ನವದೆಹಲಿ: ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಬಹುನೀರಿಕ್ಷಿತ ಆತ್ಮಕತೆ ʼಬೆಲಾಂಗಿಂಗ್: ಅ ಜರ್ನಿ ಆಫ್ ಲವ್ʼ (Belonging: A Journey of Love) ಪ್ರಕಟಣೆ ಕುರಿತು ಹಲವು ದಿನಗಳಿಂದ ಸಾಕಷ್ಟು ವಿವಾದಗಳು ನಡೆಯುತ್ತಿದ್ದವು. ಆರಂಭದಲ್ಲಿ ಪ್ರಕಟಣೆಯ ಹೊಣೆ ಹೊತ್ತಿದ್ದ ʼಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾʼ ಸಂಸ್ಥೆಯು ರಾಜಕೀಯ ಒತ್ತಡಗಳಿಗೆ ಮಣಿದು ಕೊನೆಗಳಿಗೆಯಲ್ಲಿ ಹಿಂದೆ ಸರಿಯಿತು ಎಂಬ ಆರೋಪಗಳ ನಡುವೆ, ಇದೀಗ ಜಾಗತಿಕ ಮಟ್ಟದ ಪ್ರಮುಖ ಪ್ರಕಾಶನ ಸಂಸ್ಥೆ ʼಹರ್ಪರ್ ಕಾಲಿನ್ಸ್ʼ ಈ ಪುಸ್ತಕವನ್ನು ಪ್ರಕಟಿಸಲು ಮುಂದಾಗಿದೆ. ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಪುಸ್ತಕದ ಪ್ರಕಟಣೆಗೆ ಎದುರಾಗಿದ್ದ ಬಹುದೊಡ್ಡ ತಡೆಗೋಡೆ ಈಗ ತೆರವಾಗಿದ್ದು, ರಾಷ್ಟ್ರೀಯ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.
ಪೆಂಗ್ವಿನ್ ಸಂಸ್ಥೆ ಪ್ರಕಟಣೆಯಿಂದ ಹಿಂದೆ ಸರಿಯಲು ಕಾರಣವೇನು?
ಈ ಹಿಂದೆ ಪುಸ್ತಕವನ್ನು ಪೆಂಗ್ವಿನ್ ಸಂಸ್ಥೆ ಸೋನಿಯಾ ಗಾಂಧಿ ಅವರೊಂದಿಗೆ ಭಾರತದಲ್ಲಿ ಪ್ರಕಟಣೆ ಮಾಡಲು ಒಪ್ಪಂದವನ್ನು ಮಾಡಿಕೊಂಡಿತ್ತು. ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕಥೆಯಲ್ಲಿ, 2004ರ ಚುನಾವಣಾ ರ್ಯಾಲಿಯಲ್ಲಿ ನರೇಂದ್ರ ಮೋದಿ ತಮ್ಮನ್ನು ‘ಜರ್ಸಿ ಹಸು' ಎಂದು ಕಾಗದದಲ್ಲಿ ಬರೆದಿದ್ದ ಘಟನೆ ಮತ್ತು ಅವರ ಕುರಿತಾದ ವೈಯಕ್ತಿಕ ಅನುಭವಗಳು, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಸಿದ್ಧಾಂತಗಳ ಕುರಿತಾದ ಕಠಿಣ ವಿಮರ್ಶಾತ್ಮಕ ಸಾಲುಗಳು, ಭಾರತ-ಚೀನಾ ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ತೆಗೆದುಹಾಕಲು ಪೆಂಗ್ವಿನ್ ಸಂಸ್ಥೆ ಸೋನಿಯಾ ಗಾಂಧಿ ಅವರಿಗೆ ಕೋರಿತ್ತು, ಆದರೆ ಸೋನಿಯಾ ಗಾಂಧಿ ಅವರು ಈ ಬದಲಾವಣೆಗಳನ್ನು ಮಾಡಲು ನಿರಾಕರಿಸಿದ ಹಿನ್ನಲೆಯಲ್ಲಿ ಪೆಂಗ್ವಿನ್ ಸಂಸ್ಥೆ ಭಾರತದಲ್ಲಿ ಪುಸ್ತಕದ ಪ್ರಕಟಣೆಯಿಂದ ಹಿಂದೆ ಸರಿದಿತ್ತು. ಇದೀಗ ಈ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಲು ಮುಂದೆ ಬಂದಿದೆ.
ಆತ್ಮಕಥೆ ಏನನ್ನು ಒಳಗೊಂಡಿದೆ?
‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವು 79 ವರ್ಷದ ಸೋನಿಯಾ ಗಾಂಧಿ ಅವರ ಜೀವನದ ಹಲವು ಅಪರೂಪದ ವೈಯಕಿಕ ಅನುಭವಗಳು ಈ ಕೃತಿಯಲ್ಲಿ ಇರಲಿದೆ. ಎರಡನೇ ಮಹಾಯುದ್ಧದ ನಂತರ ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ ಅವರ ಬಾಲ್ಯ, ಭಾರತಕ್ಕೆ ಬಂದ ಅವರ ಪಯಣ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹ ಜೀವನದ ನೆನಪುಗಳನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ. ಸಂಜಯ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅಗಲಿಕೆ ಸೇರಿ ಸೋನಿಯಾ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು ಹಾಗೂ ದುರಂತಗಳ ಕುರಿತಾದ ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. 2004ರ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಕ್ಕೆ ಬಂದಾಗ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳದಿರಲು ತೆಗೆದುಕೊಂಡ ನಿರ್ಧಾರ ಬಗ್ಗೆಯೂ ಸೋನಿಯಾ ಗಾಂಧಿ ಪುಸ್ತಕದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅವರು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸಂದರ್ಭ ಮತ್ತು ಭಾರತದ ಅತ್ಯಂತ ಪ್ರತಿಷ್ಠಿತ ರಾಜಕೀಯ ಕುಟುಂಬಗಳಲ್ಲಿ ಒಂದಾದ ನೆಹರೂ-ಗಾಂಧಿ ಕುಟುಂಬದ ಕೇಂದ್ರಬಿಂದುವಾಗಿದ್ದ ವರ್ಷಗಳ ಅನುಭವಗಳನ್ನೂ ಇದು ವಿವರಿಸಲಿದೆ.
ಆದಾಗ್ಯೂ, ಪೆಂಗ್ವಿನ್ ಇಂಡಿಯಾ ಸಂಸ್ಥೆಯು ಆತ್ಮಚರಿತ್ರೆಯನ್ನು ಪ್ರಕಟಿಸದಿರಲು ತೆಗೆದುಕೊಂಡ ನಿರ್ಧಾರದ ಹಿಂದೆ ಯಾವುದೇ ಬಾಹ್ಯ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಚರಿತ್ರೆ ನವೆಂಬರ್ 10ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.