ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಲ್‌ಪಿಜಿ ಕೊರತೆ ನೀಗಲು ಕೇಂದ್ರದಿಂದ ನೂತನ ಯೋಜನೆ; 10 ಕೆಜಿ ಗ್ಯಾಸ್ ಸಿಲಿಂಡರ್ ವಿತರಣೆಗೆ ಚಿಂತನೆ

ಇರಾನ್‌ನ ಹೊರ್ಮುಜ್ ಜಲಸಂಧಿಯಲ್ಲಿನ ಸಂಘರ್ಷದಿಂದ ಭಾರತಕ್ಕೆ ಎಲ್‌ಪಿಜಿ ಆಮದು ಕಡಿಮೆಯಾಗಿದ್ದು, ದೇಶೀಯ ದಾಸ್ತಾನು ಕಾಪಾಡಲು ಸರ್ಕಾರ ಪ್ರತಿ ಮನೆಗೆ ನೀಡುವ ಗ್ಯಾಸ್ ಪ್ರಮಾಣವನ್ನು 14.2 ಕೆಜಿಯಿಂದ 10 ಕೆಜಿಗೆ ಇಳಿಸುವ ಕುರಿತು ಚಿಂತನೆ ನಡೆಸುತ್ತಿದೆ. ಈ ಕ್ರಮದಿಂದ ಹೆಚ್ಚಿನ ಜನರಿಗೆ ಗ್ಯಾಸ್ ವಿತರಣೆ ಸಾಧ್ಯವಾಗಬಹುದು. ಬೆಲೆಯೂ ತೂಕಕ್ಕೆ ಅನುಗುಣವಾಗಿ ಕಡಿಮೆಯಾಗುವ ಸಾಧ್ಯತೆ ಇದೆ.

ಗ್ಯಾಸ್ ಸಿಲಿಂಡರ್ (ಸಾಂದರ್ಭಿಕ ಚಿತ್ರ)

ನವದೆಹಲಿ, ಮಾ. 23: ಪಶ್ಚಿಮ ಏಷ್ಯಾದ ಹೊರ್ಮುಜ್ ಜಲಸಂಧಿಯಲ್ಲಿನ (Strait of Hormuz) ಯುದ್ಧದ ಉದ್ವಿಗ್ನತೆಯಿಂದಾಗಿ ಭಾರತಕ್ಕೆ ಅಡುಗೆ ಅನಿಲದ ಆಮದು ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ದೇಶೀಯ ದಾಸ್ತಾನು ಸುಸ್ಥಿತಿಯಲ್ಲಿಡಲು ಸರ್ಕಾರಿ ತೈಲ ಕಂಪನಿಗಳು ಪ್ರತಿ ಮನೆಗೆ ನೀಡಲಾಗುವ ಗ್ಯಾಸ್ ಪ್ರಮಾಣವನ್ನು ಕಡಿತಗೊಳಿಸಲು ಗಂಭೀರವಾಗಿ ಆಲೋಚಿಸುತ್ತಿವೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಪ್ರತಿ ಮನೆಗೆ 14.2 ಕೆಜಿಯ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ. ದಾಸ್ತಾನು ಕೊರತೆಯಿಂದಾಗಿ, ಎಲ್ಲರಿಗೂ ಅಡುಗೆ ಅನಿಲ ಸಿಗುವಂತಾಗಲು 14.2 ಕೆಜಿಯ ಸಿಲಿಂಡರ್‌ನಲ್ಲಿ ಕೇವಲ 10 ಕೆಜಿ ಗ್ಯಾಸ್ ಮಾತ್ರ ತುಂಬಿಸಿ ವಿತರಿಸುವ ಯೋಜನೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಚರ್ಚಿಸುತ್ತಿವೆ.

