ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಡಿಶಾದಲ್ಲಿ ಪತ್ತೆಯಾದ ಒರಾಂಗುಟಾನ್ ಮರಿಗಳನ್ನು ತವರಿಗೆ ತಲುಪಲು ಬೇಕು 5-6 ವರ್ಷಗಳು; ಇಷ್ಟೊಂದು ದೀರ್ಘಾವಧಿ ಏಕೆ? ಕಾರ್ಯಾಚರಣೆ ಹೇಗಿರಲಿದೆ?

Baby Orangutans: ಒಡಿಶಾದ ಬಾಲಸೋರ್ ಜಿಲ್ಲೆಯ ಕಾಡಿನಲ್ಲಿ ಪತ್ತೆಯಾದ ಐದು ಒರಾಂಗುಟಾನ್ (ಕಪಿ ಜಾತಿಗೆ ಸೇರಿದ ಪ್ರಾಣಿ) ಮರಿಗಳನ್ನು ಸದ್ಯ ಭುವನೇಶ್ವರದ ನಂದನಕಾನನ್ ಮೃಗಾಲಯದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅವುಗಳ ಮೂಲ ನೆಲೆಯಾಗಿರುವ ಇಂಡೋನೇಷ್ಯಾ ಅಥವಾ ಮಲೇಷ್ಯಾಕ್ಕೆ ಮರಳಿಸುವ ಪ್ರಕ್ರಿಯೆ ದೀರ್ಘವಾಗಿದ್ದು, ಕ್ವಾರಂಟೈನ್, ಆರೋಗ್ಯ ತಪಾಸಣೆ, ಪುನರ್ವಸತಿ ಮತ್ತು ನೈಸರ್ಗಿಕ ಪರಿಸರಕ್ಕೆ ಹೊಂದಿಕೊಳ್ಳುವ ತರಬೇತಿ ಸೇರಿ ಸಂಪೂರ್ಣ ಪ್ರಕ್ರಿಯೆಗೆ ಐದರಿಂದ ಆರು ವರ್ಷಗಳು ಬೇಕಾಗಬಹುದು. ಇದೇ ವೇಳೆ ಅವು ಭಾರತಕ್ಕೆ ಹೇಗೆ ಬಂದವು ಎಂಬುದರ ಕುರಿತು ವನ್ಯಜೀವಿ ಕಳ್ಳಸಾಗಣೆ ಶಂಕೆಯೂ ತನಿಖೆಯಲ್ಲಿದೆ.

ಒಡಿಶಾದ ಕಾಡಿನಲ್ಲಿ ಪತ್ತೆಯಾದ ಒರಾಂಗುಟಾನ್ ಮರಿಗಳು

ಭುವನೇಶ್ವರ, ಸೆ. 11: ಒಡಿಶಾದ (Odisha) ಬಾಲಸೋರ್ ಜಿಲ್ಲೆಯ ಕಾಡಿನಲ್ಲಿ ಪತ್ತೆಯಾದ ಐದು ಒರಾಂಗುಟಾನ್ (ಕಪಿ ಜಾತಿಗೆ ಸೇರಿದ ಪ್ರಾಣಿ) ಮರಿಗಳನ್ನು ರಕ್ಷಿಸಿದ ಬಳಿಕ ಅವು ಭಾರತಕ್ಕೆ ಹೇಗೆ ಬಂದವು ಎಂಬ ಪ್ರಶ್ನೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಡುವೆ ಅವುಗಳನ್ನು ಅವುಗಳ ಮೂಲ ನೆಲೆಯಾಗಿರುವ ಆಗ್ನೇಯ ಏಷ್ಯಾಕ್ಕೆ ವಾಪಸ್ ಕಳುಹಿಸಬಹುದೇ ಎಂಬ ಪ್ರಶ್ನೆಯೂ ಎದುರಾಗಿದೆ. ಈ ಕಪಿಗಳು ಮುಖ್ಯವಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಕಂಡುಬರುತ್ತವೆ. ಇವು ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿಗಳಾಗಿದ್ದು, ಅವುಗಳನ್ನು ತವರಿಗೆ ಮರಳಿಸುವುದು ಸರಳ ಪ್ರಕ್ರಿಯೆಯಲ್ಲ. ಇದಕ್ಕೆ ಧೀರ್ಘ ಸಮಯ ಹಿಡಿಯುತ್ತದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ಇಂಡೋನೇಷ್ಯಾದ ಜಕಾರ್ತಾದ ಕಪಿಗಳ ಸಂರಕ್ಷಣಾ ಕೇಂದ್ರದ ಸಹಾಯಕ ನಿರ್ದೇಶಕಿ ಇಂದಿರಾ ನೂರುಲ್ ಕ್ವೊಮಾರಿಯಾಹ್ ಈ ಕುರಿತು ಇಂಡೋನೇಷ್ಯಾದ ಅರಣ್ಯ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.

