ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮ.ಪ್ರ.ದಲ್ಲಿ ವನ್ಯ ಸಂಘರ್ಷ, 8 ತಿಂಗಳಲ್ಲಿ 50 ಜನ, 45 ಹುಲಿಗಳ ಸಾವು

ಕಳೆದ ಎಂಟು ತಿಂಗಳಲ್ಲಿ 22 ಜನರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇದೇ ವೇಳೆ 8 ಮಂದಿ ಕಾಡು ಹಂದಿ ದಾಳಿ, ಏಳು ಮಂದಿ ಆನೆ ದಾಳಿ, ನಾಲ್ವರು ಚಿರತೆ ದಾಳಿ ಮತ್ತು ಒಬ್ಬರು ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ. ಇವರಲ್ಲಿ 16 ಮಂದಿ ಮಹಿಳೆಯರು. ಬೇಸಿಗೆಯಲ್ಲಿ ಅತಿ ಹೆಚ್ಚಿನ ಸಾವು ನೋವು ಸಂಭವಿಸಿದೆ

ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಹುಲಿಗಳಿರುವ ರಾಜ್ಯದಲ್ಲಿ ಸಾವಿನ ಸಂಖ್ಯೆಯಲ್ಲೂ ಭಾರೀ ಹೆಚ್ಚಳ

ಮೃಗರಾಜನೇ ಪ್ರಮುಖ ಎದುರಾಳಿ

ಭೋಪಾಲ್: ದಶದಲ್ಲಿಯೇ ಅತಿ ಹೆಚ್ಚು ಹುಲಿ ಮತ್ತು ಚಿರತೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರ ವಾಗಿರುವ ಮಧ್ಯಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆಯ ಯಶಸ್ಸಿನ ನಡುವೆಯೂ ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷ ಮಿತಿ ಮೀರಿದೆ. 2026ರ ಮೊದಲ ಎಂಟು ತಿಂಗಳಲ್ಲಿ ರಾಜ್ಯದಾದ್ಯಂತ ಕಾಡುಪ್ರಾಣಿಗಳ ದಾಳಿಗೆ ಬಲಿಯಾದವರ ಸಂಖ್ಯೆ ಕನಿಷ್ಠ 50ಕ್ಕೇರಿದೆ.

ಸರಿ ಸುಮಾರು ಇದೇ ಅವಧಿಯಲ್ಲಿ 45ಕ್ಕೂ ಹೆಚ್ಚು ಹುಲಿಗಳು ಪ್ರಾಣ ಕಳೆದುಕೊಂಡಿವೆ. ಇದು ರಾಜ್ಯದಲ್ಲಿ ವನ್ಯಜೀವಿ ಹಾಗೂ ಮಾನವನ ನಡುವಿನ ಸಹಬಾಳ್ವೆಗೆ ಸವಾಲಾಗಿ ಪರಿಣಮಿಸಿದೆ. ಮಧ್ಯಪ್ರದೇಶ ಅರಣ್ಯ ಇಲಾಖೆಯ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಈ ವರ್ಷ ಅತಿ ಹೆಚ್ಚು ಮಾನವ ಸಾವಿಗೆ ಹುಲಿಗಳೇ ಕಾರಣವಾಗಿವೆ.

ಕಳೆದ ಎಂಟು ತಿಂಗಳಲ್ಲಿ 22 ಜನರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇದೇ ವೇಳೆ 8 ಮಂದಿ ಕಾಡುಹಂದಿ ದಾಳಿ, ಏಳು ಮಂದಿ ಆನೆ ದಾಳಿ, ನಾಲ್ವರು ಚಿರತೆ ದಾಳಿ ಮತ್ತು ಒಬ್ಬರು ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ. ಇವರಲ್ಲಿ 16 ಮಂದಿ ಮಹಿಳೆಯರು. ಬೇಸಿಗೆಯಲ್ಲಿ ಅತಿ ಹೆಚ್ಚಿನ ಸಾವು ನೋವು ಸಂಭವಿಸಿದೆ. ಮಾರ್ಚ್ (7), ಏಪ್ರಿಲ್ (13) ಮತ್ತು ಮೇ (10) ತಿಂಗಳುಗಳಲ್ಲಿ ಒಟ್ಟು 30 ಮಂದಿ ವನ್ಯಜೀವಿ ದಾಳಿಗೆ ಬಲಿಯಾಗಿದ್ದಾರೆ.

ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದಲ್ಲಿ ಆದಿವಾಸಿಗಳು ತೆಂಡು ಎಲೆಗಳು ಮತ್ತು ಮಹುವಾ ಹೂವುಗಳನ್ನು ಸಂಗ್ರಹಿಸಲು ಅರಣ್ಯ ಪ್ರದೇಶಗಳಿಗೆ ತೆರಳುವ ವೇಳೆ ಹೆಚ್ಚಿನ ದಾಳಿಗಳು ನಡೆದಿವೆ.

