ರಾಯ್ಪುರ: ಛತ್ತೀಸ್‌ಗಢದ (Chhattisgarh) ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಜೈರಾಮ್‌ನಗರ ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲು ಸರಕು ರೈಲಿಗೆ ಡಿಕ್ಕಿ (Train Accident) ಹೊಡೆದಿದೆ. ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಥಳೀಯ ಪ್ಯಾಸೆಂಜರ್ ರೈಲು ಮತ್ತು ಸರಕು ರೈಲು ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಕ್ಷಣಾ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳ ರಕ್ಷಣೆ ನಡೆಯುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಗೆವ್ರಾ ರಸ್ತೆಯಿಂದ ಬಿಲಾಸ್ಪುರಕ್ಕೆ ಪ್ರಯಾಣಿಸುತ್ತಿದ್ದ ಮೆಮು ಸ್ಥಳೀಯ ರೈಲು (ಸಂಖ್ಯೆ 68733) ಇಂದು ಸಂಜೆ 4 ಗಂಟೆ ಸುಮಾರಿಗೆ ಗಟೋರಾ ಮತ್ತು ಬಿಲಾಸ್ಪುರ ನಡುವಿನ ಮೇಲ್ಮುಖ ಮಾರ್ಗದಲ್ಲಿ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಈ ಮಾರ್ಗದಲ್ಲಿ ರೈಲು ಸೇವೆಗಳನ್ನು ನಿಲ್ಲಿಸಲಾಗಿದೆ ಮತ್ತು ಹಲವಾರು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಡಿಕ್ಕಿಯ ನಂತರ ಕೊರ್ಬಾ ಪ್ಯಾಸೆಂಜರ್ ರೈಲಿನ ಮೊದಲ ಬೋಗಿ ಸರಕು ರೈಲಿಗೆ ಹತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತುರ್ತು ತಂಡಗಳನ್ನು ರವಾನಿಸಿದ್ದು, ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಲಾಗಿದೆ. ಗಾಯಗೊಂಡ ಪ್ರಯಾಣಿಕರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಕ್ಕಿಯ ನಂತರ ಓವರ್‌ಹೆಡ್ ವೈರಿಂಗ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳು ತೀವ್ರವಾಗಿ ಹಾನಿಗೊಳಗಾದವು. ತಾಂತ್ರಿಕ ತಂಡಗಳು ದುರಸ್ತಿ ಮತ್ತು ಹಳಿ ತೆರವುಗೊಳಿಸುವ ಕೆಲಸದಲ್ಲಿ ತೊಡಗಿವೆ. ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೆ ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.