ಭಾರತ ಮತ್ತು ಇಂಡೋನೇಷ್ಯಾ ಸರ್ಕಾರಗಳು ಒಪ್ಪಿಗೆ ನೀಡಿದರೆ, ರಕ್ಷಿಸಲ್ಪಟ್ಟ ಒರಾಂಗುಟಾನ್‌ಗಳ ಪುನರ್ವಸತಿ ಪ್ರಕ್ರಿಯೆಗೆ ಬೆಂಬಲ ನೀಡುವುದಾಗಿ ಇಂಡೋನೇಷ್ಯಾ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತವರಿಗೆ ಮರಳಿಸುವ ಪ್ರಕ್ರಿಯೆ ದೀರ್ಘವಾಗಿರಲಿದ್ದು, ಅಂತಾರಾಷ್ಟ್ರೀಯ ವನ್ಯಜೀವಿ ವ್ಯಾಪಾರ ನಿಯಂತ್ರಣ ಸಂಸ್ಥೆ, ಗಡಿ ತಪಾಸಣಾ ತಂಡಗಳು, ಕಸ್ಟಮ್ಸ್ ಇಲಾಖೆ ಹಾಗೂ ವಿಮಾನಯಾನ ಸಂಸ್ಥೆಗಳು ಸೇರಿ ಹಲವು ಸಂಸ್ಥೆಗಳು ಇದರಲ್ಲಿ ಭಾಗಿಯಾಗಲಿವೆ.

ಒಡಿಶಾ ಕಾಡಿನಲ್ಲಿ ಸ್ಥಳೀಯವಲ್ಲದ 5 ಅಪರೂಪದ ಒರಾಂಗುಟಾನ್ ಪತ್ತೆ

ಇಂಡೋನೇಷ್ಯಾ ತಲುಪಿದ ಬಳಿಕ ಮೊದಲು ಕ್ವಾರಂಟೈನ್‌ನಲ್ಲಿ ಇರಿಸಿ, ಗಾಯಗಳು ಮತ್ತು ರೋಗಗಳಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ನಂತರ ಅವುಗಳನ್ನು ಅರಣ್ಯ ತರಬೇತಿ ಕೇಂದ್ರಕ್ಕೆ ಕರೆದೊಯ್ದು ನೈಸರ್ಗಿಕ ಪರಿಸರಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಲಾಗುತ್ತದೆ.

ಬೊರ್ನಿಯೋ ಅಥವಾ ಸುಮಾತ್ರಾದ ಕಾಡಿನ ಪರಿಸರಕ್ಕೆ ಹೊಂದಿಕೊಂಡ ಬಳಿಕ, ಇತರ ಕಪಿಗಳೊಂದಿಗೆ ಬೆರೆಯಲು ಅವಕಾಶ ನೀಡಲಾಗುತ್ತದೆ. ಸಂಪೂರ್ಣವಾಗಿ ಪರಿಸರಕ್ಕೆ ಹೊಂದಿಕೊಂಡ ನಂತರವೇ ಅವುಗಳನ್ನು ನೈಸರ್ಗಿಕ ಕಾಡಿಗೆ ಬಿಡಲಾಗುತ್ತದೆ. ಈ ಸಂಪೂರ್ಣ ಪುನರ್ವಸತಿ ಪ್ರಕ್ರಿಯೆಗೆ ಐದುರಿಂದ ಆರು ವರ್ಷಗಳು ಬೇಕಾಗಬಹುದು ಎಂದು ಕ್ವೊಮಾರಿಯಾಹ್ ತಿಳಿಸಿದ್ದಾರೆ.

ಕಳ್ಳಸಾಗಣೆ ಶಂಕೆ

ಸದ್ಯ ಐದು ಮರಿಗಳು ಭುವನೇಶ್ವರದ ನಂದನಕಾನನ್ ಮೃಗಾಲಯದಲ್ಲಿ ಕ್ವಾರಂಟೈನ್‌ನಲ್ಲಿವೆ. ಮಂಗಳವಾರ ಬಾಲಸೋರ್ ಜಿಲ್ಲೆಯ ಕಾಡಿನಲ್ಲಿ ಅವುಗಳನ್ನು ರಕ್ಷಿಸಲಾಗಿತ್ತು. ಈ ಕಪಿಗಳು ಕಾಡಿಗೆ ತಲುಪಿದ ರೀತಿಯ ಕುರಿತು ತನಿಖೆ ನಡೆಯುತ್ತಿದೆ. ಅವು ಪತ್ತೆಯಾಗುವ ಹಿಂದಿನ ರಾತ್ರಿ ಕಪ್ಪು ಬಣ್ಣದ ವಾಹನವು ಕಾಡಿನ ಸಮೀಪ ಕಂಡುಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಧಿಕಾರಿಗಳು ಈ ಪ್ರದೇಶದ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕಪಿಗಳು ಭಾರತಕ್ಕೆ ಹೇಗೆ ಬಂದವು ಮತ್ತು ಅವುಗಳ ಹಿಂದೆ ವನ್ಯಜೀವಿ ಕಳ್ಳಸಾಗಣೆ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.