ಬೆಂಗಳೂರು: ಮನೆಯ ಅಂಗಳದಲ್ಲಿ ಮಗುವಿನ ನಗು ಕೇಳಿದಾಗ ಆ ಮನೆಗೆ ಹೊಸ ಚೈತನ್ಯ ಬಂದಂತೆ ಭಾಸವಾಗುತ್ತದೆ. ಪುಟ್ಟ ಹೆಜ್ಜೆಗಳ ಸದ್ದು, ಮುಗ್ಧ ಮಾತುಗಳು, ಬಣ್ಣಬಣ್ಣದ ಕನಸುಗಳು, ಕಣ್ಣಲ್ಲಿ ತುಂಬಿರುವ ನೂರಾರು ಆಸೆಗಳು. ಇವೆಲ್ಲವೂ ಬಾಲ್ಯದ ಸೊಬಗು. ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಕನಸಿದೆ, ಆ ಕನಸಿನ ಹಿಂದೆ ಒಂದು ಭವಿಷ್ಯವಿದೆ. ಅಂತಹ ಬಾಲ್ಯವನ್ನು ಸಂಭ್ರಮಿಸುವುದರ ಜತೆಗೆ ಮಕ್ಕಳ ಹಕ್ಕು, ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಯ ಮಹತ್ವವನ್ನು ಸಾರುವ ದಿನವೇ ಮಕ್ಕಳ ದಿನಾಚರಣೆ (Children's Day). ಪ್ರತಿವರ್ಷ ನವೆಂಬರ್ 14ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಕೇವಲ ಮಕ್ಕಳಿಗೆ ಸಿಹಿ ಹಂಚಿ, ಆಟವಾಡಿಸಿ ಸಂಭ್ರಮಿಸುವ ದಿನವಲ್ಲ; ಬದಲಾಗಿ ಮಕ್ಕಳನ್ನು ನಾವು ಹೇಗೆ ನೋಡುತ್ತಿದ್ದೇವೆ, ಅವರ ಕನಸುಗಳಿಗೆ ಎಷ್ಟು ಬೆಲೆ ಕೊಡುತ್ತಿದ್ದೇವೆ, ಅವರ ಭವಿಷ್ಯಕ್ಕಾಗಿ ಸಮಾಜವಾಗಿ ಏನು ಮಾಡುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಹೌದು.
ಮಕ್ಕಳ ದಿನಾಚರಣೆಯನ್ನು ಆಚರಿಸುವುದೇಕೆ?
ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವೇ ನವೆಂಬರ್ 14. 1889ರ ನವೆಂಬರ್ 14ರಂದು ಜನಿಸಿದ ನೆಹರು ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ಇತ್ತು. ಮಕ್ಕಳೊಂದಿಗೆ ಬೆರೆಯುವುದು, ಅವರ ಮಾತುಗಳನ್ನು ಆಲಿಸುವುದು, ಅವರ ಸಂತೋಷದಲ್ಲಿ ಭಾಗಿಯಾಗುವುದು ಅವರಿಗೆ ಬಹಳ ಇಷ್ಟವಾಗಿತ್ತು. ಮಕ್ಕಳ ಮುಗ್ಧತೆ ಮತ್ತು ಅವರಲ್ಲಿದ್ದ ಅಪಾರ ಸಾಮರ್ಥ್ಯದ ಬಗ್ಗೆ ಅವರಿಗೆ ಅಪಾರ ನಂಬಿಕೆಯಿತ್ತು. ಹೀಗಾಗಿಯೇ ಮಕ್ಕಳು ಅವರನ್ನು ಪ್ರೀತಿಯಿಂದ 'ಚಾಚಾ ನೆಹರು' ಎಂದು ಕರೆಯುತ್ತಿದ್ದರು. ಆರಂಭದಲ್ಲಿ ಭಾರತದಲ್ಲಿ ನವೆಂಬರ್ 20ರಂದು ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ 1964ರಲ್ಲಿ ನೆಹರು ಅವರ ನಿಧನದ ನಂತರ, ಮಕ್ಕಳ ಮೇಲಿನ ಅವರ ಪ್ರೀತಿ, ಕಾಳಜಿ ಮತ್ತು ಮಕ್ಕಳ ಕಲ್ಯಾಣದ ಕನಸನ್ನು ಗೌರವಿಸುವ ಉದ್ದೇಶದಿಂದ ಅವರ ಜನ್ಮದಿನವಾದ ನವೆಂಬರ್ 14ನ್ನು ಮಕ್ಕಳ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಈ ದಿನ ದೇಶದಾದ್ಯಂತ ಮಕ್ಕಳ ದಿನಾಚರಣೆಯಾಗಿ ವಿಶೇಷ ಮಹತ್ವ ಪಡೆದುಕೊಂಡಿದೆ.
