ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಷಕಾರಿ ಸಿರಪ್ ಕುಡಿದರೂ ಬದುಕುಳಿದ 5 ವರ್ಷದ ಬಾಲಕ! 115 ದಿನಗಳ ಜೀವನ್ಮರಣದ ಹೋರಾಟದ ಬಳಿಕ ದೃಷ್ಟಿಯೇ ಹೋಯ್ತು

ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ಸೇವಿಸಿ ತೀವ್ರ ಅಸ್ವಸ್ಥಗೊಂಡ ಮಕ್ಕಳಲ್ಲಿ ಮಧ್ಯ ಪ್ರದೇಶದ ಛಿಂದ್ವಾಡಾ ಜಿಲ್ಲೆಯ ಜಟಛಾಪರ್ ಗ್ರಾಮದ ಬಾಲಕ ಕುನಾಲ್ ಯದುವಂಶಿ ಪವಾಡ ಸದೃಶವಾಗಿ ಬದುಕುಳಿದು ಬಂದಿದ್ದಾನೆ. ಕುನಾಲ್ ತಿಂಗಳಾನುಗಟ್ಟಲೆ ಚಿಕಿತ್ಸೆ, ದೀರ್ಘಕಾಲದ ಡಯಾಲಿಸಿಸ್ ಮತ್ತು ನಿರಂತರ ವೈದ್ಯಕೀಯ ಆರೈಕೆಯ ಫಲವಾಗಿ ಚೇತರಿಸಿಕೊಂಡಿದ್ದಾನೆ.

ಸಿರಪ್‌ನಿಂದ ದೃಷ್ಟಿ ಕಳೆದುಕೊಂಡ ಬಾಲಕ

ಭೋಪಾಲ್‌, ಡಿ. 25: ಮಧ್ಯ ಪ್ರದೇಶದಲ್ಲಿ(Madhya Pradesh) ವಿಷಕಾರಿ ಕೆಮ್ಮಿನ ಸಿರಪ್ (poisonous cough syrup) ಸೇವಿಸಿ 24 ಮಕ್ಕಳು ಪ್ರಾಣ ಕಳೆದುಕೊಂಡ ದುರಂತ ಕೆಲವು ದಿನಗಳ ಹಿಂದೆ ನಡೆದು ದೇಶವೇ ಬೆಚ್ಚಿ ಬಿದ್ದಿತ್ತು. ಅದೇ ವಿಷಕಾರಿ ಸಿರಪ್ ಸೇವಿಸಿದ ಒಬ್ಬ ಬಾಲಕ ಸುಮಾರು 115 ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಡಿ ಬದುಕುಳಿದಿದ್ದಾನೆ. ಆದರೆ ಜವರಾಯನ ಪಂಜರದಿಂದ ಪಾರಾದರೂ ಆ ನತದೃಷ್ಟ ಬಾಲಕನ ಬಾಳಲ್ಲಿ ಇದೀ ಕತ್ತಲೆ ಆವರಿಸಿದೆ.

ಹೌದು, ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ಸೇವಿಸಿ ತೀವ್ರ ಅಸ್ವಸ್ಥಗೊಂಡ ಮಕ್ಕಳಲ್ಲಿ ಛಿಂದ್ವಾಡಾ ಜಿಲ್ಲೆಯ ಜಟಛಾಪರ್ ಗ್ರಾಮದ 5 ವರ್ಷದ ಬಾಲಕ ಕುನಾಲ್ ಯದುವಂಶಿ ಕೂಡ ಒಬ್ಬ. 24 ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡರೆ, ಕುನಾಲ್ ಮಾತ್ರ ತಿಂಗಳಾನುಗಟ್ಟಲೆ ಚಿಕಿತ್ಸೆ, ದೀರ್ಘಕಾಲದ ಡಯಾಲಿಸಿಸ್ ಮತ್ತು ನಿರಂತರ ವೈದ್ಯಕೀಯ ಆರೈಕೆಯ ನಂತರ ಬದುಕುಳಿದಿದ್ದಾನೆ.

ಇದೀಗ ಆತ ಮರಳಿ ಮನೆಗೆ ಬಂದಿದ್ದು, ಮೂರು ತಿಂಗಳಿಗೂ ಹೆಚ್ಚು ಕಾಲ ಮೌನ ಆವರಿಸಿದ್ದ ಮನೆಯೊಳಗೆ ಮತ್ತೆ ಸಂಭ್ರಮ ಮನೆ ಮಾಡಿದೆ. ಆದರೆ ಜೀವನ್ಮರಣದ ಹೋರಾಟದಲ್ಲಿ ಕುನಾಲ್‌ಗೆ ಗೆಲುವಾದರೂ, ವಿಷಕಾರಿ ಸಿರಪ್‌ನಿಂದಾಗಿ ಆತ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾನೆ. ಇದೀಗ ಅವನು ನಡೆದಾಡಲೂ ತೊಂದರೆ ಅನುಭವಿಸುತ್ತಿದ್ದು, ಆತ ಚೇತರಿಸಿಕೊಳ್ಳಲು ಬಹು ಸಮಯ ತೆಗೆದುಕೊಳ್ಳಬಹುದು ಅಥವಾ ಚೇತರಿಸಿಕೊಳ್ಳದೇಯೂ ಇರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಚಿತ್ರದುರ್ಗ ಬಸ್‌ ಅಪಘಾತದಲ್ಲಿ ಇಬ್ಬರು ಮಹಿಳಾ ಟೆಕ್ಕಿಗಳು ಕಣ್ಮರೆ

