ಪಣಜಿ : ಎಂಟು ವರ್ಷಗಳ ಹಿಂದೆ ಬ್ರಿಟಿಷ್ ಪ್ರಜೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ (Goa Murder Case) ಸಂಬಂಧಿಸಿದಂತೆ 31 ವರ್ಷದ ವ್ಯಕ್ತಿಗೆ ಗೋವಾದ ನ್ಯಾಯಾಲಯವು ಸೋಮವಾರ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾರ್ಚ್ 14, 2017 ರಂದು ದಕ್ಷಿಣ ಗೋವಾದ ಕೆನಕೋನಾ ಗ್ರಾಮದ ಅರಣ್ಯ ಪ್ರದೇಶದಲ್ಲಿ 28 ವರ್ಷದ ಬ್ರಿಟಿಷ್ ಯುವತಿಯ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದ. ನಂತರ ಆಕೆಯನ್ನು ಕೊಲೆ ಮಾಡಿದ್ದ. ಆರೋಪಿಯನ್ನು ವಿಕತ್ ಭಗತ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಆತನ ವಿರುದ್ಧ ತಪ್ಪಿತಸ್ಥ ಎಂಬ ತೀರ್ಪು ಹೊರ ಬಿದ್ದಿತ್ತು. ಇದೀಗ ಸೋಮವಾರ ಶಿಕ್ಷೆ ಪ್ರಕಟ ಮಾಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕ್ಷಾಮಾ ಜೋಶಿ ಸೋಮವಾರ ಭಗತ್‌ಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ಅತ್ಯಾಚಾರ ಮತ್ತು ಕೊಲೆಗೆ 25,000 ರೂ. ಮತ್ತು ಸಾಕ್ಷ್ಯ ನಾಶಕ್ಕೆ 10,000 ರೂ. ದಂಡ ವಿಧಿಸಿದ್ದಾರೆ. ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಅಪರಾಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು, ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಶುಕ್ರವಾರದ ತೀರ್ಪಿನ ನಂತರ, ಸಂತ್ರಸ್ತೆಯ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದು, ನ್ಯಾಯಕ್ಕಾಗಿ ನಮ್ಮ ಹೋರಾಟದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞರಾಗಿರುತ್ತೇವೆ. ವಕೀಲರು ಸೇರಿದಂತೆ ಹಲವರು ನಮ್ಮ ಮಗಳ ಕೇಸ್‌ನಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವಳನ್ನು ತಮ್ಮದೇ ಪುತ್ರಿ ಎಂದುಕೊಂಡು ಹೋರಾಟ ಮಾಡಿದ್ದಾರೆ. ಎಲ್ಲರ ಪರಿಶ್ರಮಕ್ಕೆ ಇದೀಗ ಪ್ರತಿಫಲ ಎಂದು ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Periya Murders: ಪೆರಿಯಾ ಹತ್ಯೆ ಪ್ರಕರಣ; 10 ಮಂದಿಗೆ ಜೀವಾವಧಿ-ಮಾಜಿ ಎಂಎಲ್‌ಎಗೆ 5 ವರ್ಷ ಜೈಲು ಶಿಕ್ಷೆ
ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್‌ಪೆಕ್ಟರ್ ಫಿಲೋಮಿನಾ ಕೋಸ್ಟಾ, ಸೂಕ್ಷ್ಮ ತನಿಖೆಯೇ ಅಪರಾಧ ಸಾಬೀತಾಗಲು ಕಾರಣ ಎಂದು ಹೇಳಿದರು. ತೀರ್ಪಿನಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ. ಗೋವಾ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯ ಪ್ರಕಾರ, ವಾಯುವ್ಯ ಐರ್ಲೆಂಡ್‌ನ ಡೊನೆಗಲ್ ಮೂಲದ ಮೆಕ್‌ಲಾಘಿನ್ ಮಾರ್ಚ್ 2017 ರಲ್ಲಿ ಗೋವಾಕ್ಕೆ ಭೇಟಿ ನೀಡಿದ್ದಾಗ ಭಗತ್ ಅವಳೊಂದಿಗೆ ಸ್ನೇಹ ಬೆಳೆಸಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಮೆಕ್‌ಲಾಘಿನ್‌ಗೆ ಕಲ್ಲಿನಿಂದ ಹೊಡೆದ ಪರಿಣಾಮ ಆಕೆಯ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಕೆಯ ದೇಹವು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬಟ್ಟೆಗಳಿಲ್ಲದೆ, ತಲೆ ಮತ್ತು ಮುಖಕ್ಕೆ ಗಾಯವಾದ ರೀತಿಯಲ್ಲಿ ಪತ್ತೆಯಾಗಿತ್ತು.