ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

E20 ಪೆಟ್ರೋಲ್ ವಿವಾದ; "ಒಬ್ಬರಲ್ಲ, 6 ಸಂತ್ರಸ್ತರನ್ನು ತೋರಿಸುತ್ತೇವೆ": ಸಚಿವ ನಿತಿನ್‌ ಗಡ್ಕರಿಗೆ ಪ್ರತಿಭಟನಾಕಾರರ ಸವಾಲು

Nitin Gadkari: E20 ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳಿಗೆ ಹಾನಿಯಾಗಿದೆ ಎಂಬ ಆರೋಪದ ನಡುವೆ, "ಒಬ್ಬ ಸಂತ್ರಸ್ತನನ್ನಾದರೂ ತೋರಿಸಿ" ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸವಾಲನ್ನು ಪ್ರತಿಭಟನಾಕಾರರು ಸ್ವೀಕರಿಸಿದ್ದಾರೆ. ಮಾಧ್ಯಮಗಳ ಸಮ್ಮುಖದಲ್ಲಿ ಆರು ವಾಹನ ಮಾಲೀಕರನ್ನು ಹಾಜರುಪಡಿಸಲು ಸಿದ್ಧವಿದ್ದೇವೆ ಎಂದು ಟೀಂ ಭಾರತ್ ಸಂಘಟನೆ ತಿಳಿಸಿದ್ದು, E20 ನೀತಿ ಜಾರಿಯ ಬಗ್ಗೆ ಸಾರ್ವಜನಿಕ ಚರ್ಚೆಗೆ ಆಗ್ರಹಿಸಿದೆ.

E20 ಪೆಟ್ರೋಲ್ ವಿವಾದ: ಗಡ್ಕರಿಗೆ ಹೊಸ ಸವಾಲು

ಸಾಂದರ್ಭಿಕ ಚಿತ್ರ -

Profile
Sushmitha Jain Jul 9, 2026 10:59 PM

ನವದೆಹಲಿ, ಜು. 9: ಕೇಂದ್ರ ಸರ್ಕಾರದ ಇ20 (E20) ಎಥನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸುತ್ತಿರುವ ಹೋರಾಟಗಾರರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಸವಾಲು ಸ್ವೀಕರಿಸಿರುವುದಾಗಿ ಹೇಳಿದ್ದಾರೆ. "ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳಿಗೆ ಹಾನಿಯಾಗಿದೆ ಎಂದು ಹೇಳುವ ಒಬ್ಬ ವ್ಯಕ್ತಿಯನ್ನಾದರೂ ತೋರಿಸಿ" ಎಂಬ ಗಡ್ಕರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, "ಒಬ್ಬರಲ್ಲ, ಆರು ಜನರನ್ನು ನಿಮ್ಮ ಮುಂದೆ ಹಾಜರುಪಡಿಸುತ್ತೇವೆ. ಆದರೆ, ಈ ಭೇಟಿಯು ಮಾಧ್ಯಮಗಳ ಸಮ್ಮುಖದಲ್ಲೇ ನಡೆಯಬೇಕು" ಎಂದು ಆಗ್ರಹಿಸಿದ್ದಾರೆ.

ಟೀಂ ಭಾರತ್ (Team Bharat) ಸಂಘಟನೆಯ ನೇತೃತ್ವ ವಹಿಸಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ತಹ್ಸೀನ್ ಪೂನಾವಾಲಾ (Tehseen Poonawalla) ವಿಡಿಯೊ ಸಂದೇಶ ಬಿಡುಗಡೆ ಮಾಡಿ, "ದೆಹಲಿ ಪೊಲೀಸರ ಸೂಚನೆಯಂತೆ ಸಚಿವರ ನಿವಾಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಗಡ್ಕರಿ ಸಮಯ ನೀಡಬೇಕು. ನಾವು ಇ20 ಪೆಟ್ರೋಲ್ ಬಳಕೆಯಿಂದ ವಾಹನಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳುವ ಆರು ವಾಹನ ಮಾಲಕರನ್ನು ಕರೆತರುತ್ತೇವೆ. ಆದರೆ, ಸಂಪೂರ್ಣ ಚರ್ಚೆ ಮಾಧ್ಯಮಗಳ ಮುಂದೆ ಹಾಗೂ ಲೈವ್ ಪ್ರಸಾರದಲ್ಲಿ ನಡೆಯಬೇಕು" ಎಂದು ಒತ್ತಾಯಿಸಿದರು.