ಇದನ್ನೂ ಓದಿ: Tiger death: ಹುಲಿ ಸಾವಿಗೆ ಕಾರಣ ಪತ್ತೆ, ಉರುಳಿಟ್ಟವರ ತಲಾಶೆಗೆ ಮುಂದಾದ ಇಲಾಖೆ

ಹುಲಿ ದಾಳಿಯಿಂದ ಮೃತರಾದ 22 ಜನರಲ್ಲಿ 14 ಮಂದಿ ರುಡ್ಯಾರ್ಡ್ ಕಿಪ್ಲಿಂಗ್ ಅವರ ‘ದಿ ಜಂಗಲ್ ಬುಕ್’ ಕೃತಿಯ ಮೋಗ್ಲಿ ಕಲ್ಪನೆಗೆ ಸೂರ್ತಿಯಾದ ಮಹಾಕೋಶಲ್ ಪ್ರದೇಶದ ಸಿಯೋನಿ ಹಾಗೂ ಸುತ್ತಮುತ್ತಲಿನ ದಟ್ಟ ಅರಣ್ಯಗಳಲ್ಲಿ ಸಾವನ್ನಪ್ಪಿದ್ದಾರೆ. ಬಾಂಧವಗಢ ಹುಲಿ ಮೀಸಲು ಪ್ರದೇಶ ಹಾಗೂ ಪಕ್ಕದ ಜಿಲ್ಲೆಗಳಿಂದಲೂ ಏಳು ಹುಲಿ ಸಂಬಂಧಿತ ಸಾವುಗಳು ವರದಿಯಾಗಿವೆ. ಛತ್ತೀಸ್‌ಗಢ ಗಡಿಯಲ್ಲಿರುವ ಅನುಪ್ಪುರ್, ಸಿಧಿ ಮತ್ತು ಶಹದೋಲ್ ಜಿಲ್ಲೆಗಳಲ್ಲಿ ಆನೆ ಮತ್ತು ಕರಡಿ ದಾಳಿಯ ಪ್ರಕರಣಗಳು ಹೆಚ್ಚಾಗಿವೆ.

5 ವರ್ಷದಲ್ಲಿ 406 ಬಲಿ ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, 2020-21ರಿಂದ 2024-25ರ ನಡುವಿನ ಐದು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಕಾಡುಪ್ರಾಣಿಗಳ ದಾಳಿಗೆ ಒಟ್ಟು 406 ಜನರು ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 5804 ಜನರು ಗಾಯಗೊಂಡಿದ್ದು, 72,627 ಜಾನುವಾರುಗಳು ನಷ್ಟವಾಗಿವೆ. ಇದೇ ಅವಧಿಯಲ್ಲಿ ಮಾನವ ಸಾವು ಮತ್ತು ಜಾನುವಾರು ಹಾನಿಗೆ ಪರಿಹಾರವಾಗಿ ಸರಕಾರ 88.38 ಕೋಟಿ ರುಪಾಯಿಗಳಿಗೂ ಹೆಚ್ಚು ಮೊತ್ತವನ್ನು ಪಾವತಿಸಿದೆ.

ಆವಾಸಸ್ಥಾನದ ಕೊರತೆ 2022ರ ರಾಷ್ಟ್ರೀಯ ಹುಲಿ ಗಣತಿಯ ಪ್ರಕಾರ ಮಧ್ಯಪ್ರದೇಶದಲ್ಲಿ ಹುಲಿ ಗಳ ಸಂಖ್ಯೆ 785ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ ಇದು ಸುಮಾರು 1000 ತಲುಪಿದೆ ಎಂದು ಅಂದಾಜಿಸ ಲಾಗಿದೆ. ಆದರೆ ಹುಲಿಗಳ ಸಂಖ್ಯೆಗೆ ತಕ್ಕಂತೆ ಅರಣ್ಯ ಪ್ರದೇಶ ವಿಸ್ತರಣೆಯಾಗಿಲ್ಲ. ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ಕೃಷಿಭೂಮಿಗಳು ಮತ್ತು ಬಡಾವಣೆಗಳು ವನ್ಯಜೀವಿ ಕಾರಿಡಾರ್ʼಗಳನ್ನು ಛೇದಿಸು ತ್ತಿರುವುದರಿಂದ ಪ್ರಾಣಿಗಳು ಮತ್ತು ಮಾನವರು ಮುಖಾಮುಖಿಯಾಗುವ ಸಂದರ್ಭಗಳು ಹೆಚ್ಚುತ್ತಿವೆ.