ನವದೆಹಲಿ: ಇರಾನಿನ ನೌಕಾಪಡೆಯ (Iranian Navy ) ಸಹಾಯದಿಂದ ಕಳೆದ ವಾರಾಂತ್ಯದಲ್ಲಿ ಭಾರತ ತಲುಪಿದ ಎಲ್‌ಪಿಜಿ ಟ್ಯಾಂಕರ್ (LPG tanker) ಹೊತ್ತ ಹಡಗು ಹೊರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿತ್ತು. ಅಮೆರಿಕ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತೀಕಾರವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಜಾಗತಿಕ ವ್ಯಾಪಾರಕ್ಕೆ ಅಡ್ಡಿಯನ್ನು ಉಂಟು ಮಾಡಿದೆ. ಇದು ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ನಡುವೆ ಭಾರತದ ನಾಯಕರ ಪ್ರಯತ್ನದ ಫಲವಾಗಿ ಕಳೆದ ವಾರಾಂತ್ಯಕ್ಕೆ ಎರಡು ಎಲ್ ಪಿಜಿ ಟ್ಯಾಂಕರ್ ಹೊತ್ತ ಹಡಗುಗಳು ಸೌದಿ ಅರೇಬಿಯಾದಿಂದ ಭಾರತದ ಬಂದರು ತಲುಪಿತ್ತು.
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಸಂಘರ್ಷ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಇದೆ. ಇದರಿಂದ ಭಾರತದಲ್ಲಿ ಉಂಟಾಗಿರುವ ಎಲ್ ಪಿಜಿ ಬಿಕ್ಕಟ್ಟನ್ನು ಪರಿಹರಿಸಲು ನವದೆಹಲಿಯು ನಿರಂತರವಾಗಿ ಇರಾನ್ ನಾಯಕರೊಂದಿಗೆ ಮಾತುಕತೆ ನಡೆಸಿದರು.
ಇದರ ಫಲವಾಗಿ ಕಳೆದ ವಾರ ಹೊರ್ಮುಜ್ ಜಲಸಂಧಿಯನ್ನು ದಾಟಲು ಇರಾನಿನ ನೌಕಾಪಡೆಯು ಭಾರತೀಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್ ಗಳಿದ್ದ ಹಡಗುಗಳಿಗೆ ಪೂರ್ವ ಅನುಮೋದಿತ ಮಾರ್ಗದಲ್ಲಿ ಮುನ್ನಡೆಸಿತು ಎಂದು ಹಡಗಿನಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಜವಳಿ ಉದ್ಯಮಕ್ಕೂ ತಟ್ಟಿದ ಇಂಧನ ಕೊರತೆ: ಎಲ್‌ಪಿಜಿ ಸಮಸ್ಯೆಯಿಂದ ಮುಚ್ಚಿದ ಸೂರತ್‌ನ ಘಟಕಗಳು
ಈ ಪ್ರದೇಶದಲ್ಲಿ ಉದ್ವಿಗ್ನತೆಗಳು ಹೆಚ್ಚಾಗಿದ್ದು, ಜಾಗತಿಕ ಹಡಗು ಮಾರ್ಗಗಳಿಗೆ ಅಡ್ಡಿ ಮಾಡಲಾಗಿದೆ. ವಿಶ್ವದ ಅತ್ಯಂತ ಪ್ರಮುಖ ಜಲ ಮಾರ್ಗದ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾದ ಇಲ್ಲಿ ಇಂಧನ ಸಾಗಾಟ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿ ಭಾರತದ ಎಲ್ ಪಿಜಿ ಟ್ಯಾಂಕರ್ ಹಡಗು ಸಾಗಣೆಯ ಸಮಯದಲ್ಲಿ ಹಡಗು ಇರಾನಿನ ನೌಕಾಪಡೆಯೊಂದಿಗೆ ನಿರಂತರ ರೇಡಿಯೋ ಸಂಪರ್ಕದಲ್ಲಿತ್ತು. ಅದು ಹಡಗಿನ ಧ್ವಜ, ಮೂಲ, ಗಮ್ಯಸ್ಥಾನ ಮತ್ತು ಸಿಬ್ಬಂದಿ ರಾಷ್ಟ್ರೀಯತೆ ಸೇರಿದಂತೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿತು ಎಂದು ಅವರು ಹೇಳಿದ್ದಾರೆ.