ಆಗಸ್ಟ್ 24ರಂದು ಕುನಾಲ್‌ಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಪೋಷಕರು ಅವನನ್ನು ಸ್ಥಳೀಯ ವೈದ್ಯ ಡಾ. ಪ್ರವೀಣ್ ಸೋನಿ ಅವರ ಬಳಿಗೆ ಕರೆದೊಯ್ದಿದ್ದರು. ಅವರು ಕೆಲ ಔಷಧ ಹಾಗೂ ಕೆಮ್ಮು ಸಿರಪ್ ಅನ್ನು ಬರೆದುಕೊಟ್ಟಿದ್ದರು. ಆ ಔಷಧ ಹಾಗೂ ಸಿರಪ್ ಸೇವಿಸಿದ ಬಳಿಕ ಕುನಾಲ್ ಸ್ಥಿತಿ ಚೇತರಿಸಿಕೊಳ್ಳುವ ಬದಲು, ವೇಗವಾಗಿ ಹದಗೆಟ್ಟಿತು. ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ, ಆ ಸಿರಪ್ ಕುನಾಲ್ ಎರಡೂ ಮೂತ್ರಪಿಂಡಗಳಿಗೆ ಗಂಭೀರ ಹಾನಿ ಉಂಟುಮಾಡಿದ್ದು, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂತು.

ಕುನಾಲ್ ಸ್ಥಿತಿ ಮತ್ತಷ್ಟು ಗಂಭೀರವಾದಾಗ ಆಗಸ್ಟ್ 30ರಂದು ತಂದೆ ಟಿಕ್ಕು ಯಾದವಂಶಿ ಆತನನ್ನು ನಾಗ್ಪುರಕ್ಕೆ ಕರೆತಂದು, ಏಮ್ಸ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು. ಸುಮಾರು ಒಂದೂವರೆ ತಿಂಗಳ ಕಾಲ ಆ ಮಗು ಪ್ರತಿದಿನ ನೋವಿನ ಡಯಾಲಿಸಿಸ್ ಚಿಕಿತ್ಸೆ ಅನುಭವಿಸಬೇಕಾಯಿತು. ಆ ವಿಷಕಾರಿ ಸಿರಪ್‌ನಿಂದ ಮೂತ್ರಪಿಂಡಗಳಿಗೆ ಉಂಟಾದ ಭಾರಿ ಹಾನಿಯನ್ನು ಗಮನಿಸಿದ ವೈದ್ಯರು, ಕುನಾಲ್ ಬದುಕುವ ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಿದ್ದರು. ಇಷ್ಟಾದರೂ ಜೀವನ್ಮರಣದ ನಡುವೆ ಹೋರಾಟ ನಡೆಸಿ 115 ದಿನಗಳ ತೀವ್ರ ಚಿಕಿತ್ಸೆಯ ನಂತರ, ಕೊನೆಗೂ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾನೆ.

ವೈದ್ಯರ ಪ್ರಕಾರ, ವಿಷಕಾರಿ ಸಿರಪ್‌ನಿಂದಾಗಿ ಕುನಾಲ್ ಕಣ್ಣುಗಳಿಗೂ ತೀವ್ರ ಹಾನಿಯಾಗಿದ್ದು, ದೃಷ್ಟಿ ನಷ್ಟವಾಗಿದೆ. ನರವ್ಯವಸ್ಥೆಯ ಮೇಲೂ ಅದರ ಪರಿಣಾಮ ಉಂಟಾಗಿದ್ದು, ಅವನ ಚಲನೆಯ ಮೇಲೂ ಪರಿಣಾಮ ಬೀರಿದೆ. ಆದರೂ, ಕುನಾಲ್‌ ಬದುಕುಳಿದಿರುವುದು ಆತನ ಕುಟುಂಬಕ್ಕೆ ಒಂದು ಅದ್ಭುತವೆನಿಸಿದೆ.

“ಪ್ರತಿದಿನವೂ ಆತ ನಮ್ಮ ಕೈಗಳಿಂದ ಜಾರಿ ಹೋಗುತ್ತಿದ್ದ. ನಾವು ಬಹುತೇಕ ಭರವಸೆಯನ್ನೇ ಕಳೆದುಕೊಂಡಿದ್ದೆವು. ಈಗ ಅವನು ನಮ್ಮ ಜತೆಗಿದ್ದಾನೆ. ಕಣ್ಣು ಕಾಣದಿದ್ದರೂ, ಅವನು ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ ಎಂಬ ನಂಬಿಕೆ ನಮಗಿದೆ" ಎಂದು ಅವನ ತಂದೆ ಹೇಳಿದ್ದಾರೆ.