ಜವಳಿ ಉದ್ಯಮಕ್ಕೂ ತಟ್ಟಿದ ಇಂಧನ ಕೊರತೆ: ಎಲ್‌ಪಿಜಿ ಸಮಸ್ಯೆಯಿಂದ ಮುಚ್ಚಿದ ಸೂರತ್‌ನ ಘಟಕಗಳು
ದೇಶದಲ್ಲಿ ಈಗ ಎಲ್‌ಪಿಜಿ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ವಾಣಿಜ್ಯ ಬಳಕೆಯ ಸಿಲಿಂಡರ್ ಗಳಿಗೆ ಮಿತಿ ಹೇರಲಾಗಿದ್ದು, ಇದೀಗ ಇದರ ಬಿಸಿ ಜವಳಿ ಉದ್ಯಮಕ್ಕೆ ತಟ್ಟಿದೆ. ಸೂರತ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಕಾರ್ಮಿಕರ ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ಇದರಿಂದ ಜವಳಿ ಘಟಕಗಳಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ -
ಸೂರತ್: ಇರಾನ್ (Iran war) ಮೇಲೆ ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ದಾಳಿ ನಡೆಸಿದ ಬಳಿಕ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು (oil crisis) ಕಾಣಿಸಿಕೊಂಡಿದೆ. ಭಾರತದಲ್ಲೂ ಇದರ ತೀವ್ರತೆ ಅಡುಗೆ ಅನಿಲದ ಮೇಲೆ ತಟ್ಟಿದೆ. ದೇಶಾದ್ಯಂತ ಅಡುಗೆ ಅನಿಲ (LPG crisis) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚಾದ ಬಳಿಕ ಹೊರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದ್ದು, ಇದು ಜಾಗತಿಕ ಇಂಧನ ಪೂರೈಕೆಯ ಮೇಲೆ ಬಹಳಷ್ಟು ಗಂಭೀರ ಪರಿಣಾಮವನ್ನು ಬೀರಿದೆ.
ದೇಶದಲ್ಲಿ ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಕಾರಣದಿಂದ ಗುಜರಾತ್‌ನ ಸೂರತ್‌ನಿಂದ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಇದು ಜವಳಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರತೊಡಗಿದೆ. ಗಲ್ಫ್ ಪ್ರದೇಶದಿಂದ ವಿಶ್ವದ ಎಲ್‌ಪಿಜಿ ಪೂರೈಕೆಯಲ್ಲಿ ಸುಮಾರು ಶೇ. 30ರಷ್ಟು ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಈ ವಾರದ ಆರಂಭದಲ್ಲಿ ಪರ್ಯಾಯ ಮೂಲಗಳಿಂದ 2,65,000 ಮೆಟ್ರಿಕ್ ಟನ್‌ಗಳಷ್ಟು ಎಲ್ ಪಿಜಿ ಭಾರತದ ಬಂದರುಗಳಿಗೆ ಆಗಮಿಸಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
ದೇಶದಲ್ಲಿ ತೈಲ ಕೊರತೆಯಾಗದೇ ಇದ್ದರೂ ಎಲ್ ಪಿಜಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಪೂರೈಕೆ ತೊಂದರೆಗಳಾಗಿವೆ. ಇದು ಭಾರತದ ಕೆಲವು ಭಾಗಗಳಲ್ಲಿ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ.
ಎಲ್‌ಪಿಜಿ ಕೊರತೆಯಿಂದಾಗಿ ಸೂರತ್‌ನ ಉಧ್ನಾ ರೈಲು ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ದೊಡ್ಡ ಗುಂಪು ತಮ್ಮ ಹಳ್ಳಿಗಳಿಗೆ ಹೊರಟಿವೆ. ಉದ್ಯೋಗವಿದ್ದರೂ ಅಡುಗೆ ಅನಿಲದ ಕೊರತೆಯಿಂದಾಗಿ ನಗರದಲ್ಲಿ ವಾಸಿಸುವುದು ಕಷ್ಟವಾಗುತ್ತಿದೆ ಎಂದು ಅನೇಕ ಕಾರ್ಮಿಕರು ಹೇಳಿದ್ದಾರೆ.
ನಮಗೆ ಹಲವಾರು ದಿನಗಳಿಂದ ಅನಿಲ ಸಿಗದ ಕಾರಣ ನಾವು ನಮ್ಮ ಹಳ್ಳಿಗೆ ಹಿಂತಿರುಗುತ್ತಿದ್ದೇವೆ. ಕಾರ್ಖಾನೆಗಳು ಸಹ ಮುಚ್ಚುತ್ತಿವೆ. ನಮ್ಮಲ್ಲಿ ಹಣವಿಲ್ಲ.ಇಲ್ಲಿ ಯಾರೂ ನಮಗೆ ಬೆಂಬಲ ನೀಡುತ್ತಿಲ್ಲ. ಅನಿಲ ಪೂರೈಕೆ ಮತ್ತೆ ಪ್ರಾರಂಭವಾದ ಬಳಿಕ ಮರಳುತ್ತೇವೆ ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ.
ಅಡುಗೆ ಅನಿಲ ಬೆಲೆ ಕೆಜಿಗೆ 500 ರೂ. ಗೆ ಏರಿಕೆಯಾಗಿದೆ. ನಾವು ನಾಲ್ಕು ದಿನಗಳಿಂದ ಗ್ಯಾಸ್‌ಗಾಗಿ ಹುಡುಕುತ್ತಿದ್ದೇವೆ. ಆದರೆ ಸಿಕ್ಕಿಲ್ಲ. ಈ ಹಿಂದೆ ನಾವು ಅಡುಗೆ ಮಾಡಲು ಮರವನ್ನು ಬಳಸುತ್ತಿದ್ದೆವು. ಆದರೆ ಮನೆ ಮಾಲೀಕರು ಬಿಡಲಿಲ್ಲ. ಹೀಗಾಗಿ ಊರಿಗೆ ಮರಳುತ್ತಿದ್ದೇವೆ ಎಂದು ಮತ್ತೋರ್ವ ಕಾರ್ಮಿಕ ತಿಳಿಸಿದ್ದಾರೆ.
ಭಾರತೀಯರ ಸುರಕ್ಷತೆಗೆ ಕತಾರ್ ಸರ್ಕಾರದಿಂದ ಸಂಪೂರ್ಣ ಸಹಕಾರ
ಕಾರ್ಮಿಕರ ಕೊರತೆಯು ಜವಳಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲು ಪ್ರಾರಂಭವಾಗಿದೆ. ಇದು ಕೆಲವು ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸೂರತ್ ನ ಹಲವಾರು ಕಾರ್ಖಾನೆಗಳನ್ನು ಮುಚ್ಚಲಾಗಿದೆ.