬೋನ ರಾಜು ಅವರಿಗೂ ಪದಕ ನೀಡಿ ಸನ್ಮಾನಿಸಲಾಗಿದೆ ಎಂದು ಸಿಐಎಸ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.