ಪಣಜಿ, ಡಿ. 8: ಗೋವಾ ನೈಟ್ ಕ್ಲಬ್‌ನಲ್ಲಿ (Goa Night club Fire) ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಭಯಾನಕ ಅಗ್ನಿ ದುರಂತದಲ್ಲಿ 25 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನೆಂಬುದು ಬಹಿರಂಗಗೊಂಡಿದೆ. ಸುಮಾರು ನೂರಕ್ಕಿಂತಲೂ ಹೆಚ್ಚು ಪ್ರವಾಸಿಗರು 'ಬ್ಯಾಂಗರ್ ನೈಟ್' ಶೋವನ್ನು ಆನಂದಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ನೋಡ ನೋಡುತ್ತಲೇ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡ ಆವರಿಸಿಕೊಂಡಿತು.
ಉತ್ತರ ಗೋವಾದ ಅರಪೊರಾದ ರೋಮಿಯೋ ಲೇನ್‌ನಲ್ಲಿರುವ ಜನಪ್ರಿಯ ನೈಟ್ ಕ್ಲಬ್ ಇದಾಗಿದ್ದು, ತಡ ರಾತ್ರಿ 1 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಹೊಸ ವಿಡಿಯೊವೊಂದು ವೈರಲ್ ಆಗಿದ್ದು ಬೆಂಕಿ ಹತ್ತಿಕೊಳ್ಳಲು ಸ್ಪಷ್ಟವಾದ ಕಾರಣ ಕೂಡ ದೃಢ ಪಟ್ಟಿದೆ. ನೈಟ್‌ಕ್ಲಬ್‌ನ ಒಳಗಡೆ ಲೈವ್ ಮ್ಯೂಸಿಕ್ ಮತ್ತು ಡ್ಯಾನ್ಸ್ ಪ್ರದರ್ಶನದ ವೇಳೆ ಎಲೆಕ್ಟ್ರಾನಿಕ್ ಫೈರ್‌ಕ್ರ್ಯಾಕರ್ ಪಟಾಕಿ ಬಳಸಲಾಗಿದೆ ಎಂಬುದು ತಿಳಿದು ಬಂದಿದೆ.
ವಿಡಿಯೊ ನೋಡಿ:
ಈ ಪಟಾಕಿಯಿಂದ ಚಿಮ್ಮಿದ ಬೆಂಕಿಯ ಕಿಡಿ ನೇರವಾಗಿ ಕ್ಲಬ್‌ನ ಸೀಲಿಂಗ್‌ಗಳಿಗೆ ಹರಡಿದೆ. ಇದನ್ನು ಬಿದಿರಿನ ಹಲಗೆಗಳು, ತಾಳೆ ಎಲೆ ಸೇರಿದಂತೆ ಇತರ ಹೆಚ್ಚು ಉರಿಯುವ ವಸ್ತುಗಳಿಂದಲೇ ನಿರ್ಮಿಸಿದ್ದರಿಂದ ಬೆಂಕಿ ಅತ್ಯಂತ ವೇಗವಾಗಿ ಹರಿಡಿಕೊಂಡಿತು. ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಹೆಚ್ಚಿನ ಸಾವುಗಳು ಸುಟ್ಟ ಗಾಯಗಳಿಂದಲ್ಲ ಬದಲಾಗಿ ಉಸಿರುಗಟ್ಟುವಿಕೆಯಿಂದ ಸಂಭವಿಸಿದೆ ಎಂದು ಬಹಿರಂಗ ಪಡಿಸಿದ್ದಾರೆ.
"ದೇವರ ರೂಪದಲ್ಲಿ ಆತ ಬಂದ, ನಮ್ಮ ಜೀವ ಉಳಿಯಿತು"; ಬೆಂಕಿ ದುರಂತ ನೆನಪಿಸಿಕೊಂಡ ಡ್ಯಾನ್ಸರ್
ಸದ್ಯ ಈ ಭೀಕರತೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ನೋಡ ನೋಡುತ್ತಲೇ ಅಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ. ಈ ದೃಶ್ಯವೇ ಭೀಕರವಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ದೊಡ್ಡ ಅವಘಡ ಇದು ಎಂದು ಕಮೆಂಟ್ ಮಾಡಿದ್ದಾರೆ.
ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಕ್ಲಬ್ ಪ್ರಧಾನ ವ್ಯವಸ್ಥಾಪಕನನ್ನು ಬಂಧಿಸಲಾಗಿದ್ದು, ಮಾಲೀಕನ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಧ್ಯರಾತ್ರಿಯಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘದಲ್ಲಿ 14 ಸಿಬ್ಬಂದಿ ಸದಸ್ಯರು ಮತ್ತು ನಾಲ್ವರು ಪ್ರವಾಸಿಗರು ಸೇರಿದಂತೆ ಒಟ್ಟು 25 ಜನರು ಪ್ರಾಣ ಕಳೆದುಕೊಂಡಿದ್ದಾರೆ.