ಹಡಗಿನಲ್ಲಿದ್ದ ಸಿಬ್ಬಂದಿ ಎಲ್ಲರೂ ಭಾರತೀಯರಾಗಿದ್ದರು. ಹಡಗನ್ನು ಮೊದಲೇ ಗೊತ್ತುಪಡಿಸಿದ ಮಾರ್ಗದಲ್ಲಿ ನಡೆಸಲಾಯಿತು. ಇದು ಟೆಹ್ರಾನ್ ಜಾರಿಗೆ ತಂದಿರುವ ನಿಯಂತ್ರಿತ ಮಾರ್ಗ ವ್ಯವಸ್ಥೆಯಾಗಿತ್ತು. ಇರಾನ್ ಆಯ್ದ ಹಡಗುಗಳಿಗೆ ಮಾತ್ರ ಈ ಜಲಸಂಧಿಯನ್ನು ದಾಟಲು ಅವಕಾಶ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯು ಜಾಗತಿಕ ತೈಲ ಸಾಗಣೆಯ ಸುಮಾರು ಐದನೇ ಒಂದು ಭಾಗವನ್ನು ನಿರ್ವಹಿಸುತ್ತದೆ. ಇದು ಇಂಧನ ಪೂರೈಕೆಯ ಪ್ರಮುಖ ದಾರಿಯಾಗಿದೆ. ಫೆಬ್ರವರಿ ಅಂತ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ನಡೆಸಿದ ದಾಳಿಯ ಬಳಿಕ ಇರಾನ್ ಇಲ್ಲಿ ಸಾಗುವ ಹಡಗುಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿಗಳನ್ನು ನಡೆಸಿದೆ. ಇದರಿಂದ ಹಲವಾರು ಹಡಗುಗಳು ಧ್ವಂಸಗೊಂಡಿವೆ.
ಇರಾನ್‌ನ ನಟಾಂಜ್ ಪರಮಾಣು ತಾಣದ ಮೇಲೆ ಮತ್ತೆ ದಾಳಿ! ವಿಕಿರಣ ಸೋರಿಕೆಯ ಆತಂಕ
ಭಾರತೀಯ ಟ್ಯಾಂಕರ್ ಸುಮಾರು ಹತ್ತು ದಿನಗಳ ಕಾಲ ಪರ್ಷಿಯನ್ ಕೊಲ್ಲಿಯಲ್ಲಿ ಲಂಗರು ಹಾಕಿತ್ತು. ಮಾರ್ಚ್ 13 ರ ರಾತ್ರಿ ಈ ಜಲಸಂಧಿಯನ್ನು ದಾಟಲು ಅನುಮತಿ ಸಿಕ್ಕಿತ್ತು. ಜಲಸಂಧಿ ಪ್ರವೇಶಿಸುವ ಮೊದಲು ಸಿಬ್ಬಂದಿ ಸುರಕ್ಷತೆಯ ಆತಂಕವಿದ್ದುದರಿಂದ ಲೈಫ್ ರಾಫ್ಟ್‌ಗಳನ್ನು ಸಿದ್ಧಪಡಿಸಿ ತುರ್ತು ಸಂದರ್ಭಕ್ಕೆ ಸಿದ್ಧತೆ ನಡೆಸಿದ್ದರು. ಜಲಸಂಧಿ ಬಳಿ ಬಂದಾಗ ಟ್ಯಾಂಕರ್ ತನ್ನ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಆಫ್ ಮಾಡಿ ಪ್ರಯಾಣಿಸಿತ್ತು. ಜಿಪಿಎಸ್ ತೊಂದರೆಯಾಗಿ ಪ್ರಯಾಣ ಅವಧಿ ಹೆಚ್ಚು ವಿಸ್ತಾರವಾಯಿತು. ಓಮನ್ ಕೊಲ್ಲಿ ಬಳಿಯಿಂದ ಭಾರತೀಯ ಟ್ಯಾಂಕರ್ ಅನ್ನು ಭಾರತೀಯ ನೌಕಾಪಡೆಯು ಕರೆ ತಂದಿತ್ತು ಎಂದು ಅವರು ಹೇಳಿದರು.