ನವದೆಹಲಿ,ಫೆ.1: 2026-27ರ ಕೇಂದ್ರ ಬಜೆಟ್(Union Budget 2026) ಮಂಡನೆಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಸಚಿವೆ ಪಂಕನ್ ಚೌಧರಿ ಕರ್ತವ್ಯ ಭವನಕ್ಕೆ ಆಗಮಿಸಿದರು. ಇಂದು ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್(Nirmala Sitharaman Kanjeevaram saree) ಬಜೆಟ್ ಮಂಡನೆ ಮಾಡಲಿದ್ದಾರೆ. ಅಮೆರಿಕದ ಸುಂಕ ಹೇರಿಕೆಯಿಂದ ಭಾರತದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರದಂತೆ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ಮಧ್ಯೆ ಸಮನ್ವಯ ಕಾಯ್ದುಕೊಳ್ಳುವ ಉಪಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಬಜೆಟ್ ನಿರೀಕ್ಷೆಗಿಂತ ಈ ಬಾರಿ ನಿರ್ಮಲಾ ಸೀತಾರಾಮನ್ ಧರಿಸಿದ ಸೀರೆ ಯಾವುದು ಎಂಬ ಕುತೂಹಲ ನೆಟ್ಟಿಗರಲ್ಲಿ ಹೆಚ್ಚಾಗಿದೆ. ಈ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿದೆ.
ಹೌದು, ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಕೈಯಿಂದ ನೇಯ್ದ ಕಾಂಚೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದಾರೆ. ಈ ಸೀರೆ ತಮಿಳುನಾಡಿನ ಇತಿಹಾಸ ಮತ್ತು ನೇಯ್ಗೆಯೊಂದಿಗಿನ ಸಂಪರ್ಕದ ಪ್ರತಿಬಿಂಬವಾಗಿದೆ. ಈ ಮೂಲಕ ತಮ್ಮ ತವರು ರಾಜ್ಯವಾದ ತಮಿಳುನಾಡಿನ ಪ್ರಾಚೀನ ಸಾಂಸ್ಕೃತಿಕ ಪರಂಪರೆಗೆ ಗೌರವ ಸೂಚಿಸಿದ್ದಾರೆ. ನೇರಳೆ ಬಣ್ಣದ ಸೀರೆಯು ಚಿನ್ನದ ಬಣ್ಣದ ಚೆಕ್‌ಗಳು ಮತ್ತು ಕಂದು ಬಣ್ಣದ ಗಡಿಗಳೊಂದಿಗೆ ಸೂಕ್ಷ್ಮವಾಗಿ ಕಾಣುತ್ತದೆ. ಳೆದ ವರ್ಷ, ಸೀತಾರಾಮನ್ ಅವರು ಬಿಹಾರದ ಮಧುಬನಿ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ಪದ್ಮಶ್ರೀ ಪುರಸ್ಕೃತ ದುಲಾರಿ ದೇವಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಈ ವರ್ಷದ ಕೊನೆಯಲ್ಲಿ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ದಕ್ಷಿಣ ರಾಜ್ಯದಲ್ಲಿ ಸರ್ಕಾರವನ್ನು ರಚಿಸುವ ಆಶಯವನ್ನು ಬಿಜೆಪಿ ಹೊಂದಿದ್ದು, ಅದಕ್ಕೆ ಪೂರಕವಾಗಿ ನಿರ್ಮಲಾ ಅವರು ತಮಿಳುನಾಡಿನ ಪ್ರಸಿದ್ಧ ಕಾಂಚೀವರಂ ಸೀರೆ ತೊಟ್ಟಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಕೂಡ ಪೊಂಗಲ್ ಆಚರಣೆ ಮಾಡಿದರು.
ಬಜೆಟ್ ಭಾನುವಾರ ಮಂಡನೆ ಆಗುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೆಯ ಬಾರಿ ಆಗಿದೆ. 1999ರ ಫೆಬ್ರುವರಿ 28ರಂದು ಅಂದಿನ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಅವರು ಬಜೆಟ್ ಮಂಡಿಸಬೇಕಿತ್ತು. ಆದರೆ, ಅಂದು ಭಾನುವಾರವಾದ್ದರಿಂದ, ಒಂದು ದಿನ ಮುಂಚಿತವಾಗಿ ಫೆಬ್ರುವರಿ 27ರಂದು ಅವರು ಬಜೆಟ್ ಮಂಡಿಸಿದ್ದರು.