ಬಸ್ತಾರ್‌ನಲ್ಲಿ ಐತಿಹಾಸಿಕ ಕ್ಷಣ: ಒಟ್ಟಿಗೆ ಶರಣಾದ 108 ಮಾವೋವಾದಿಗಳು
ಮಾವೋವಾದಿ ವಿರೋಧಿ ಅಭಿಯಾನಕ್ಕೆ ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಒಟ್ಟು 108 ಮಾವೋವಾದಿಗಳು ಏಕಕಾಲದಲ್ಲಿ ಶರಣಾಗಿದ್ದು, ಇದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಮಾವೋವಾದಿಗಳ ನಿರ್ಮೂಲನೆಗೆ 2026ರ ಮಾರ್ಚ್ 31ರ ಗಡುವಿನ ಮೊದಲೇ ನಡೆದಿದೆ.
ಸಂಗ್ರಹ ಚಿತ್ರ -
ಛತ್ತೀಸ್‌ಗಢ: ಏಕಕಾಲದಲ್ಲಿ 108 ಮಾವೋವಾದಿಗಳು (Maoists) ಶರಣಾಗಿರುವ ಐತಿಹಾಸಿಕ ಘಟನೆ ಬುಧವಾರ ಛತ್ತೀಸ್‌ಗಢದ (Chhattisgarh) ಬಸ್ತಾರ್‌ನಲ್ಲಿ (Bastar) ನಡೆದಿದೆ. ಭಾರತದ ಮಾವೋವಾದಿ ವಿರೋಧಿ ಅಭಿಯಾನದ (anti-Maoist campaign) ಅಂತಿಮ ಹಂತದಲ್ಲಿಇದು ಭದ್ರತಾ ಪಡೆಗಳಿಗೆ ಸಿಕ್ಕಿದ ಅತೀ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಮಾವೋವಾದಿಗಳ ನಿರ್ಮೂಲನೆಗೆ 2026ರ ಮಾರ್ಚ್ 31ರ ಗಡುವಿನ ಮೊದಲೇ ದಂಡಕಾರಣ್ಯ ವಿಶೇಷ ವಲಯ ಸಮಿತಿಗೆ (DKSZC) ಸೇರಿದ ಅನೇಕರಿಗೆ ಸುಮಾರು 3.95 ಕೋಟಿ ರೂ. ಗಳ ಸರ್ಕಾರಿ ಬಹುಮಾನವನ್ನು ನೀಡಿ ಸ್ವಾಗತಿಸಲಾಯಿತು.
ಬಸ್ತಾರ್‌ನಲ್ಲಿ ಶರಣಾಗಿರುವ ಮಾವೋವಾದಿಗಳು ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು 3.61 ಕೋಟಿ ರೂ. ನಗದು ಮತ್ತು ಸುಮಾರು 1.64 ಕೋಟಿ ರೂ. ಮೌಲ್ಯದ ಸುಮಾರು ಒಂದು ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಆಟವಾಡುತ್ತಿದ್ದ ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದ ಕಿರಾತಕ: ಐವರಿಗೆ ಗಾಯ, ಇಬ್ಬರು ಗಂಭೀರ
ವಶಪಡಿಸಿಕೊಂಡಿರುವ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳಲ್ಲಿ 101 ಆಧುನಿಕ ಮತ್ತು ಸುಧಾರಿತ ಬಂದೂಕುಗಳು ಸೇರಿವೆ. ಅವುಗಳಲ್ಲಿ ಏಳು ಎಕೆ -47 ರೈಫಲ್‌ಗಳು, ಹತ್ತು ಐಎನ್ಎಸ್ಎಎಸ್ ರೈಫಲ್‌ಗಳು, ಒಂದು ಕಾರ್ಬೈನ್, ಐದು ಎಸ್ ಎಲ್ ಆರ್ ಗಳು, ನಾಲ್ಕು ಲೈಟ್ ಮೆಷಿನ್ ಗನ್‌ಗಳು, ಇಪ್ಪತ್ತು .303 ರೈಫಲ್‌ಗಳು, 25 ಹನ್ನೆರಡು-ಬೋರ್ ಗನ್‌ಗಳು, 11 ಬಿಜಿಎಲ್ ಲಾಂಚರ್‌ಗಳು, ಒಂದು ಮಾರ್ಟರ್, ಮೂರು .315-ಬೋರ್ ರೈಫಲ್‌ಗಳು, 13 ಭರ್ಮರ್ ಗನ್‌ಗಳು ಮತ್ತು ಮೆಗಾ ಬಿಜಿಎಲ್ ಲಾಂಚರ್‌ಗಳು ಸೇರಿವೆ.
