Narendra Modi: ಭಾರತದ ಶಾಂತಿ ಪ್ರಯತ್ನಗಳಿಗೆ ಪಾಕ್‌ನಿಂದ ಅಡ್ಡಗಾಲು; ಪ್ರಧಾನಿ ಮೋದಿ ವಾಗ್ದಾಳಿ
Narendra Modi: ಶಾಂತಿಯನ್ನು ಬೆಳೆಸುವ ಭಾರತದ ಪ್ರತಿಯೊಂದು ಪ್ರಯತ್ನವನ್ನು ಪಾಕ್ ಹೇಗೆ ಹಗೆತನ ಮತ್ತು ದ್ರೋಹದಿಂದ ಎದುರಿಸಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಮೆರಿದ ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ಮಾತನಾಡಿದ್ದಾರೆ.


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿದ ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು (Lex Fridman Podcast). ಶಾಂತಿಯನ್ನು ಬೆಳೆಸುವ ಭಾರತದ ಪ್ರತಿಯೊಂದು ಪ್ರಯತ್ನವನ್ನು ಪಾಕ್ ಹೇಗೆ ಹಗೆತನ ಮತ್ತು ದ್ರೋಹದಿಂದ ಎದುರಿಸಿದೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. 2014ರಲ್ಲಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಆಹ್ವಾನಿಸಿದ್ದನ್ನು ನೆನಪಿಸಿಕೊಂಡ ಮೋದಿ, ಇದು ಭಾರತ-ಪಾಕಿಸ್ತಾನ ಸಂಬಂಧಕ್ಕೆ ಹೊಸ ಆರಂಭವನ್ನು ನೀಡಬಹುದು ಎಂಬ ಆಶಯ ಹೊಂದಿದ್ದಾಗಿ ತಿಳಿಸಿದರು.
"ಶಾಂತಿಯನ್ನು ಹರಡುವ ನಮ್ಮ ಪ್ರತಿಯೊಂದು ಉದಾತ್ತ ಪ್ರಯತ್ನವನ್ನೂ ಪಾಕ್ ಹಗೆತನ ಮತ್ತು ದ್ರೋಹದಿಂದ ಎದುರಿಸಿದೆ. ಅವರು ಇನ್ನಾದರೂ ಶಾಂತಿಯ ಮಾರ್ಗವನ್ನು ಆರಿಸುತ್ತಾರೆ ಎಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ" ಎಂದು ಮೋದಿ ಹೇಳಿದರು. ʼʼಪಾಕಿಸ್ತಾನದ ಜನರು ಸಹ ಶಾಂತಿಗಾಗಿ ಹಂಬಲಿಸುತ್ತಿದ್ದಾರೆ ಎನ್ನುವುದು ನನ್ನ ಅನಿಸಿಕೆ. ಯಾಕೆಂದರೆ ಅವರು ಕಲಹ, ಅಶಾಂತಿ ಮತ್ತು ನಿರಂತರ ಭಯೋತ್ಪಾದನೆಯಿಂದ ಬೇಸತ್ತು ಹೋಗಿದ್ದಾರೆʼʼ ಎಂದು ಪ್ರಧಾನಿ ಹೇಳಿದರು.
ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕ್ಯಾಸ್ಟ್ ಇಲ್ಲಿದೆ
ಸಂಬಂಧ ವೃದ್ಧಿಗೆ ಶ್ರಮಿಸಿದ್ದ ಮೋದಿ
ಇದೇ ವೇಳೆ ಮೋದಿ ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗಾಗಿ ತಾವು ಕೈಗೊಂಡ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸಲು ಕೈಗೊಂಡ ಉಪಕ್ರಮಗಳ ಬಗ್ಗೆ ಮಾತನಾಡಿದ ಅವರು ಇದು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Lex Fridman Podcast: ಟೀಕೆ ಪ್ರಜಾಪ್ರಭುತ್ವದ ಆತ್ಮ; ಲೆಕ್ಸ್ ಫ್ರಿಡ್‌ಮನ್ ಪಾಡ್‌ಕ್ಯಾಸ್ಟ್‌ನಲ್ಲಿ ಮೋದಿ ಅಭಿಮತ
ಭಾರತದ ವಿಭಜನೆಯ ಕರಾಳ ಇತಿಹಾಸವನ್ನು ಪ್ರಸ್ತಾವಿಸಿದ ಅವರು, ಅದು ಹೇಗೆ ಎರಡು ದಾಯಾದಿಗಳನ್ನು ಹುಟ್ಟುಹಾಕಿತು ಎಂಬುದನ್ನು ತಿಳಿಸಿದರು. ವಿಭಜನೆಗೆ ಒಪ್ಪಿದ್ದು, ವಿಭಜನೆ ಬಳಿಕ ಹಿಂಸಾಕೃತ್ಯಗಳು ಸಂಭವಿಸಿದ್ದರ ಬಗ್ಗೆ ಮಾಹಿತಿ ನೀಡಿದರು.