ತಹ್ಸೀನ್ ಪೂನಾವಾಲಾ ಅವರ ವಿಡಿಯೊ:



ಈ ವಿವಾದಕ್ಕೆ ಬುಧವಾರ (ಜುಲೈ 8) ಗಡ್ಕರಿ ನೀಡಿದ್ದ ಸಂದರ್ಶನವೇ ಕಾರಣ. "ಇ20 ಪೆಟ್ರೋಲ್‌ನಿಂದ ವಾಹನಕ್ಕೆ ಹಾನಿಯಾಗಿದೆ ಎಂಬುದಕ್ಕೆ ಇಲ್ಲಿಯವರೆಗೆ ಯಾರೂ ಪುರಾವೆ ನೀಡಿಲ್ಲ. ಇಂತಹ ಒಂದು ಪ್ರಕರಣವನ್ನಾದರೂ ತೋರಿಸಿ. ದೂರು ಬಂದರೆ ಸರ್ಕಾರ ತನಿಖೆ ನಡೆಸಿ, ಎಥನಾಲ್ ಕಾರಣವೆಂದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುತ್ತದೆ" ಎಂದು ಅವರು ಹೇಳಿದ್ದರು.

ಇದೇ ವೇಳೆ, ತಮ್ಮ ಕುಟುಂಬ ಎಥನಾಲ್ ಉದ್ಯಮದಲ್ಲಿರುವುದರಿಂದ ಹಿತಾಸಕ್ತಿ ಸಂಘರ್ಷ ಇದೆ ಎಂಬ ಆರೋಪವನ್ನೂ ಗಡ್ಕರಿ ತಳ್ಳಿಹಾಕಿದ್ದರು. "ದೇಶದ ಒಟ್ಟು ಎಥನಾಲ್ ಉತ್ಪಾದನೆಯಲ್ಲಿ ನನ್ನ ಪಾಲು ಕೇವಲ ಶೇ. 0.07 ಮಾತ್ರ. ಈ ನೀತಿಯಿಂದ ನನಗೆ ಯಾವುದೇ ವೈಯಕ್ತಿಕ ಲಾಭವಿಲ್ಲ" ಎಂದು ಸ್ಪಷ್ಟಪಡಿಸಿದ್ದರು.

ಆದರೆ ಪೂನಾವಾಲಾ ಈ ವಾದವನ್ನು ಒಪ್ಪದೇ, "ನಿಮ್ಮ ಕುಟುಂಬ ಎಥನಾಲ್ ಉದ್ಯಮದಲ್ಲಿದೆ. ಇದು ಹಿತಾಸಕ್ತಿ ಸಂಘರ್ಷದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಜನರ ಮುಂದೆ ಸತ್ಯವನ್ನು ಚರ್ಚಿಸೋಣ" ಎಂದು ಸವಾಲು ಹಾಕಿದ್ದಾರೆ.

ʼʼನನಗೆ ಯಾವುದೇ ಲಾಭವಿಲ್ಲʼʼ: ಎಥನಾಲ್ ವಿವಾದ, ಆರೋಪ ತಳ್ಳಿ ಹಾಕಿದ ನಿತಿನ್ ಗಡ್ಕರಿ

ವಿವಾದಕ್ಕೆ ಕಾರಣವೇನು?

ಕೇಂದ್ರ ಸರ್ಕಾರ ದೇಶದಲ್ಲಿ ಕಚ್ಚಾ ತೈಲ ಆಮದು ಕಡಿಮೆ ಮಾಡುವುದು, ರೈತರ ಆದಾಯ ಹೆಚ್ಚಿಸುವುದು ಹಾಗೂ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 20% ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯನ್ನು ಜಾರಿಗೆ ತಂದಿದೆ. ಆದರೆ ಇದರಿಂದ E10 ಪೆಟ್ರೋಲ್‌ಗೆ ಹೊಂದುವ ಹಳೆಯ ವಾಹನಗಳಲ್ಲಿ ಮೈಲೇಜ್ ಕಡಿಮೆಯಾಗುತ್ತಿದೆ, ರಬ್ಬರ್ ಭಾಗಗಳು ಹಾನಿಯಾಗುತ್ತಿವೆ, ಇಂಧನ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಾಣಿಸುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.

ಇದಕ್ಕೆ ವಿರುದ್ಧವಾಗಿ ಸರ್ಕಾರ ಹಾಗೂ ವಾಹನ ತಯಾರಿಕಾ ಸಂಸ್ಥೆಗಳು, ಹೊಂದಾಣಿಕೆಯ ವಾಹನಗಳಿಗೆ E20 ಸುರಕ್ಷಿತ ಎಂದು ಹೇಳುತ್ತಿವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಾಹನ ಮಾಲಕರು ಮೈಲೇಜ್ ಕುಸಿತ, ಎಂಜಿನ್ ಸಮಸ್ಯೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳದ ಬಗ್ಗೆ ದೂರು ಹಂಚಿಕೊಳ್ಳುತ್ತಿರುವುದರಿಂದ, ಈ ವಿಷಯದ ಕುರಿತು ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಪ್ರತಿಭಟನಾಕಾರರು ಎಥನಾಲ್ ನೀತಿಗೆ ವಿರೋಧವಿಲ್ಲ, ಆದರೆ E20ಗೆ ಹೊಂದಾಣಿಕೆಯಾಗದ ಲಕ್ಷಾಂತರ ವಾಹನಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.