ನವದೆಹಲಿ: ಭಾರೀ ಮಳೆಯಿಂದಾಗಿ ( Heavy Rain) ದೆಹಲಿಯ (Delhi) ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರಗಳ ಬಳಿ ನೀರು (Airport Waterlogging) ನಿಂತು ಪ್ರಯಾಣಿಕರು ಪರದಾಡುವಂತಾಗಿದೆ. ವಿಮಾನ ನಿಲ್ದಾಣದ ಗೇಟ್‌ಗಳ ಬಳಿ ಸಂಗ್ರಹವಾಗಿದ್ದ ನೀರಿನ ಮೇಲೆ ಬೆಳಕು ಪ್ರತಿಫಲಿಸಿ ನೆಲವು ಮಿನುಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಭಾರೀ ಮಳೆಯ ಪರಿಣಾಮ ವಿಮಾನ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ದೆಹಲಿಗೆ ಬರಬೇಕಿದ್ದ ಐದು ವಿಮಾನಗಳನ್ನು ಲಖನೌ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ನೀರು ನಿಂತಿರುವುದರಿಂದ ಪ್ರಯಾಣಿಕರು ತಮ್ಮ ಪ್ಯಾಂಟ್‌ಗಳನ್ನು ಮೇಲಕ್ಕೆ ಸುತ್ತಿಕೊಂಡು, ನೀರಿನಲ್ಲೇ ಲಗೇಜ್ ಟ್ರಾಲಿಗಳನ್ನು ತಳ್ಳಿಕೊಂಡು ಪ್ರವೇಶ ದ್ವಾರಗಳತ್ತ ಸಾಗುತ್ತಿರುವ ದೃಶ್ಯಗಳು ಕಂಡುಬಂದಿವೆ.
“ನಾನು ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ನೋಡಿಲ್ಲ. ಇಲ್ಲಿ ತುಂಬಾ ನೀರು ನಿಂತಿದೆ. ಸುಮಾರು ಅರ್ಧ ಗಂಟೆಯಿಂದ ನಿಂತಿದ್ದೇನೆ. ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗುವವರೆಗೆ ಕಾಯುತ್ತಿದ್ದೇನೆ. ನಂತರ ಆಗಮನ ದ್ವಾರಗಳತ್ತ ಹೋಗುತ್ತೇನೆ,” ಎಂದು ಪ್ರಯಾಣಿಕರೊಬ್ಬರು ಹೇಳಿದರು.
ಮತ್ತೊಬ್ಬ ಪ್ರಯಾಣಿಕರು, “ಸುಮಾರು ಎರಡು ವರ್ಷಗಳ ಹಿಂದೆ ಒಮ್ಮೆ ಹೀಗಾಗಿತ್ತು. ಈ ವರ್ಷ ಮತ್ತೆ ಇದೇ ಪರಿಸ್ಥಿತಿ ಕಾಣುತ್ತಿದೆ. ಈ ಬಾರಿ ಮಳೆ ಸ್ವಲ್ಪ ಹೆಚ್ಚಾಗಿದೆ. ಇಂದು ಜನ್ಮಾಷ್ಟಮಿಯೂ ಆಗಿರುವುದರಿಂದ ಪೂಜಾ ಕಾರ್ಯಕ್ರಮಗಳೂ ನಡೆಯುತ್ತಿವೆ,” ಎಂದು ಹೇಳಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ದೆಹಲಿಯ ಹಲವು ಪ್ರದೇಶಗಳಲ್ಲೂ ಜಲಾವೃತ ಪರಿಸ್ಥಿತಿ ವರದಿಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಗೆ ಹಳದಿ ಎಚ್ಚರಿಕೆ ನೀಡಿದ್ದು, ತಗ್ಗು ಪ್ರದೇಶಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಾಧ್ಯತೆಯಿರುವುದರಿಂದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ನಗರದ ಕೆಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕ ಸಾರಿಗೆ ವಿಳಂಬವಾಗುವ ಸಾಧ್ಯತೆಯನ್ನೂ ಇಲಾಖೆ ತಿಳಿಸಿದೆ.
ಹಿಮಾಚಲ ಪ್ರದೇಶದಲ್ಲಿ ಅಬ್ಬರಿಸಿದ ಮಳೆ-ಗಾಳಿ: ಒಂದೇ ತಿಂಗಳಲ್ಲಿ 157 ಮಂದಿ ಸಾವು, 260 ರಸ್ತೆ ಸಂಪರ್ಕ ಕಡಿತ
ಗುಡುಗು-ಮಿಂಚಿನ ಸಂದರ್ಭದಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು ಹಾಗೂ ಪವರ್ ಲೈನ್‌ಗಳ ಸಮೀಪ ಹೋಗದಂತೆ ಮತ್ತು ಪ್ರಯಾಣಕ್ಕೂ ಮುನ್ನ ಸಂಚಾರದ ಸ್ಥಿತಿಗತಿಗಳನ್ನು ಪರಿಶೀಲಿಸುವಂತೆ IMD ಸಲಹೆ ನೀಡಿದೆ.
ಮಧ್ಯಾಹ್ನ 2.15ಕ್ಕೆ ಹೊರಡಿಸಿದ ಅಲ್ಪಾವಧಿಯ ಮುನ್ಸೂಚನೆಯ ಪ್ರಕಾರ, ಮಧ್ಯಾಹ್ನ 2.15ರಿಂದ 4.15ರವರೆಗೆ ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಮತ್ತು ಮಿಂಚು ಸಂಭವಿಸುವ ಸಾಧ್ಯತೆಯಿದ್ದು, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಅದೇ ರೀತಿ ಸಂಜೆ 5ರಿಂದ ರಾತ್ರಿ 8ರವರೆಗೆ ಬಹುತೇಕ ಪ್ರದೇಶಗಳಲ್ಲಿ ಮತ್ತೊಂದು ಸುತ್ತಿನ ಹಗುರದಿಂದ ಸಾಧಾರಣ ಮಳೆ, ಗುಡುಗು ಮತ್ತು ಮಿಂಚು ಸಂಭವಿಸುವ ಸಾಧ್ಯತೆಯಿದೆ. ಕೆಲವೆಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಮುಂದಿನ ಮೂರು ಗಂಟೆಗಳಲ್ಲಿ ಕೆಲವು ಪ್ರದೇಶಗಳಲ್ಲಿ 50ರಿಂದ 100 ಮಿ.ಮೀ.ವರೆಗೆ ಭಾರೀ ಮಳೆ, ಗುಡುಗು-ಮಿಂಚು ಹಾಗೂ ಗಂಟೆಗೆ 40–50 ಕಿ.ಮೀ. ವೇಗದ ಗಾಳಿ, ಗರಿಷ್ಠ 60 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ಮುನ್ಸೂಚಿಸಿದೆ.