ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uttar Pradesh Police: ‘ಹೋಳಿ ವರ್ಷಕ್ಕೊಮ್ಮೆ ಬರುವುದು ; ಶುಕ್ರವಾರದ ನಮಾಝ್ 52 ಸಲ ಬರುತ್ತದೆ’ – ಹೀಗ್ಯಾಕಂದ್ರು ಆ ಪೊಲೀಸ್ ಅಧಿಕಾರಿ?

ಕೋಮು ಸಂಬಂಧಿತ ವಿಚಾರಗಳ ಬಗ್ಗೆ ಮಾತನಾಡಿ ವಿವಾದವನ್ನು ಮೇಲಕ್ಕೆ ಎಳೆದುಕೊಳ್ಳುವ ಕೆಲವು ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಇರುತ್ತಾರೆ. ಆದರೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ನಮಾಝ್ ಬಗ್ಗೆ ಆಡಿರುವ ಮಾತೊಂದು ಇದೀಗ ಉತ್ತರ ಪ್ರದೇಶದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ನಮಾಝ್ ಬಗ್ಗೆ ಈ ಪೊಲೀಸ್ ಅಧಿಕಾರಿ ಹೇಳಿದ್ದೇನು?

ಪೊಲೀಸ್ ಅಧಿಕಾರಿ -

Profile Sushmitha Jain Mar 7, 2025 5:50 PM

ಲಖನೌ: ಹೋಳಿ ಹಬ್ಬ (Holi Festival) ವರ್ಷಕ್ಕೊಮ್ಮೆ ಬರುವ ಕಾರಣ, ಹೋಳಿ ಬಣ್ಣಗಳು ಆಗದವರು ಆ ದಿನ ಮನೆಗಳಲ್ಲಿಯೇ ಇರುವಂತೆ ಉತ್ತರ ಪ್ರದೇಶದ ಸಂಭಾಲ್ (Sambhal) ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯೊಂದು ಇದೀಗ ವಿವಾದವನ್ನೆಬ್ಬಿಸಿದೆ. ಉತ್ತರ ಪ್ರದೇಶದಲ್ಲಿ ಈ ವಿಚಾರ ಅಲ್ಲಿನ ವಿರೋಧ ಪಕ್ಷಗಳಿಗೆ ಯೋಗಿ ಸರಕಾರದ ವಿರುದ್ಧ ಟೀಕೆಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದ್ದು, ರಾಜ್ಯದಲ್ಲೀಗ ರಾಜಕೀಯ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಹೊಸ ವಿಚಾರವೊಂದು ಸಿಕ್ಕಿದಂತಾಗಿದೆ. ಪೊಲೀಸ್ ಅಧಿಕಾರಿ ಹೋಳಿ ಹಬ್ಬವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಮಾಝ್ (Namaz) ಬಗ್ಗೆ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಇದೀಗ ಆಗ್ರಹ ಕೇಳಿಬಂದಿದೆ.

ಮುಂಬರುವ ಹೋಳಿ ಹಬ್ಬದ ಆಚರಣೆಗೆ ಪೂರ್ವಭಾವಿಯಾಗಿ ಇಲ್ಲಿನ ಸಂಭಾಲ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ನಾಗರಿಕರ ಶಾಂತಿ ಸಭೆ ನಡೆಯಿತು. ರಮ್ಜಾನ್ ತಿಂಗಳಿನ ಶುಕ್ರವಾರದ ಪ್ರಾರ್ಥನೆಯೂ ಅದೇ ದಿನ ಬರುವುದರಿಂದ, ಆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಠಾಣೆಯಲ್ಲಿ ಈ ಶಾಂತಿ ಸಭೆ ನಡೆದಿದೆ.

ಈ ಮೀಟಿಂಗ್ ನ ಬಳಿಕ ಸಂಭಾಲ್ ಸರ್ಕಲ್ ಅಧಿಕಾರಿ (ಸಿಒ) ಅನುಜ್ ಚೌಧರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿರುವ ವಿಚಾರವೇ ಇದೀಗ ವಿವಾದವನ್ನು ಹುಟ್ಟುಹಾಕಿದೆ. ಅವರ ಹೇಳಿಕೆಯ ಪೂರ್ಣಪಾಠ ಹೀಗಿದೆ: ‘ಹೋಳಿ ಎಂಬುದು ವರ್ಷಕ್ಕೊಮ್ಮೆ ಬರುವ ಹಬ್ಬವಾಗಿದೆ. ಆದರೆ ಶುಕ್ರವಾರದ ಪ್ರಾರ್ಥನೆ ವರ್ಷದಲ್ಲಿ 52 ಸಲ ಬರುತ್ತದೆ. ಯಾರಿಗಾದರೂ ಹೋಳಿ ಆಚರಣೆ ಕಿರಿಕಿರಿ ಉಂಟುಮಾಡುವುದಿದ್ದಲ್ಲಿ, ಅಂತವರು ಆ ದಿನ ತಮ್ಮ ಮನೆಯೊಳಗೇ ಇರಬಹುದು. ಮನೆಯಿಂದ ಹೊರಬರುವವರು ವಿಶಾಲವಾದ ಮನೋಭಾವನೆಯನ್ನು ಹೊಂದಿರಬೇಕು, ಯಾಕೆಂದರೆ, ಹಬ್ಬಗಳಿರುವುದು ಎಲ್ಲರೂ ಜೊತೆಯಾಗಿ ಸಂಭ್ರಮಿಸಲು’ ಎಂದು ಹೇಳಿದ್ದಾರೆ.

ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದಿರುವ ಆ ಅಧಿಕಾರಿ ಇದೇ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಕಠಿಣ ನಿಗಾ ವ್ಯವಸ್ಥೆಯ ಅಗತ್ಯತೆತಳ ಬಗ್ಗೆಯೂ ಅವರು ಒತ್ತಿ ಹೇಳಿದ್ದಾರೆ. ಹಬ್ಬಗಳನ್ನು ಸರಾಗವಾಗಿ ಆಚರಿಸಿಕೊಂಡು ಹೋಗುವಂತಾಗಲು ತಿಂಗಳು ಪೂರ್ತಿ ಶಾಂತಿ ಸಭೆಗಳನ್ನು ಆಯೋಜಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾತ ಕೊನೆಯ ಕ್ಷಣದಲ್ಲಿ ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್

ಎರಡೂ ಸಮುದಾಯದವರು ಇನ್ನೊಬ್ಬರ ಭಾವನೆಗಳನ್ನು ಗೌರವಿಸುವಂತೆಯೂ ಚೌಧರಿ ಆಗ್ರಹಿಸಿದ್ದು, ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಇಚ್ಛೆಯಿಲ್ಲದವರ ಮೇಲೆ ಬಲವಂತವಾಗಿ ಬಣ್ಣಗಳನ್ನು ಎರಚದಂತೆಯೂ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

‘ಮುಸ್ಲಿಂ ಸಮುದಾಯವರು ಈದ್ ಹಬ್ಬವನ್ನು ಎದುರು ನೋಡುವಂತೆ ಹಿಂದು ಸಮುದಾಯವರು ಹೋಳಿ ಸಂಭ್ರಮಕ್ಕಾಗಿ ಕಾಯುತ್ತಿರುತ್ತಾರೆ. ಈ ದಿನ ಜನರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಳ್ಳುತ್ತಾರೆ, ಸಿಹಿ ಹಂಚುತ್ತಾರೆ ಮತ್ತು ಎಲ್ಲೆಡೆ ಸಂಭ್ರಮ ಮನೆ ಮಾಡಿರುತ್ತದೆ. ಇದೇ ರೀತಿಯಲ್ಲಿ ಈದ್ ದಿನದಂದು ಜನರು ವಿಶೇಷ ಅಡುಗೆಗಳನ್ನು ಸಿದ್ಧಮಾಡಿರುತ್ತಾರೆ ಮತ್ತು ಸಮುದಾಯದವರು ಪರಸ್ಪರ ಶುಭಾಶಯಗಳನ್ನು ಹಂಚಿಕೊಳ್ಳುತ್ತಾರೆ. ಎರಡೂ ಹಬ್ಬಗಳ ಸಾರವೆಂದರೆ ಜೊತೆಯಾಗಿರುವುದು ಮತ್ತು ಪರಸ್ಪರ ಗೌರವ ಕೊಟ್ಟುಕೊಳ್ಳುವುದಾಗಿದೆ’ ಎಂದು ಅವರು ಹೇಳಿದ್ದಾರೆ.

ಹಬ್ಬಗಳ ಸಂದರ್ಭಗಳಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳವುದಾಗಿಯೂ ಚೌಧರಿ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಚೌಧರಿ ಅವರ ನಮಾಝ್ ಹೇಳಿಕೆಯನ್ನು ಟೀಕಿಸಿರುವ ಸಮಾಜವಾದಿ ಪಕ್ಷದ ವಕ್ತಾರ ಶರ್ವೇಂದ್ರ ಬಿಕ್ರಮದ ಸಿಂಗ್, ‘ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸಬಾರದು’ ಎಂದು ಕಿಡಿ ಕಾರಿದ್ದಾರೆ. ಇನ್ನು ಚೌಧರಿ ಅವರ ಈ ಹೇಳಿಕೆಯನ್ನು ಉತ್ತರ ಪ್ರದೇಶ ಮಾಧ್ಯಮ ಮಂಡಳಿ ಉಪಾಧ್ಯಕ್ಷ ಮನೀಶ್ ಹಿಂದ್ವಿ ಸಹ ಟೀಕಿಸಿದ್ದಾರೆ.

ಕಳೆದ ವರ್ಷದ ನ.24ರಂದು ಸಂಭಾಲ್ ನ ಕೋಟ್ ಗರ್ವಿ ಪ್ರದೇಶದಲ್ಲಿ ಹಿಂಸಾಚಾರ ಉಂಟಾಗಿತ್ತು. ಮುಘಲ್-ಇರಾ ಜುಮ್ಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶ ಮಾಡಿದ್ದನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಉಂಟಾಗಿದ್ದ ಹಿಂಸಾಚಾರದಲ್ಲಿ ನಾಲ್ಕು ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.