ಮುದ್ದು ಮಗುವಿಗೆ ಶುಭ ಕೋರಲು ಇಲ್ಲಿದೆ ಶುಭ ಸಂದೇಶಗಳು
ಆಚರಣೆಯ ಹಿಂದಿರುವ ಉದ್ದೇಶವೇನು?
ಮಕ್ಕಳ ದಿನಾಚರಣೆಯ ನಿಜವಾದ ಆಶಯ ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ ಕಲ್ಪಿಸುವುದಾಗಿದೆ. ಮಗು ಶ್ರೀಮಂತ ಮನೆಯಲ್ಲಾಗಲಿ, ಬಡ ಕುಟುಂಬದಲ್ಲಾಗಲಿ ಜನಿಸಿರಬಹುದು. ಆದರೆ ಶಿಕ್ಷಣ ಪಡೆಯುವ ಹಕ್ಕು, ಸುರಕ್ಷಿತವಾಗಿ ಬದುಕುವ ಹಕ್ಕು ಮತ್ತು ತನ್ನ ಪ್ರತಿಭೆಯನ್ನು ತೋರಿಸುವ ಅವಕಾಶ ಪ್ರತಿಯೊಬ್ಬ ಮಗುವಿಗೂ ಸಮಾನವಾಗಿ ದೊರೆಯಬೇಕು. ಯಾವುದೇ ಮಗು ಬಡತನದಿಂದ ಶಿಕ್ಷಣದಿಂದ ವಂಚಿತವಾಗಬಾರದು. ಬಾಲಕಾರ್ಮಿಕತೆ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯಂತಹ ಸಾಮಾಜಿಕ ಪಿಡುಗುಗಳಿಂದ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂಬ ಅರಿವು ಮೂಡಿಸುವುದೂ ಈ ದಿನದ ಪ್ರಮುಖ ಉದ್ದೇಶ.
ಶಾಲೆಗಳಲ್ಲಿ ಸಂಭ್ರಮದ ವಾತಾವರಣ
ಮಕ್ಕಳ ದಿನಾಚರಣೆ ಬಂತೆಂದರೆ ಸಾಕು ಎಲ್ಲ ಶಾಲೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡುತ್ತದೆ. ಬಣ್ಣ ಬಣ್ಣದ ಹೊಸ ಬಟ್ಟೆಗಳನ್ನು ತೊಟ್ಟು ಸಂತಸದಿಂದ ಎಂದು ಶಾಲೆಗೆ ಹೋಗದ ಮಕ್ಕಳು ಕೂಡಾ ಅಂದು ಹೋಗುತ್ತಾರೆ. ಆ ದಿನ ಮಕ್ಕಳಿಗೆ ಎಂದಿನಂತೆ ಪಾಠ, ಪ್ರವಚನಗಳನ್ನು ಮಾಡದೆ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಶಿಕ್ಷಕರು ಮಕ್ಕಳಿಗೆ ಶುಭಾಶಯ ಕೋರಿ, ಕೆಲವೆಡೆ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ನೃತ್ಯ, ಸಂಗೀತ, ಭಾಷಣ, ಚಿತ್ರಕಲೆ, ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲಾಗುತ್ತದೆ. ಬಹುಮಾನ ವಿತರಣೆ, ಸಿಹಿ ಹಂಚಿಕೆ ಮತ್ತು ಮನರಂಜನಾ ಚಟುವಟಿಕೆಗಳು ಮಕ್ಕಳ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ. ಈ ದಿನ ಶಾಲೆಯ ವಾತಾವರಣವೇ ಮಕ್ಕಳ ನಗು, ಚಪ್ಪಾಳೆ ಮತ್ತು ಸಂಭ್ರಮದಿಂದ ಕಳೆಗಟ್ಟುತ್ತದೆ.
