ಇವರು ʼಭಕ್ತʼ ಕಳ್ಳರು; ದೇವರಿಗೆ ಕೈ ಮುಗಿದು ಕಾಣಿಕೆ ಪೆಟ್ಟಿಗೆ ಹೊತ್ತೊಯ್ದ ಖದೀಮರು
ಉತ್ತರಾಖಂಡದ ರುದ್ರಾಪುರದ ಅಟೇರಿಯಾ ಮಾತಾ ದೇವಸ್ಥಾನದಲ್ಲಿ ನಡೆದ ಘಟನೆಯು ಅಚ್ಚರಿಗೆ ಕಾರಣವಾಗಿದೆ. ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ಮುಸುಕುಧಾರಿ ಕಳ್ಳರು ಕಾಣಿಕೆ ಪೆಟ್ಟಿಗೆಗಳನ್ನು ಹೊತ್ತೊಯ್ದಿರುವುದು ಮಾತ್ರವಲ್ಲ, ಕೃತ್ಯಕ್ಕೂ ಮುನ್ನ ದೇವಿಯ ವಿಗ್ರಹದ ಮುಂದೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಾಖಂಡದ ಅಟೇರಿಯಾ ಮಾತಾ ದೇವಸ್ಥಾನ -
ಡೆಹ್ರಾಡೂನ್, ಫೆ. 27: ಉತ್ತರಾಖಂಡದ (Uttarakhand) ಉಧಮ್ ಸಿಂಗ್ ನಗರ (Udham Singh Nagar) ಜಿಲ್ಲೆಯ ಪ್ರಸಿದ್ಧ ಅಟೇರಿಯಾ ಮಾತಾ ದೇವಸ್ಥಾನದಲ್ಲಿ (Ateriya Mata Temple) ಸಿನಿಮೀಯ ಮಾದರಿಯ ಕಳ್ಳತನವೊಂದು ನಡೆದಿದೆ. ಮುಸುಕುಧಾರಿ ಕಳ್ಳರ ತಂಡವೊಂದು ದೇವಸ್ಥಾನದ ಆವರಣಕ್ಕೆ ನುಗ್ಗಿ ಲಕ್ಷಾಂತರ ರುಪಾಯಿ ಹಣವಿದ್ದ ಕಾಣಿಕೆ ಪೆಟ್ಟಿಗೆಗಳನ್ನು ಹೊತ್ತೊಯ್ದಿದೆ. ಈ ಕಳ್ಳತನದ ಪ್ರಕ್ರಿಯೆಯಲ್ಲಿ ಅಚ್ಚರಿಯ ಅಂಶವೆಂದರೆ, ಕಳ್ಳರು ಕೃತ್ಯ ಎಸಗುವ ಕೆಲವೇ ಕ್ಷಣಗಳ ಮೊದಲು ದೇವಿಯ ವಿಗ್ರಹದ ಮುಂದೆ ನಿಂತು ಅತ್ಯಂತ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿರುವುದು!
ಶುಕ್ರವಾರ (ಫೆಬ್ರವರಿ 27) ಬೆಳಗ್ಗೆ 5 ಗಂಟೆ ಸುಮಾರಿಗೆ ಅರ್ಚಕರು ಪೂಜೆಗಾಗಿ ಬಾಗಿಲು ತೆರೆದಾಗ ಕಳವು ಬೆಳಕಿಗೆ ಬಂದಿದೆ. ನಿಗದಿತ ಸ್ಥಳಗಳಲ್ಲಿದ್ದ ಕಾಣಿಕೆ ಪೆಟ್ಟಿಗೆಗಳು ಮಾಯವಾಗಿರುವುದು ಮತ್ತು ಕೆಲವು ಪೆಟ್ಟಿಗೆಗಳ ಬೀಗಗಳು ಮುರಿದಿರುವುದನ್ನು ಕಂಡು ಅವರು ತಕ್ಷಣ ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪಕ ಅರವಿಂದ್ ಶರ್ಮ ಮತ್ತು ಉಪಾಧ್ಯಕ್ಷ ಪಂಕಜ್ ಗೌರ್ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೇ ಅಚ್ಚರಿಯಾಗಿದೆ. ದೃಶ್ಯದಲ್ಲಿ ಒಬ್ಬ ಕಳ್ಳ ದೇವಿಯ ವಿಗ್ರಹದ ಮುಂದೆ ಅತ್ಯಂತ ವಿನಮ್ರವಾಗಿ ತಲೆಬಾಗಿ, ಕೈ ಮುಗಿದು ನಮಸ್ಕರಿಸುವುದು ಕಂಡುಬಂದಿದೆ. ಪೂಜೆ ಮುಗಿದ ನಂತರ, ಅದೇ ಕೈಗಳಿಂದ ಕಾಣಿಕೆ ಪೆಟ್ಟಿಗೆಯನ್ನು ಎತ್ತಿಕೊಂಡು ಸದ್ದಿಲ್ಲದೆ ಪರಾರಿಯಾಗಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಹಿರಿಯ ಪೊಲೀಸ್ ಅಧಿಕಾರಿ ದೌಲತ್ ರಾಮ್ ಆರ್ಯ ನೀಡಿರುವ ಮಾಹಿತಿಯಂತೆ, ಒಟ್ಟು ಐದು ಕಾಣಿಕೆ ಪೆಟ್ಟಿಗೆಗಳನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದರು. ಇದರಲ್ಲಿ ನಾಲ್ಕು ಪೆಟ್ಟಿಗೆಗಳ ಬೀಗ ಮುರಿದು ಹಣ ದೋಚಲಾಗಿದ್ದು, ಒಂದು ಪೆಟ್ಟಿಗೆಯನ್ನು ಸಂಪೂರ್ಣವಾಗಿ ಹೊತ್ತೊಯ್ಯಲಾಗಿದೆ. ಕಳ್ಳತನಕ್ಕೂ ಒಂದು ದಿನ ಮುನ್ನ ಶಂಕಿತ ವ್ಯಕ್ತಿಯೊಬ್ಬ ವಾಹನದಲ್ಲಿ ಬಂದು ದೇವಸ್ಥಾನದ ಸುತ್ತಮುತ್ತ ಸಂಚು ರೂಪಿಸಿದ್ದ ಎಂಬ ಮಾಹಿತಿಯೂ ತನಿಖೆಯ ವೇಳೆ ಲಭ್ಯವಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯು ಕಳ್ಳರ ಸುಳಿವು ನೀಡಿದವರಿಗೆ 1 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಶೀಘ್ರವೇ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.