ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ನೀರ್‌ದೋಸೆ’ ನಿರ್ದೇಶಕ ವಿಜಯಪ್ರಸಾದ್‌ ಜೊತೆ ಕೈಜೋಡಿಸಿದ ನಟಿ ರಚಿತಾ ರಾಮ್; ಈ ಬಾರಿ ಪಕ್ಕಾ ಫ್ಯಾಮಿಲಿ ಸಿನಿಮಾ ಗ್ಯಾರಂಟಿ!

ಹೊಸ ಕೌಟುಂಬಿಕ ಲವ್‌ಸ್ಟೋರಿ ಚಿತ್ರಕ್ಕಾಗಿ ನಿರ್ದೇಶಕ ವಿಜಯಪ್ರಸಾದ್‌ ಮತ್ತು ನಟಿ ರಚಿತಾ ರಾಮ್ ಒಂದಾಗಿದ್ದಾರೆ. ಈ ಬಾರಿ ನಿರ್ದೇಶಕ ವಿಜಯಪ್ರಸಾದ್‌ ಅವರು ಭಾವನಾತ್ಮಕ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ರಚಿತಾ ಜೊತೆ ಅಚ್ಯುತ್ ಕುಮಾರ್ ಹಾಗೂ ರಂಗಾಯಣ ರಘು ಕೂಡ ಜೊತೆಯಾಗಲಿದ್ದಾರೆ.

‘ನೀರ್ ದೋಸೆ’ ಡೈರೆಕ್ಟರ್ ವಿಜಯಪ್ರಸಾದ್ ಜೊತೆ ರಚಿತಾ ರಾಮ್ ಹೊಸ ಸಿನಿಮಾ

-

Avinash GR
Avinash GR Nov 3, 2026 5:45 PM

ತರಲೆ, ತಮಾಷೆ, ಚೇಷ್ಟೆಯೇ ಹೆಚ್ಚಿರುವ ಕಥಾಹಂದರಗಳನ್ನು ಆಯ್ದುಕೊಳ್ಳುವ ನಿರ್ದೇಶಕ ವಿಜಯಪ್ರಸಾದ್, ‘ಸಿದ್ಲಿಂಗು 2’ ನಂತರ ಪುನಃ ಅಖಾಡಕ್ಕಿಳಿದಿದ್ದಾರೆ. ಆದರೆ, ಈ ಬಾರಿ ಆ ಹಳೆಯ ಚೌಕಟ್ಟನ್ನು ಬದಿಗೊತ್ತಿ ಹೊಸ ರೀತಿಯ ಕಥೆಯನ್ನು ಹೇಳಲು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದ್ದಾರೆ. ಮಹಿಳಾ ಪ್ರಧಾನ ಕೌಟುಂಬಿಕ ಲವ್‌ಸ್ಟೋರಿಯೊಂದನ್ನು ಆಯ್ಕೆ ಮಾಡಿಕೊಂಡಿರುವ ವಿಜಯಪ್ರಸಾದ್, ತಮ್ಮ ಸಿನಿಮಾಗೆ ನಾಯಕಿಯಾಗಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪಕ್ಕಾ ಫ್ಯಾಮಿಲಿ ಸಿನಿಮಾ ಇದು

ತಮ್ಮ ಚೊಚ್ಚಲ ಹಿಟ್ ಚಿತ್ರ 'ಸಿದ್ಲಿಂಗು' ಮೂಲಕ ಎಲ್ಲರ ಗಮನಸೆಳೆದಿದ್ದ ವಿಜಯಪ್ರಸಾದ್‌, ತಮ್ಮ ಸಿನಿಮಾಗಳ ವಿಶಿಷ್ಟ ಪಾತ್ರಗಳು ಹಾಗೂ ಚುರುಕಾದ, ತುಂಟತನದ ಸಂಭಾಷಣೆಗಳ ಮೂಲಕ ಜನಪ್ರಿಯರಾಗಿದ್ದರು. ನಂತರ ಜಗ್ಗೇಶ್ ಅಭಿನಯದ 'ನೀರ್ ದೋಸೆ', 'ಪೆಟ್ರೋಮ್ಯಾಕ್ಸ್' ಹಾಗೂ ಎರಡು ಭಾಗಗಳಲ್ಲಿ ಬಂದ 'ತೋತಾಪುರಿ'ಯಂತಹ ಚಿತ್ರಗಳನ್ನು ನೀಡಿದರು. ಆ ಚಿತ್ರಗಳಲ್ಲಿ ಬಹುತೇಕ ದ್ವಂದ್ವಾರ್ಥದ ಸಂಭಾಷಣೆಗಳು ಹಾಗೂ ಅಡಲ್ಟ್ ಕಾಮಿಡಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ವಿಜಯಪ್ರಸಾದ್ ಅವರ ಮುಂದಿನ ಚಿತ್ರವು ಸಂಪೂರ್ಣ ಕೌಟುಂಬಿಕ ಪ್ರೇಮಕಥೆಯಾಗಿ ರೂಪುಗೊಳ್ಳುತ್ತಿರುವುದು ವಿಶೇಷ.

ಹೀರೋ ಯಾರು?

ವಿಜಯಪ್ರಸಾದ್ ಮತ್ತು ರಚಿತಾ ರಾಮ್ ಕಾಂಬಿನೇಷನ್‌ನ ಮೊದಲ ಚಿತ್ರ ಇದಾಗಿದ್ದು, ಭಾವನಾತ್ಮಕ ಸಂಬಂಧಗಳ ಆಧಾರದ ಮೇಲೆ ಸಾಗುವ ಸೂಕ್ಷ್ಮ ಹಾಗೂ ಮನಮುಟ್ಟುವ ಪ್ರೇಮಕಥೆ ಇದಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ರಚಿತಾ ಅವರೊಂದಿಗೆ ಅಚ್ಯುತ್ ಕುಮಾರ್ ಹಾಗೂ ರಂಗಾಯಣ ರಘು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಚಿತಾಗೆ ಜೋಡಿಯಾಗುವಂತಹ ಸೂಕ್ತ ಹೀರೋ ಹುಡುಕಾಟದಲ್ಲಿ ಸದ್ಯ ಚಿತ್ರತಂಡ ನಿರತವಾಗಿದೆ.

‘ಡಿಂಪಲ್ ಕ್ವೀನ್’ ರಚಿತಾ ರಾಮ್‌ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ನಟಿ ಮಾನ್ವಿತಾ ಕಾಮತ್; ʻಡಿಂಪಲ್‌ ಕ್ವೀನ್‌ʼ ಫ್ಯಾನ್ಸ್‌ಗೆ ಬ್ರೇಕಿಂಗ್‌ ನ್ಯೂಸ್!‌

ವಿದೇಶದಲ್ಲೂ ನಡೆಯಲಿದೆಯಾ ಶೂಟಿಂಗ್?

ಸಾಮಾನ್ಯವಾಗಿ ವಿಜಯಪ್ರಸಾದ್ ಅವರ ಸಿನಿಮಾಗಳ ಶೂಟಿಂಗ್ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ನಡೆಯುತ್ತಿತ್ತು. ಆದರೆ ಈ ಬಾರಿ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದ ಕಣಿವೆಗಳು ಹಾಗೂ ಹಿಮಾಲಯದ ಪ್ರದೇಶಗಳನ್ನು ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಜೊತೆಗೆ ವಿದೇಶಿ ತಾಣಗಳಲ್ಲೂ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಸೆಟ್ಟೇರಲಿರುವ ಈ ಚಿತ್ರವು ವಿಜಯಪ್ರಸಾದ್ ಅವರ ನಿರ್ದೇಶನದ ಶೈಲಿಯಲ್ಲಿ ಸಂಪೂರ್ಣ ಹೊಸತನವನ್ನು ತರಲಿದೆ. ತಮ್ಮ ವೃತ್ತಿಜೀವನದಲ್ಲಿ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ರಚಿತಾ ರಾಮ್ ಕೂಡ ವಿಶಿಷ್ಟ ಕಥಾವಸ್ತುಗಳೊಂದಿಗೆ ಹೊಸ ಪ್ರಯೋಗಗಳನ್ನು ಮುಂದುವರಿಸಿದ್ದಾರೆ.‌