ಕೇರಳ: ಭಾರಿ ಮಳೆಯಿಂದಾಗಿ (Heavy rain) ಐದು ಮಂದಿ ಸಾವನ್ನಪ್ಪಿರುವ ಘಟನೆ ಕೇರಳಂನಲ್ಲಿ ನಡೆದಿದೆ. ಇಬ್ಬರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕೇರಳಂನಲ್ಲಿ ಭಾನುವಾರ ಭಾರಿ ಮಳೆಯಾಗಿದ್ದು, ಅಲ್ಲಲ್ಲಿ ಭೂಕುಸಿತ, ಹಠಾತ್ ಪ್ರವಾಹ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ ( India Meteorological Department) ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಎರಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಪಾಯಕಾರಿ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಾಂತರಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ.
ತೀವ್ರ ಮಳೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಗಂಟೆಗೊಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲು ಮತ್ತು ಅಗತ್ಯವಿದ್ದಲ್ಲಿ ಸ್ಥಳಾಂತರ ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಲಾಗಿದೆ.
ಕೋಲ್ಕತಾದಲ್ಲಿ ಟಿಎಂಸಿ, ಸಿಪಿಐಎಂ ಕಚೇರಿ, ಮಾಜಿ ಶಾಸಕನ ಮನೆ ಧ್ವಂಸ: ಬಿಜೆಪಿ ವಿರುದ್ಧ ದಾಳಿ ಆರೋಪ
ಸೆಪ್ಟೆಂಬರ್ 20 ಮತ್ತು 21 ರಂದು ರಾಜ್ಯದ ಅಲ್ಲಲ್ಲಿ ಗುಡುಗು ಸಹಿತ ಮಳೆ ಸೇರಿದಂತೆ ಮುಂದಿನ ನಾಲ್ಕು ದಿನಗಳ ಕಾಲ ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ವಿಘ್ನೇಶ್ವರಿ ಅವರು ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹವಾಮಾನ ಪರಿಸ್ಥಿತಿಯ ಕುರಿತು ಎಸ್‌ಎಂಎಸ್ ಮೂಲಕ ಎಚ್ಚರಿಕೆಗಳನ್ನು ರವಾನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಮಲಪ್ಪುರಂ ಜಿಲ್ಲೆಯ ನಿಲಂಬೂರ್-ಅಮರಂಬಲಂ ಪ್ರದೇಶದಲ್ಲಿ ಕೋಟ್ಟಾಪುಳಾ ನದಿಯ ಪ್ರವಾಹಕ್ಕೆ ಸಿಲುಕಿ ವಂಡೂರ್‌ನಿಂದ ಬಂದಿದ್ದ ಐವರು ಕೊಚ್ಚಿ ಹೋಗಿದ್ದು, ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಒಬ್ಬರನ್ನು ಸ್ಥಳೀಯರೊಬ್ಬರು ರಕ್ಷಿಸಿದರು. ಅಲ್ಲಿ ವಿಶೇಷ ವಿಪತ್ತು ನಿರ್ವಹಣಾ ಪಡೆಯ ತಂಡವನ್ನು ತಕ್ಷಣವೇ ನಿಯೋಜಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಟೀಕೋಯ್ ಸಮೀಪದ ವೇಲಾತುಸ್ಸೆರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತಮಿಳುನಾಡಿನ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಅವರ ಸ್ನೇಹಿತೆ ಗಾಯಗೊಂಡಿದ್ದಾರೆ. ಮೃತರನ್ನು ಚೆನ್ನೈನ ಜವಾಹರ್ ನಗರದ ನಿವಾಸಿ ಸಂಗೀತ ಅರುಲ್ ಲಾಲ್ (35) ಎಂದು ಗುರುತಿಸಲಾಗಿದೆ.
ವಾಗಮೋನ್‌ನಿಂದ ಸಂಜೆ ಸ್ಕೂಟರ್ ನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದು, ಸ್ಕೂಟರ್ ಚಲಾಯಿಸುತ್ತಿದ್ದ ಸಂಗೀತ ಅದರಲ್ಲಿ ಸಿಕ್ಕಿಹಾಕಿಕೊಂಡರು. ಅವರೊಂದಿಗೆ ಇದ್ದ ಸ್ನೇಹಿತೆ ಅಪಾಯದಿಂದ ಪಾರಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರಕ್ ಚಾಲಕನನ್ನು ಬೇಹುಗಾರಿಕೆಗೆ ಭಾರತದೊಳಗೆ ಬಿಟ್ಟ ಬಿಟ್ಟ ಪಾಕಿಸ್ತಾನದ ಐಎಸ್‌ಐ; ಸಂಚು ಬಯಲಾಗಿದ್ದು ಹೇಗೆ?
ಮಳೆಯಿಂದ ರಕ್ಷಣೆ ಪಡೆಯಲು ಆಶ್ರಯ ಪಡೆದಿದ್ದ ಶೆಡ್‌ನ ಮೇಲೆ ಮಣ್ಣು ಕುಸಿದುಬಿದ್ದ ಪರಿಣಾಮ ಇಬ್ಬರು ಮೃತಪಟ್ಟು, ಓರ್ವ ಮಹಿಳೆ ಗಾಯಗೊಂಡ ಘಟನೆ ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರ್‌ನಲ್ಲಿ ಮಧ್ಯಾಹ್ನ ಸುಮಾರು 3:30ಕ್ಕೆ ನಡೆದಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.