ಹಲವಾರು ಮಾವೋವಾದಿ ಕಾರ್ಯಕರ್ತರು ಭದ್ರತಾ ಪಡೆಗಳೊಂದಿಗೆ ಸಂಪರ್ಕ ಸಾಧಿಸಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಇಚ್ಛೆ ವ್ಯಕ್ತಪಡಿಸಿದ ಬಳಿಕ ಶರಣಾಗತಿ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ ಅರುಣ್ ದೇವ್ ಗೌತಮ್, ಸಾಮೂಹಿಕ ಶರಣಾಗತಿಯು ಬಸ್ತಾರ್‌ನಲ್ಲಿ ಮಾವೋವಾದಿ ಜಾಲವನ್ನು ಕೆಡವಲು ರಾಜ್ಯವು ಪ್ರಾರಂಭಿಸಿದ ಪೂನಾ ಮಾರ್ಗೆಮ್ ಅಭಿಯಾನದ ಪರಿಣಾಮವಾಗಿದೆ. 2024ರ ಜನವರಿ 1ರಿಂದ 2,714 ಮಾವೋವಾದಿಗಳು ಶರಣಾಗಿದ್ದಾರೆ ಎಂದರು.
ಶರಣಾಗಿರುವ ಮಾವೋವಾದಿಗಳಲ್ಲಿ ಹಲವು ಪ್ರಮುಖರು ಸೇರಿದ್ದು, ಅವರಲ್ಲಿ ಪಶ್ಚಿಮ ಬಸ್ತಾರ್ ವಿಭಾಗದ ಡಿವಿಸಿಎಂ ರಾಹುಲ್ ತೇಲಂ, ಪಾಂಡ್ರು ಕೊವಾಸಿ, ಜಿತ್ರು ಓಯಮ್, ಪೂರ್ವ ಬಸ್ತಾರ್ ವಿಭಾಗ ಸಮಿತಿಯ ಡಿವಿಸಿಎಂ ರಾಮಧರ್ ಅಲಿಯಾಸ್ ಬಿರು, ಉತ್ತರ ಬಸ್ತಾರ್ ವಿಭಾಗ ಸಮಿತಿಯ ಡಿವಿಸಿಎಂ ಮಲ್ಲೇಶ್, ಪಿಎಲ್‌ಜಿಎ ಬೆಟಾಲಿಯನ್ ಸಂಖ್ಯೆ 1 ರ ಸಿವೈಪಿಸಿ ಕಮಾಂಡರ್ ಮುಚಾಕಿ ಮತ್ತು ಆಂಧ್ರ-ಒಡಿಶಾ ಗಡಿ (ಎಒಬಿ) ಪ್ರದೇಶದ ಡಿವಿಸಿಎಂ ಕೋಸಾ ಮಾಂಡವಿ ಸೇರಿದ್ದಾರೆ.
ಪ್ರೀತಿಸುವಂತೆ ಸಹಪಾಠಿ ಒತ್ತಾಯ; ಶಾಲಾ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಈ ಕುರಿತು ಪ್ರತಿಕ್ರಿಯಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಬಸ್ತಾರ್ ಈಗ ಶಾಂತಿ ಮತ್ತು ಸ್ಥಿರತೆಯತ್ತ ಸಾಗುತ್ತಿದೆ. ಮಾವೋವಾದಿಗಳ ಶರಣಾಗತಿ ಇದರ ಬಲವಾದ ಸಂಕೇತ. ರಾಜ್ಯದ ಪುನರ್ವಸತಿ ನೀತಿ ಮತ್ತು ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಗಳು ಇದಕ್ಕೆ ಕಾರಣ ಎಂದರು.
ಭದ್ರತೆ, ಅಭಿವೃದ್ಧಿ ಮತ್ತು ವಿಶ್ವಾಸ ಎಂಬ ತಂತ್ರವನ್ನು ಅನುಸರಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.