ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್‌ ಇಂಡಿಯ: ಒತ್ತಡ ಹೇರಲಾಗಿದೆ ಎಂದ ಕಾಂಗ್ರೆಸ್, ಬಿಜೆಪಿಯಿಂದ ತಿರುಗೇಟು

Sonia Gandhi's Memoir: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ‘Belonging: A Journey of Love’ ಆತ್ಮಕಥೆಯನ್ನು ಪೆಂಗ್ವಿನ್‌ ಇಂಡಿಯ ಪ್ರಕಾಶನ ಸಂಸ್ಥೆ ಭಾರತದಲ್ಲಿ ಪ್ರಕಟಿಸದಿರುವ ವಿಚಾರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಪೆಂಗ್ವಿನ್ ರ‍್ಯಾಂಡಪ್‌ ಹೌಸ್ ಇಂಡಿಯ ಮೇಲೆ ಒತ್ತಡ ಹೇರಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಬಿಜೆಪಿ ಇದನ್ನು ಸುಳ್ಳು ನಿರೂಪಣೆ ಎಂದು ಟೀಕಿಸಿದೆ. ಚೀನಾ ಗಡಿ ವಿವಾದ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಆರ್‌ಎಸ್‌ಎಸ್‌ ಕುರಿತ ಅಂಶಗಳ ಬಗ್ಗೆ ಸಂಪಾದಕೀಯ ಬದಲಾವಣೆಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ. ಆದರೆ ಪುಸ್ತಕದ ಭಾರತ ಪ್ರಕಟಣೆ ಕುರಿತು ಯಾವುದೇ ಅಧಿಕೃತ ನಿರ್ಬಂಧದ ಮಾಹಿತಿ ಹೊರ ಬಿದ್ದಿಲ್ಲ.

ಸೋನಿಯಾ ಗಾಂಧಿ ಆತ್ಮಕಥೆ ವಿವಾದ; ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ

ಸೋನಿಯಾ ಗಾಂಧಿ (ಸಂಗ್ರಹ ಚಿತ್ರ) -

Profile
Sushmitha Jain Aug 29, 2026 10:36 PM

ನವದೆಹಲಿ, ಆ. 29: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಕಥೆ ‘Belonging: A Journey of Love’ ಪ್ರಕಟಣೆ ವಿಚಾರ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸದಿರಲು ಪೆಂಗ್ವಿನ್ ರ‍್ಯಾಂಡಪ್‌ ಹೌಸ್ ಇಂಡಿಯ ಮೇಲೆ ಒತ್ತಡ ಹೇರಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಬಿಜೆಪಿ ಇದಕ್ಕೆ ಕಿಡಿಕಾರಿದೆ. ಅಮೆರಿಕದ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ‍್ಯಾಂಡಪ್‌ ಹೌಸ್‌ನ ಅಂಗಸಂಸ್ಥೆ ಆಲ್ಫೆಡ್‌ ಎ ನಾಫ್‌ ಇತ್ತೀಚೆಗೆ ಸೋನಿಯಾ ಗಾಂಧಿ ಅವರ ಆತ್ಮಕಥೆ ನವೆಂಬರ್ 10ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿತ್ತು. ಆದರೆ ಪೆಂಗ್ವಿನ್ ರ‍್ಯಾಂಡಪ್‌ ಹೌಸ್ ಇಂಡಿಯ ಶುಕ್ರವಾರ ತಾನು ಈ ಪುಸ್ತಕವನ್ನು ಪ್ರಕಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಪುಸ್ತಕ ಪ್ರಕಟಣೆ ಕುರಿತ ಚರ್ಚೆಗಳ ಸಂದರ್ಭದಲ್ಲಿ ಕೆಲವು ಅಂಶಗಳನ್ನು ವಾಸ್ತವಾಂಶ ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ಪೆಂಗ್ವಿನ್ ಇಂಡಿಯಾ ಹೇಳಿದೆ. ಆದರೆ ಸೋನಿಯಾ ಗಾಂಧಿ ಕೆಲವು ಸಂಪಾದಕೀಯ ಬದಲಾವಣೆಗಳಿಗೆ ಒಪ್ಪದ ಕಾರಣ ಪ್ರಕಾಶಕರು ಹಿಂದೆ ಸರಿದಿದ್ದಾರೆ ಎಂಬ ವರದಿಗಳೂ ಹರಿದಾಡಿವೆ.

ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಉಪನಾಯಕ ಗೌರವ್ ಗೊಗೊಯ್, ಪೆಂಗ್ವಿನ್ ಇಂಡಿಯದ ಹೇಳಿಕೆಯನ್ನು ಟೀಕಿಸಿ, “ಇದು ಅತ್ಯಂತ ದುರ್ಬಲ ಹೇಳಿಕೆ” ಎಂದಿದ್ದಾರೆ. ಭಾರತದಲ್ಲಿ ಆರ್‌ಎಸ್‌ಎಸ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ʼExam Warriorsʼ ಸೇರಿ ಹಲವು ಪುಸ್ತಕಗಳನ್ನು ಪ್ರಕಟಿಸಲು ಸಂಸ್ಥೆ ಸಿದ್ಧವಾಗಿರುವಾಗ, ಸೋನಿಯಾ ಗಾಂಧಿ ಅವರ ಪುಸ್ತಕದ ವಿಚಾರದಲ್ಲಿ ಮಾತ್ರ ಇಂತಹ ನಿಲುವು ಏಕೆ ಎಂದು ಪ್ರಶ್ನಿಸಿದ್ದಾರೆ.

ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಪೆಂಗ್ವಿನ್ ರ‍್ಯಾಂಡಪ್‌ ಹೌಸ್ ಇಂಡಿಯ ನಿಲುವನ್ನು ಪ್ರಶ್ನಿಸಿದ್ದಾರೆ. ಪುಸ್ತಕವನ್ನು ವಿಶ್ವದಾದ್ಯಂತ ಮೂಲ ರೂಪದಲ್ಲೇ ಪ್ರಕಟಿಸಲು ಪೆಂಗ್ವಿನ್‌ನ ಅಂತಾರಾಷ್ಟ್ರೀಯ ಸಂಸ್ಥೆ ಸಿದ್ಧವಿರುವಾಗ, ಭಾರತದಲ್ಲಿ ಮಾತ್ರ ಬದಲಾವಣೆಗಳನ್ನು ಬಯಸುತ್ತಿರುವುದಕ್ಕೆ ಕಾರಣವೇನು ಎಂದು ಅವರು ಕೇಳಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಒತ್ತಡ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಮೋದಿ, ಆರ್‌ಎಸ್‌ಎಸ್, ಚೀನಾ ಭಾಗಕ್ಕೆ ಕತ್ತರಿ ಹಾಕಲು ನಕಾರ; ಪುಸ್ತಕ ಪ್ರಕಟಿಸದಿರಲು ಪೆಂಗ್ವಿನ್ ಇಂಡಿಯಾ ನಿರ್ಧಾರ

ಬಿಜೆಪಿಯಿಂದ ತಿರುಗೇಟು

ಕಾಂಗ್ರೆಸ್ ನಾಯಕರು ಭಯದ ಸುಳ್ಳು ಕಥನವನ್ನು ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸೋನಿಯಾ ಗಾಂಧಿ ಅವರ ಆತ್ಮಕಥೆಯಲ್ಲಿನ ಯಾವ ಭಾಗಗಳಿಗೆ ವಾಸ್ತವಾಂಶ ಪರಿಶೀಲನೆ ಅಗತ್ಯವಿತ್ತು ಮತ್ತು ಏಕೆ ಎಂಬುದೇ ಪ್ರಮುಖ ಪ್ರಶ್ನೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್‌ ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕ ಅಜಯ್ ಅಲೋಕ್, ಪುಸ್ತಕದಲ್ಲಿ ಸೂಕ್ತ ವಾಸ್ತವಾಂಶ ಹಾಗೂ ಅಂಕಿ-ಅಂಶಗಳನ್ನು ನೀಡದಿರುವುದೇ ಸಮಸ್ಯೆಯಾಗಿರಬಹುದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಕಾಶಕರು ಪುಸ್ತಕ ಪ್ರಕಟಿಸುವ ಮುನ್ನ ಅದರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ವಾಸ್ತವಾಂಶ ಪರಿಶೀಲನೆ ನಡೆಸುವುದು ಸಹಜ ಎಂದು ಹೇಳಿದ್ದಾರೆ.

ಚೀನಾ, ಮೋದಿ ಮತ್ತು ಆರ್‌ಎಸ್‌ಎಸ್‌ ಕುರಿತು ವಿವಾದ?

ಕಾಂಗ್ರೆಸ್ ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅವರ ಆತ್ಮಕಥೆಯಲ್ಲಿನ ಮೂರು ಪ್ರಮುಖ ವಿಚಾರಗಳು ಪೆಂಗ್ವಿನ್ ಇಂಡಿಯ ಜತೆಗಿನ ಚರ್ಚೆಯ ಕೇಂದ್ರಬಿಂದುವಾಗಿದ್ದವು. ಮೊದಲನೆಯದು ಭಾರತ-ಚೀನಾ ಗಡಿ ವಿವಾದ. ಚೀನಾದ ಗಡಿ ಅತಿಕ್ರಮಣಗಳು ಹಾಗೂ ಪ್ರಸ್ತುತ ಗಡಿ ಪರಿಸ್ಥಿತಿಯ ಕುರಿತು ಪುಸ್ತಕದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಎರಡನೆಯದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ಕಾರ್ಯಶೈಲಿ ಮತ್ತು ಕೇಂದ್ರ ಸರ್ಕಾರದ ಹಲವು ಪ್ರಮುಖ ನೀತಿಗಳ ಕುರಿತ ಸೋನಿಯಾ ಗಾಂಧಿ ಅವರ ಅಭಿಪ್ರಾಯಗಳು. ಮೂರನೆಯದು ರಾಷ್ಟ್ರೀಯ ಸ್ವಯಂಸೇವಕ ಸಂಘ. ರಾಷ್ಟ್ರೀಯ ವ್ಯವಹಾರಗಳು ಹಾಗೂ ಭಾರತದ ಸಾಮಾಜಿಕ ವ್ಯವಸ್ಥೆಯ ಮೇಲೆ ಆರ್‌ಎಸ್‌ಎಸ್‌ನ ಪ್ರಭಾವದ ಕುರಿತು ಸೋನಿಯಾ ಗಾಂಧಿ ಅವರ ಅಭಿಪ್ರಾಯಗಳು ಪುಸ್ತಕದಲ್ಲಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈ ಭಾಗಗಳಲ್ಲಿ ಕೆಲವು ಅಂಶಗಳನ್ನು ಸಂಪಾದಿಸುವ ಅಥವಾ ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯ ಸೂಚಿಸಿತ್ತು ಎನ್ನಲಾಗಿದ್ದು, ಸೋನಿಯಾ ಗಾಂಧಿ ಅದಕ್ಕೆ ಒಪ್ಪಿರಲಿಲ್ಲ. ಪುಸ್ತಕದಲ್ಲಿರುವ ವಿಚಾರಗಳು ತಮ್ಮ ಅನುಭವ ಮತ್ತು ದೃಷ್ಟಿಕೋನವನ್ನು ಆಧರಿಸಿರುವುದರಿಂದ ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.