ಬದಲಾಗಬೇಕಿದೆ ಮಕ್ಕಳನ್ನು ನೋಡುವ ದೃಷ್ಟಿಕೋನ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಮೇಲೆ ಓದಿನ ಒತ್ತಡ, ಅಂಕಗಳ ಒತ್ತಡ ಹಾಗೂ ಸಾಧನೆಯ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಆದರೆ ಪ್ರತಿಯೊಂದು ಮಗುವೂ ಒಂದೇ ರೀತಿಯ ಪ್ರತಿಭೆ ಹೊಂದಿರುವುದಿಲ್ಲ. ಕೆಲವರಿಗೆ ಓದಿನಲ್ಲಿ ಆಸಕ್ತಿ ಇದ್ದರೆ, ಇನ್ನು ಕೆಲವರಿಗೆ ಕ್ರೀಡೆ, ಸಂಗೀತ, ಕಲೆ ಅಥವಾ ಸೃಜನಶೀಲ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಮಕ್ಕಳನ್ನು ಪರಸ್ಪರ ಹೋಲಿಸುವ ಬದಲು ಅವರ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ಮಕ್ಕಳಿಗೆ ಕೇವಲ ಉತ್ತಮ ಅಂಕಗಳೇ ಬದುಕಿನ ಯಶಸ್ಸಿನ ಮಾನದಂಡವಲ್ಲ, ಉತ್ತಮ ಸಂಸ್ಕಾರ, ಮಾನವೀಯತೆ, ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ಆಲೋಚಿಸುವ ಗುಣಗಳೂ ಅಷ್ಟೇ ಮುಖ್ಯ.
ಮಕ್ಕಳ ದಿನಾಚರಣೆಗೆ ಈ ರೀತಿ ಭಾಷಣ ಮಾಡಿ! ಟಿಪ್ಸ್ ಇಲ್ಲಿದೆ ಓದಿ
ಮಕ್ಕಳ ನಗು ಉಳಿಸುವುದು ಸಮಾಜದ ಜವಾಬ್ದಾರಿ
ಮಕ್ಕಳ ದಿನಾಚರಣೆ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗಬಾರದು. ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ದುಡಿಮೆಗೆ ಇಳಿಯುವ ಮಕ್ಕಳು, ಶಿಕ್ಷಣದಿಂದ ವಂಚಿತರಾಗಿರುವ ಬಾಲಕರು, ರಕ್ಷಣೆ ಮತ್ತು ಪ್ರೀತಿಗಾಗಿ ಹಂಬಲಿಸುವ ಅನೇಕ ಮುಗ್ಧ ಮನಸ್ಸುಗಳು ನಮ್ಮ ಸಮಾಜದ ಮುಂದಿರುವ ಕಹಿ ವಾಸ್ತವಗಳಾಗಿವೆ. ಇಂತಹ ಮಕ್ಕಳ ಬದುಕಿನಲ್ಲಿಯೂ ಬೆಳಕು ಮೂಡಿದಾಗ ಮಾತ್ರ ಮಕ್ಕಳ ದಿನಾಚರಣೆಯ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಮಕ್ಕಳಿಗೆ ಆಸ್ತಿಯನ್ನು ಕೊಡುವುದಕ್ಕಿಂತ ಉತ್ತಮ ಶಿಕ್ಷಣ ನೀಡುವುದು, ಕನಸು ಕಾಣಲು ಅವಕಾಶ ಕೊಡುವುದು ಮತ್ತು ಆ ಕನಸು ನನಸಾಗಿಸಲು ಬೆಂಬಲವಾಗಿ ನಿಲ್ಲುವುದು ಅತ್ಯಂತ ದೊಡ್ಡ ಕೊಡುಗೆ. ಏಕೆಂದರೆ ಇಂದು ನಾವು ಮಕ್ಕಳಿಗೆ ನೀಡುವ ಪ್ರೀತಿ, ಶಿಕ್ಷಣ ಮತ್ತು ಸಂಸ್ಕಾರವೇ ನಾಳೆ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ.
ಮಕ್ಕಳ ಕಣ್ಣಲ್ಲಿ ಕನಸುಗಳಿರಲಿ, ಮನಸ್ಸಿನಲ್ಲಿ ಆತ್ಮವಿಶ್ವಾಸವಿರಲಿ, ಬದುಕಿನಲ್ಲಿ ಸಮಾನ ಅವಕಾಶಗಳಿರಲಿ. ಅವರ ನಗುವಿಗೆ ಬಡತನದ ನೆರಳು ಬೀಳದಿರಲಿ, ಅವರ ಬಾಲ್ಯಕ್ಕೆ ಭಯದ ಕಹಿ ತಟ್ಟದಿರಲಿ. ಪ್ರತಿಯೊಂದು ಮಗುವಿಗೂ ಸುಂದರ ಬಾಲ್ಯ ದೊರೆತಾಗಲೇ ಸುಂದರ ಸಮಾಜದ ನಿರ್ಮಾಣ ಸಾಧ್ಯ. ಮಕ್ಕಳನ್ನು ಸಂಭ್ರಮಿಸುವುದಷ್ಟೇ ಅಲ್ಲ, ಅವರ ಬಾಲ್ಯವನ್ನು ಕಾಪಾಡೋಣ; ಅವರ ಕನಸುಗಳಿಗೆ ರೆಕ್ಕೆ ನೀಡಿ, ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ.