ಮುಂಬೈ: ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯ (Mumbai-Goa highway) ಕಾಮಗಾರಿ ವಿಳಂಬದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದು, ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲು 16 ರಿಂದ 17 ವರ್ಷಗಳು ತೆಗೆದುಕೊಂಡಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ. ಬುಧವಾರ ಪಣಜಿ ಸಮೀಪದ ಪೋರ್ವೊರಿಮ್‌ನಲ್ಲಿ ಆರು ಪಥದ ಎತ್ತರಿಸಿದ ರಸ್ತೆ ಕಾರಿಡಾರ್ ಉದ್ಘಾಟಿಸಿದ ನಂತರ ಮಾತನಾಡಿದ ಗಡ್ಕರಿ, ಹೆದ್ದಾರಿ ಪೂರ್ಣಗೊಳ್ಳುವಲ್ಲಿನ ವಿಳಂಬವಾಗಿದೆ. ಹೀಗಾಗಿ ಯೋಜನೆ ಅಂತಿಮವಾಗಿ ಪೂರ್ಣಗೊಂಡಾಗ ಅದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರು.
ಮುಂಬೈ-ಗೋವಾ ಹೆದ್ದಾರಿ (ವಿಸ್ತರಣೆ) ಕಾಮಗಾರಿ ಇಷ್ಟು ವಿಳಂಬವಾಗಿರುವುದಕ್ಕೆ ನನಗೆ ಮುಜುಗರವಿದೆ. ಅಕ್ಟೋಬರ್‌ನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ, ರಸ್ತೆ ಮಾರ್ಗವಾಗಿ ಗೋವಾಗೆ ಪ್ರಯಾಣಿಸುವ ಮೂಲಕ ಹೆದ್ದಾರಿಯನ್ನು ಖುದ್ದಾಗಿ ಪರಿಶೀಲಿಸುತ್ತೇನೆ ಮತ್ತು ಪ್ರಯಾಣಿಕರಿಗೆ ಪ್ರಯಾಣವು ಅನುಕೂಲಕರವಾಗಿದೆಯೇ ಎಂದು ಮೌಲ್ಯಮಾಪನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
440 ಕಿ.ಮೀ ಉದ್ದದ ಮುಂಬೈ-ಗೋವಾ ಹೆದ್ದಾರಿ ವಿಸ್ತರಣೆಯು ವರ್ಷಗಳ ಕೆಲಸ ಮತ್ತು ಭಾರಿ ವೆಚ್ಚದ ಹೊರತಾಗಿಯೂ ಪದೇ ಪದೇ ವಿಳಂಬವನ್ನು ಎದುರಿಸಿದೆ. ಮೇ ತಿಂಗಳಲ್ಲಿ ಖಾರ್ಪಡಾ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಣೆ ಪ್ರಾರಂಭವಾಗಿದ್ದರೂ, ಹೆದ್ದಾರಿಯಲ್ಲಿ ವಾಹನಗಳ ದಾರಿ ಬದಲಾವಣೆ (ಡೈವರ್ಶನ್), ನೀರು ನಿಲ್ಲುವಿಕೆ, ದುರಸ್ತಿ ಕಾರ್ಯಗಳು ಮತ್ತು ಸಂಚಾರ ದಟ್ಟಣೆ ಮುಂದುವರಿದಿದೆ.
ಮೂಲಸೌಕರ್ಯ ಯೋಜನೆಗಳ ವಿಳಂಬ ಮತ್ತು ಕಳಪೆ ಅನುಷ್ಠಾನಕ್ಕೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದ ಅವರು, ಈ ವಿಷಯದಲ್ಲಿ ನಾವು ದಾಖಲೆ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಏಳು ವಿಶ್ವ ದಾಖಲೆಗಳನ್ನು ಹೊಂದಿದೆ, ಆದರೆ ಈಗ ನಾನು ಇನ್ನೊಂದನ್ನು ಸ್ಥಾಪಿಸಲು ಬಯಸುತ್ತೇನೆ - ಒಂದು ವರ್ಷದಲ್ಲಿ ಅತಿ ಹೆಚ್ಚು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಡಿಬಾರ್ ಮಾಡಿ ಮತ್ತು ಅತಿ ಹೆಚ್ಚು ಅಧಿಕಾರಿಗಳನ್ನು ಅಮಾನತುಗೊಳಿಸಿದ ದಾಖಲೆ" ಎಂದು ಅವರು ಹೇಳಿದ್ದಾರೆ.
ತಮ್ಮ ರಾಜಕೀಯ ಭವಿಷ್ಯದ ಬಗ್ಗೆಯೂ ಮಾತನಾಡಿದ ಅವರು ಹಲವು ರಾಜ್ಯಗಳಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಫರ್‌ಗಳು ಬರುತ್ತಿವೆ, ಆದರೆ ಅವರು ತಮ್ಮ ಹುಟ್ಟೂರು ಮತ್ತು ಕೆಲಸದ ಸ್ಥಳದಿಂದಲೇ ಸ್ಪರ್ಧಿಸಲು ನನಗೆ ಇಷ್ಟವಿದೆ. ಪಕ್ಷವು ಎಲ್ಲಿವರೆಗೆ ಅವಕಾಶ ನೀಡುತ್ತದೆಯೇ ಅಲ್ಲಿಯ ವರೆಗೆ ನನ್ನ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ ಎಂದು ಅವರು ಹೇಳಿದರು.