ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಮುಯಿ ಲೈಂಗಿಕ ದೌರ್ಜನ್ಯ ಕೇಸ್: 'ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ' ಎಂದ ಬಿಹಾರ ಸಚಿವ!

ಬಿಹಾರದ ಜಮುಯಿಯಲ್ಲಿ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಸಚಿವ ಶ್ರವಣ್ ಕುಮಾರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತವೆ ಎಂದು ಸಚಿವರು ಹೇಳಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಮೂವರು ಅಪ್ರಾಪ್ತರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಘಟನೆಯನ್ನು ಖಂಡಿಸಿ, ಬಿಹಾರದ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.

ಜಮುಯಿ ಬಾಲಕಿ ಮೇಲಿನ ದೌರ್ಜನ್ಯ: ಬಿಹಾರ ಸಚಿವರ ಹೇಳಿಕೆಗೆ ಭಾರೀ ಆಕ್ರೋಶ

ಬಿಹಾರ ಸರ್ಕಾರದ ಸಚಿವ ಶ್ರವಣ್ ಕುಮಾರ್ -

Profile
Sushmitha Jain Sep 21, 2026 9:21 PM

ಬಿಹಾರ: ಬಿಹಾರ (Bihar)ದ ಜಮುಯಿ (Jamui) ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಅಮಾನವೀಯ ಲೈಂಗಿಕ ದೌರ್ಜನ್ಯ (Physical Assault)ದ ಘಟನೆಯನ್ನು ಬಿಹಾರ ಸರ್ಕಾರದ ಸಚಿವ ಶ್ರವಣ್ ಕುಮಾರ್ ( Shravan Kumar ) ಅವರು "ಪ್ರತ್ಯೇಕ ಹಾಗೂ ಅಲ್ಲಲ್ಲಿ ನಡೆಯುವ ಸಣ್ಣ ಘಟನೆ" ಎಂದು ಹೇಳಿಕೆ ನೀಡು ಮೂಲಕ ತೀವ್ರ ವಿವಾದಕ್ಕೆ ಕಾರಣರಾಗಿದ್ದಾರೆ. ಪಾಟ್ನಾ (Patna)ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರೂ, ಅವರ ಬೇಜವಾಬ್ದಾರಿ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಘಟನೆಯ ಬಗ್ಗೆ ಸಮರ್ಥನೆ ನೀಡುವ ರೀತಿಯಲ್ಲಿ ಮಾತನಾಡಿದ ಜೆಡಿಯು ಸಚಿವ ಶ್ರವಣ್ ಕುಮಾರ್, "ಪ್ರಪಂಚವು ಸಂಪೂರ್ಣವಾಗಿ ಅಪರಾಧ ಮುಕ್ತವಾಗಿಲ್ಲ. ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ರಾಜ್ಯ ಸರ್ಕಾರವು ಇಂತಹ ಪ್ರತ್ಯೇಕ ಘಟನೆಗಳ ಮೇಲೆ ಸದಾ ನಿಗಾ ಇಟ್ಟಿದೆ. ಬಿಹಾರದಲ್ಲಿ ಇಂತಹ ಕೃತ್ಯಗಳನ್ನು ಎಸಗುವವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೆಯೂ ಇಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದೆಯೂ ಕ್ರಮ ಜರುಗಿಸಲಾಗುವುದು," ಎಂದು ತಿಳಿಸಿದ್ದಾರೆ.

"ಉತ್ತರ ಪ್ರದೇಶ 4 ರಾಜ್ಯಗಳಾಗಿ ವಿಭಜನೆ ಮಾಡುವೆ ಎಂದು ಪ್ರಧಾನಿಯೇ ಭರವಸೆ ನೀಡಿದ್ದಾರೆ"; ಚರ್ಚೆ ಹುಟ್ಟಿಸಿದ ಸಚಿವರ ಹೇಳಿಕೆ

ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳುತ್ತಿದ್ದಾಗ ಪುಂಡರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ, ಬಾಲಕಿಯ ಮೇಲೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋದಲ್ಲಿ ವಿದ್ಯಾರ್ಥಿನಿ ಕೈಮುಗಿದು ಬೇಡಿಕೊಂಡರೂ ಬಿಡದ ಕಾಮುಕರು ಅವಳನ್ನು ಎಳೆದಾಡಿ, ಆಕೆಯ ಸ್ನೇಹಿತನ ಮೇಲೂ ಹಲ್ಲೆ ನಡೆಸಿರುವುದು ಕಂಡುಬಂದಿದೆ.

ಘಟನೆಯ ತೀವ್ರತೆಯನ್ನು ಪರಿಗಣಿಸಿ ಜಮುಯಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಜಮುಯಿ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ದೂರು ದಾಖಲಾಗಿದ್ದು, ವಿಡಿಯೋ ಆಧರಿಸಿ ಈಗಾಗಲೇ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಬಾಲಕಿಯ ಮೇಲೆ ನೇರವಾಗಿ ಅಸಭ್ಯವಾಗಿ ವರ್ತಿಸಿದ ಪ್ರಮುಖ ಆರೋಪಿಯ ಪತ್ತೆಗಾಗಿ ಸತತ ದಾಳಿ ಮುಂದುವರಿದಿದೆ ಎಂದು ಜಮುಯಿ ಎಸ್‌ಪಿ ತಿಳಿಸಿದ್ದಾರೆ.

ಈ ಆಘಾತಕಾರಿ ಘಟನೆಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತೀವ್ರವಾಗಿ ಖಂಡಿಸಿದ್ದು, ಇದು ಅತ್ಯಂತ ಕಳವಳಕಾರಿ ಸಂಗತಿ ಎಂದು ಹೇಳಿದ್ದಾರೆ. ಬಿಹಾರದ ಎನ್‌ಡಿಎ ಸರ್ಕಾರದ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸಿರುವ ಅವರು, ರಸ್ತೆಯಲ್ಲಿ ಓಡಾಡುವ ಬಾಲಕಿಯರಿಗೆ ರಕ್ಷಣೆಯಿಲ್ಲದಿದ್ದರೆ ಜನಸಾಮಾನ್ಯರು ಸುರಕ್ಷಿತವಾಗಿರಲು ಹೇಗೆ ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಇದು ನಮ್ಮ ಸಂಸ್ಕೃತಿಯಲ್ಲ, ಬದಲಿಗೆ ಹೆಣ್ಣುಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪುರುಷಪ್ರಧಾನ ಮನಸ್ಥಿತಿಯ ವಿಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.