ಹೈದರಾಬಾದ್, ಸೆ.22: ಆಸ್ಪತ್ರೆಯೊಂದರ ನವಜಾತ ಶಿಶು ಆರೈಕೆ ಘಟಕದಲ್ಲಿ ಸೋಮವಾರ (ಸೆ.21) ತಡರಾತ್ರಿ ಅಗ್ನಿ ಅವಘಡ (fire accident) ಸಂಭವಿಸಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ತೆಲಂಗಾಣದ (Telangana) ಆದಿಲಾಬಾದ್‌ನಲ್ಲಿರುವ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಈ ದುರ್ಘಟನೆ ಸಂಭವಿಸಿದೆ. ವಾರ್ಡ್‌ನಿಂದ 28 ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 11.50 ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಹವಾನಿಯಂತ್ರಣ ಯಂತ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ವಾರ್ಡ್ ಸಂಪೂರ್ಣ ಜ್ವಾಲೆ ಮತ್ತು ದಟ್ಟ ಹೊಗೆಯಿಂದ ತುಂಬಿದೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ಅಗ್ನಿಶಾಮಕ ವಾಹನ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ನಿಖರವಾದ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಶಾಲೆಯಲ್ಲಿ ಭೀಕರ ದುರಂತ; ಮೆಟ್ಟಿಲಿಂದ ಆಕಸ್ಮಿಕವಾಗಿ ಬಿದ್ದು 9 ವರ್ಷದ ಬಾಲಕಿ ದುರ್ಮರಣ: ವಿಡಿಯೊ ವೈರಲ್
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮೃತಪಟ್ಟ ಶಿಶುಗಳ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಘಟನೆಯಿಂದ ತೊಂದರೆಗೊಳಗಾದ ಎಲ್ಲಾ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮತ್ತು ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶ ನೀಡಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳು ಮರುಕಳಿಸದಂತೆ ತೆಲಂಗಾಣದಾದ್ಯಂತದ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ಮತ್ತು ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಸಿಎಂ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಘಟನೆ ನಡೆದ ಸಮಯದಲ್ಲಿ ನವಜಾತ ಶಿಶು ಆರೈಕೆ ಘಟಕದಲ್ಲಿ ವಿದ್ಯುತ್ ವ್ಯವಸ್ಥೆ, ಹವಾನಿಯಂತ್ರಣ ಉಪಕರಣಗಳು ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆಗಳಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿದುಬರಲಿದೆ.
ಜಮುಯಿ ಲೈಂಗಿಕ ದೌರ್ಜನ್ಯ ಕೇಸ್: 'ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ' ಎಂದ ಬಿಹಾರ ಸಚಿವ!
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆಯಿಂದ ಭೀಕರ ಅಗ್ನಿ ಅವಘಡ
ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಳೆ ಹುಬ್ಬಳ್ಳಿಯ ಅಯೋಧ್ಯಾ ನಗರದಲ್ಲಿ ನಡೆದಿದೆ. ಪ್ರವೀಣ್ ಕಲಾಲ್ (46) ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ಕಲಾಲ್ (40) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಮನ ಕಲಾಲ್ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿದ್ದ ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.