ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ ರಿಲೀಸ್ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರಿಲ್ಲ
Tamil Nadu Assembly Elections: ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭಾ ಚುನಾವಣೆ ನಡೆದಿದೆ. ಈ ಬಾರಿ ಅಧಿಕಾರಕ್ಕೇರಲೇ ಬೇಕೆಂದು ಬಿಜೆಪಿ ಪಣ ತೊಟ್ಟಿದ್ದು, ಈಗಾಗಲೇ ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಕೇಸರಿ ಪಡೆ 27 ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಇದರಲ್ಲಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಹೆಸರಿಲ್ಲ.
ಕೆ.ಅಣ್ಣಾಮಲೈ (ಸಂಗ್ರಹ ಚಿತ್ರ) -
ಚೆನ್ನೈ, ಏ. 3: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ (Tamil Nadu Assembly Elections). ಒಂದೇ ಹಂತದಲ್ಲಿ ಇಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ಈ ಬಾರಿ ಅಧಿಕಾರಕ್ಕೇರಲೇ ಬೇಕೆಂದು ಬಿಜೆಪಿ ಪಣ ತೊಟ್ಟಿದ್ದು, ಈಗಾಗಲೇ ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಕೇಸರಿ ಪಡೆ 27 ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎಂಬಂತೆ ಇದರಲ್ಲಿ ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ, ಸಿಂಗಂ ಖ್ಯಾತಿಯ ಕೆ. ಅಣ್ಣಾಮಲೈ (K Annamalai) ಹೆಸರಿಲ್ಲ.
ಏಪ್ರಿಲ್ 3ರಂದು ಬಿಜೆಪಿ ಹೊರ ತಂದಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿರಿಯ ನಾಯಕರಾದ ತಮಿಳಿಸೈ ಸೌಂದರ್ಯರಾಜನ್ (ಮೈಲಾಪೊರೆ), ವಾನತಿ ಶ್ರೀನಿವಾಸನ್ (ಕೊಯಂಬತ್ತೂರು ಉತ್ತರ) ಮತ್ತು ಕೇಂದ್ರ ಸಚಿವ ಎಲ್. ಮುರುಗನ್ (ಅವಿನಾಶಿ) ಹೆಸರಿದೆ. ಅಣ್ಣಾಮಲೈ ಈ ಬಾರಿ ಸ್ಪರ್ಧಿಸುತ್ತಿಲ್ಲ. ಈ ಹಿಂದೆಯೇ ಅವರು ಕಣದಿಂದೆ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದರು.
ತಮಿಳುನಾಡು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ:
The Central Election Committee of the Bharatiya Janata Party has finalised the following names for the upcoming General Elections to the Legislative Assembly of Tamil Nadu. pic.twitter.com/1pVxlz73Cy
— BJP (@BJP4India) April 3, 2026
ಎಐಎಡಿಎಂಕೆ ಜತೆ ಮೈತ್ರಿ
ಎಐಎಡಿಎಂಕೆ ನೇತೃತ್ವದ ಎನ್‌ಡಿಎ ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ಈಗಾಗಲೇ ಸೀಟ್ ಹಂಚಿಕೆ ಪೂರ್ಣಗೊಂಡಿದೆ. 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ 169 ಕಡೆ ಸ್ಪರ್ಧಿಸುತ್ತಿದ್ದು, ಬಿಜೆಪಿಗೆ 27 ಸೀಟ್ ನೀಡಿದೆ. ಇನ್ನು ಮೈತ್ರಿಕೂಟದ ಭಾಗವಾಗಿರುವ ಪಟ್ಟಲಿ ಮಕ್ಕಳ್ ಕಚ್ಚಿ (PMK) 18, ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) 11, ತಮಿಳ್ ಮಾನಿಳ ಕಾಂಗ್ರೆಸ್ 5 ಮತ್ತು ಇಂಡಿಯಾ ಜನನಾಯಗನ್ ಕಚ್ಚಿ (IJK) ಹಾಗೂ ಪುರಚ್ಚಿ ಭರತಂ ತಲಾ 1 ಕಡೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಗೂ ಮೊದಲೇ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ ಮುಂದಿನ ನಡೆ ಏನು?
ಅಣ್ಣಾಮಲೈ ನಡೆಯೇನು?
ಎನ್‌ಡಿಎ ಕ್ಷೇತ್ರ ಹಂಚಿಕೆಯಲ್ಲಿ ಬಿಜೆಪಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಅಣ್ಣಾಮಲೈ ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ. ತಮಿಳುನಾಡು ಬಿಜೆಪಿಯಲ್ಲಿ ಹೊಸ ಕ್ರಾಂತಿ ಮಾಡುತ್ತಾರೆ ಎಂದೇ ಅಣ್ಣಾಮಲೈ ಬಿಂಬಿತರಾಗಿದ್ದರು. ಇದೀಗ ಅವರನ್ನು ಬಿಜೆಪಿ ನಿಲರ್ಕ್ಷಿಸುತ್ತಿದೆ ಎನ್ನು ವದಂತಿ ಹರಡಿದೆ. ಹೀಗಾಗಿ ಅಣ್ಣಾಮಲೈ ಅವರ ಮುಂದಿನ ನಡೆಯೇನು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2020ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅಣ್ಣಾಮಲೈ ಲೋಕಸಭಾ ಚುನಾವಣೆ ವೇಳೆ ವಿಂಚಿನ ಪ್ರಚಾರ ನಡೆಸಿ ಗಮನ ಸೆಳೆದಿದ್ದರು.
ವೈಯಕ್ತಿಕ ಕಾರಣ ನೀಡಿ ಕಳೆದ ವರ್ಷ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಸಲ್ಲಿಸಿದ್ದರು. 2023ರಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎನ್ನುವುದು ಎಐಎಡಿಎಂಕೆ ವಾದವಾಗಿತ್ತು. ಮತ್ತೊಮ್ಮೆ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಅಣ್ಣಾಮಲೈ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಎನ್ನಲಾಗಿದೆ.
ಮುಂದಿನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ: ಅಣ್ಣಾಮಲೈ ಘೋಷಣೆ
ಕಳೆದ ತಿಂಗಳೇ ನಿರ್ಧಾರ ಪ್ರಕಟಿಸಿದ್ದ ಅಣ್ಣಾಮಲೈ
ತಾವು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಕಳೆದ ತಿಂಗಳೇ ಅಣ್ಣಾಮಲೈ ಘೋಷಿಸಿದ್ದರು. ʼʼಈ ಬಾರಿ ನಾನು ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಬಿಜೆಪಿ ನಾಯಕರಿಗೆ ತಿಳಿಸಿದ್ದೇನೆ. ಅದಾಗ್ಯೂ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆʼʼ ಎಂದಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.