ನವದೆಹಲಿ: ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ (Gen Naravane Book) ಅವರ ಅಪ್ರಕಟಿತ ಆತ್ಮಚರಿತ್ರೆ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ಈ ಪುಸ್ತಕದ ಕುರಿತು ಮಾತನಾಡಿದ್ದರು. ಇದೀಗ ಈ ಆತ್ಮಚರಿತ್ರೆಯು (Four Stars of Destiny) ಸಂಸತ್ತಿನಲ್ಲಿ ಮತ್ತು ಹೊರಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಡುವಿನ ಜಗಳಕ್ಕೆ ಕಾರಣವಾಗಿದೆ. ಇದೀಗ ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಸಾಫ್ಟ್ ಕಾಪಿ (ಪಿಡಿಎಫ್ ರೂಪದಲ್ಲಿ) ಪ್ರಸಾರವಾಗಿದ್ದು, ದೆಹಲಿ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಮೆಸರ್ಸ್ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿದ ಅದೇ ಶೀರ್ಷಿಕೆಯ ಟೈಪ್-ಸೆಟ್ ಪುಸ್ತಕದ PDF ಪ್ರತಿಯು ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ ಮತ್ತು ಕೆಲವು ಆನ್‌ಲೈನ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳು ಪೂರ್ಣಗೊಂಡ ಪುಸ್ತಕದ ಮುಖಪುಟವನ್ನು ಖರೀದಿಗೆ ಲಭ್ಯವಿದೆ ಎಂದು ಹೇಳಲಾಗಿದೆ. ಇನ್ನೂ ಅನುಮೋದನೆ ಪಡೆಯದ ಪ್ರಕಟಣೆಯ ಸೋರಿಕೆ/ಉಲ್ಲಂಘನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು, ವಿಶೇಷ ಘಟಕದಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಭಾರತದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಆತ್ಮಚರಿತ್ರೆಯನ್ನು ಬರೆದಿದ್ದರು. ಏಪ್ರಿಲ್ 2024 ರಲ್ಲೇ ಬಿಡುಗಡೆಯಾಗಬೇಕಿದ್ದ ಈ ಪುಸ್ತಕಕ್ಕೆ ಇನ್ನೂ ಅನುಮತಿ ದೊರಕಿಲ್ಲ ಎಂದು ಹೇಳಲಾಗಿದೆ. 2020ರ ಮೇ ತಿಂಗಳಲ್ಲಿ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯ ಸಮಯದಲ್ಲಿ ಜನರಲ್ ನರವಾಣೆ ಅವರು ಸೇನಾ ಮುಖ್ಯಸ್ಥರಾಗಿದ್ದರು. ತಮ್ಮ ಪುಸ್ತಕದಲ್ಲಿ ಅವರು ಆ ಭೀಕರ ಘರ್ಷಣೆ, 20 ಭಾರತೀಯ ಸೈನಿಕರ ಬಲಿದಾನ ಮತ್ತು ಚೀನಾದೊಂದಿಗೆ ನಡೆದ ಸೇನಾ ವಿಘಟನೆ ಒಪ್ಪಂದದ ಒಳಗುಟ್ಟುಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಈ ವಿಷಯದ ಕುರಿತು ಇದೀಗ ಗಂಭೀರ ಚರ್ಚೆ ನಡೆಯುತ್ತಿದೆ.
ಇಡೀ ಸಿಖ್ ಸಮುದಾಯಕ್ಕೆ ರಾಹುಲ್ ಗಾಂಧಿಯಿಂದ ಅವಮಾನ; ರಾಜ್ಯಸಭೆಯಲ್ಲಿ ಮೋದಿ ಕಿಡಿ
ನಿವೃತ್ತ ಜನರಲ್ ನರವಾಣೆ, ಭಾರತದ ಸೇನೆಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಸೆಕೆಂಡ್ ಲೆಫ್ಟಿನೆಂಟ್ ಹುದ್ದೆಯಿಂದ ಹಿಡಿದು ಜನರಲ್ ಆಗುವ ತನಕದ ಅವಧಿಯಲ್ಲಿನ ಅವರ ಅನುಭವವನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕದಲ್ಲಿ, 1962ರ ಭಾರತ ಚೀನಾ ಗಡಿ ಸಂಘರ್ಷ, ಅಗ್ನಿಪಥ್ ನೇಮಕಾತಿ ವಿವಾದ ಮುಂತಾದವು ಆ ಪುಸ್ತಕದಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.