"ಅವರು ಪ್ರತ್ಯೇಕ ರಾಷ್ಟ್ರವನ್ನು ರಚಿಸುವ ಮುಸ್ಲಿಂ ಕಡೆಯ ಬೇಡಿಕೆಯನ್ನು ಒಪ್ಪಿಕೊಂಡರು. ದುಃಖ ಮತ್ತು ಕಣ್ಣೀರಿನಿಂದ, ಭಾರವಾದ ಹೃದಯಗಳೊಂದಿಗೆ ಭಾರತೀಯರು ಈ ನೋವಿನ ವಾಸ್ತವವನ್ನು ಒಪ್ಪಿಕೊಂಡರು. ಬಳಿಕ ತೆರೆದುಕೊಂಡಿದ್ದು ಹೃದಯ ವಿದ್ರಾವಕ ರಕ್ತಪಾತದ ಕಥೆ. ರಕ್ತಸಿಕ್ತ, ಗಾಯಗೊಂಡ ಜನರು ಮತ್ತು ಶವಗಳಿಂದ ತುಂಬಿದ ರೈಲುಗಳು ಪಾಕಿಸ್ತಾನದಿಂದ ಬರಲು ಪ್ರಾರಂಭಿಸಿದವು. ಅದೊಂದು ಭಯಾನಕ ದೃಶ್ಯವಾಗಿತ್ತು. ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡ ನಂತರ, ಅವರು ಬದುಕುತ್ತಾರೆ ಮತ್ತು ನಮ್ಮನ್ನು ಬದುಕಲು ಬಿಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಅವರು ಸಾಮರಸ್ಯದ ಸಹಬಾಳ್ವೆಯನ್ನು ಬೆಳೆಸದಿರಲು ನಿರ್ಧರಿಸಿದರು. ಅವರು ನಮ್ಮ ವಿರುದ್ಧ ನಿರಂತರವಾಗಿ ಪರೋಕ್ಷ ಯುದ್ಧವನ್ನು ನಡೆಸುತ್ತಿದ್ದಾರೆ" ಎಂದು ಪ್ರಧಾನಿ ಹೇಳಿದರು.
ಪಾಕಿಸ್ತಾನದ ನಡವಳಿಕೆಯನ್ನು ಸಿದ್ಧಾಂತ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು. "ರಕ್ತಪಾತ ಮತ್ತು ಭಯೋತ್ಪಾದನೆಯ ಮೇಲೆ ಯಾವ ರೀತಿಯ ಸಿದ್ಧಾಂತವು ಬೆಳೆಯುತ್ತದೆ? ಈ ಪಿಡುಗಿಗೆ ನಾವು ಮಾತ್ರ ಬಲಿಪಶುಗಳಲ್ಲ. ಜಗತ್ತಿನಲ್ಲಿ ಯಾವ ಕಡೆಯಲ್ಲಿ ಭಯೋತ್ಪಾದಕ ದಾಳಿ ನಡೆದರೂ, ಕೊನೆಗೆ ಅದು ಹೋಗಿ ತಲುಪುವುದು ಪಾಕಿಸ್ತಾನಕ್ಕೆ. ಉದಾಹರಣೆಗೆ ಸೆ. 11ರ ದಾಳಿಯನ್ನು ತೆಗೆದುಕೊಳ್ಳೋಣ. ಅದರ ಮಾಸ್ಟರ್ ಮೈಂಡ್ ಆಗಿದ್ದುದು ಒಸಾಮ ಬಿನ್ ಲಾಡನ್. ಆತ ಪಾಕಿಸ್ತಾನದಲ್ಲಿ ಆಶ್ರಯ ಪಡೆದವʼʼ ಎಂದರು.
"ಒಂದು ರೀತಿಯಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಮನಸ್ಥಿತಿ ಪಾಕಿಸ್ತಾನದಲ್ಲಿ ಆಳವಾಗಿ ಬೇರೂರಿದೆ. ಇಂದು ಪಾಕಿಸ್ತಾನ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಪ್ರಕ್ಷುಬ್ಧತೆಯ ಕೇಂದ್ರಬಿಂದುವಾಗಿ ನಿಂತಿದೆ. ಒಳ್ಳೆಯದಕ್ಕಾಗಿ ಪ್ರಾಯೋಜಿತ ಭಯೋತ್ಪಾದನೆಯ ಮಾರ್ಗವನ್ನು ತ್ಯಜಿಸುವಂತೆ ನಾವು ಅವರನ್ನು ಒತ್ತಾಯಿಸಿದ್ದೇವೆ" ಎಂದು ಪ್ರಧಾನಿ ಹೇಳಿದರು.