ಕೊಲ್ಕತ್ತಾ: ಅಮೃತಸರದಿಂದ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಗೆ ಹೊರಟಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪಂಜಾಬ್‌ನ ರಾಜ್‌ಪುರ ಜಿಲ್ಲೆಯ (Fire Accident) ಸರೈ ಬಂಜಾರ ಮತ್ತು ಬಸಂತಪುರ ರೈಲು ನಿಲ್ದಾಣಗಳ ನಡುವೆ ಚಲಿಸುತ್ತಿದ್ದ ರೈಲಿನ ನಾಲ್ಕು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ರೈಲ್ವೆ ಸಿಬ್ಬಂದಿಯ ತಕ್ಷಣದ ತರಬೇತಿ ಮತ್ತು ರಕ್ಷಣಾ ಕಾರ್ಯದಿಂದಾಗಿ ಭಾರಿ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ರೈಲು ಚಲಿಸುತ್ತಿದ್ದಾಗ ಇಂಜಿನ್‌ನಿಂದ 5ನೇ ಬೋಗಿಯಲ್ಲಿ ಮೊದಲು ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ಪಕ್ಕದ ಇತರ ಮೂರು ಬೋಗಿಗಳಿಗೆ ವೇಗವಾಗಿ ವ್ಯಾಪಿಸಿತು. ಇದರಿಂದ ಆತಂಕಗೊಂಡ ಪ್ರಯಾಣಿಕರು ಜೀವಭಯದಿಂದ ಕಿರುಚಾಡತೊಡಗಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಲೋಕೋ ಪೈಲಟ್ ಮತ್ತು ಗಾರ್ಡ್ ರೈಲನ್ನು ಸರೈ ಬಂಜಾರ ನಿಲ್ದಾಣದ ಬಳಿ ಸ್ಥಗಿತಗೊಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಪ್ರಯಾಣಿಕರನ್ನು ಬೋಗಿಗಳಿಂದ ಸುರಕ್ಷಿತವಾಗಿ ಹೊರಗೆ ಕರೆತಂದರು. ಸದ್ಯದ ಮಾಹಿತಿಯ ಪ್ರಕಾರ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದ್ದು, ಇಲಾಖೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅವಘಡದ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಪಂಜಾಬ್‌ನಲ್ಲಿ ಸಾರ್ವಜನಿಕವಾಗಿ ಡ್ರಗ್ಸ್ ಸೇವಿಸಿದ ಬಾಲಕರು; ಮಕ್ಕಳ ಸ್ಥಿತಿ ಕಂಡು ಬೆದರಿದ ಸ್ಥಳೀಯರು, ವಿಡಿಯೋ ನೋಡಿ
ಇದಕ್ಕೂ ಮುನ್ನ ಬೆಂಗಳೂರಿನ ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ಯಾರ್ಡ್‌ನಲ್ಲಿ ನಿಲ್ಲಿಸಲಾಗಿದ್ದ ಖಾಲಿ ರೈಲು ಬೋಗಿಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ಯಾರ್ಡ್‌ನಲ್ಲಿ ತಾಂತ್ರಿಕ ದೋಷ ಅಥವಾ ಇತರೆ ಕಾರಣಗಳಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಸುಮಾರು 3 ರಿಂದ 10 ರೈಲು ಬೋಗಿಗಳು ತೀವ್ರವಾಗಿ ಹಾನಿಗೊಳಗಾಗಿದ್ದವು.