ಭಾರತವು ತನ್ನ ಒಟ್ಟು ಎಲ್‌ಪಿಜಿ ಅಗತ್ಯದ ಶೇಕಡಾ 60ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದೀಗ ಹೊರ್ಮುಜ್ ಜಲಸಂಧಿಯಲ್ಲಿನ ಸಂಘರ್ಷದಿಂದಾಗಿ ಸರಕು ಸಾಗಣೆ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ.

ಸಾಮಾನ್ಯವಾಗಿ 14.2 ಕೆಜಿಯ ಸಿಲಿಂಡರ್ ಒಂದು ಕುಟುಂಬಕ್ಕೆ 35-40 ದಿನಗಳವರೆಗೆ ಬರುತ್ತದೆ. ಒಂದು ವೇಳೆ 10 ಕೆಜಿ ನೀಡಿದರೆ ಅದು ಸುಮಾರು ಒಂದು ತಿಂಗಳವರೆಗೆ ಬರುತ್ತದೆ. ಇದರಿಂದ ಲಭ್ಯವಿರುವ ಸ್ಟಾಕ್ ಅನ್ನು ಹೆಚ್ಚಿನ ಜನರಿಗೆ ಹಂಚಲು ಸಾಧ್ಯವಾಗುತ್ತದೆ. ಅಲ್ಲದೇ ಗ್ಯಾಸ್ ಪ್ರಮಾಣಕ್ಕೆ ಅನುಗುಣವಾಗಿ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ ಮತ್ತು ಸಿಲಿಂಡರ್ ಮೇಲೆ ತೂಕದ ವಿವರವನ್ನು ನಮೂದಿಸಲಾಗುತ್ತದೆ. ಪರಿಸ್ಥಿತಿ ತಿಳಿಯಾದ ಬಳಿಕ ಮೊದಲ ಸ್ಥಿತಿಗೆ ತರುವ ಚಿಂತನೆ ಇದೆ ಎನ್ನಲಾಗಿದೆ.

ಆತಂಕದ ಪರಿಸ್ಥಿತಿ

ವರದಿಗಳ ಪ್ರಕಾರ, ಕಳೆದ ವಾರ ಕೇವಲ ಕೆಲವೇ ಹಡಗುಗಳು ಜಲಸಂಧಿಯ ಮೂಲಕ ಭಾರತಕ್ಕೆ ಬಂದಿವೆ. ಇದು ಕೇವಲ ಒಂದು ದಿನದ ಬಳಕೆಗೆ ಮಾತ್ರ ಸಾಕಾಗುತ್ತದೆ. ಪ್ರಸ್ತುತ ಭಾರತ ಪ್ರತಿದಿನ ಸುಮಾರು 93,500 ಟನ್ ಎಲ್‌ಪಿಜಿಯನ್ನು ಬಳಸುತ್ತದೆ. ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಎಲ್‌ಪಿಜಿ ಲಭ್ಯತೆಯು "ಆತಂಕಕಾರಿಯಾಗಿದೆ" ಎಂದು ಇತ್ತೀಚೆಗೆ ತಿಳಿಸಿದ್ದು, ಮಿತಬಳಕೆಗೆ ಒತ್ತು ನೀಡಿದ್ದಾರೆ.

ಮಧ್ಯಪ್ರಾಚ್ಯ ಯುದ್ಧಕ್ಕೆ ಶೀಘ್ರದಲ್ಲೇ ವಿರಾಮ; ಅಮೆರಿಕ-ಇರಾನ್ ನಡುವಿನ ಮಾತುಕತೆ ಫಲಪ್ರದ

ಈ ಯೋಜನೆಯು ಜಾರಿಗೆ ಬರಲು ತಾಂತ್ರಿಕ ಬದಲಾವಣೆಗಳು ಮತ್ತು ಸರ್ಕಾರದ ಅಧಿಕೃತ ಅನುಮೋದನೆಯ ಅಗತ್ಯವಿದೆ. ಮುಂಬರುವ ವಾರಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆ ಇರುವುದರಿಂದ, ಸರ್ಕಾರವು ಈ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ.