ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪತಿ-ಪತ್ನಿ ಮಧ್ಯೆ ಜಗಳ ಸಾಮಾನ್ಯ; 58 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಲು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್

High Court Refuses to Grant Divorce: ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ವಿಚಾರಕ್ಕೂ ದಾಂಪತ್ಯ ಜೀವನ ಮುರಿದು ಬೀಳುತ್ತಿರುವುದು ಹೆಚ್ಚುತ್ತಿದೆ. ಇದೀಗ 58 ವರ್ಷಗಳ ವೈವಾಹಿಕ ಬದುಕಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲವೆಂದು ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದಂಪತಿ ನಡುವೆ ಉಂಟಾಗುವ ಸಾಮಾನ್ಯ ಜಗಳಗಳು, ವಾಗ್ವಾದಗಳು ವಿಚ್ಛೇದನಕ್ಕೆ ಆಧಾರವಾಗಲಾರವು ಎಂದು ನ್ಯಾಯಾಲಯ ಹೇಳಿದೆ.

ಸಾಂದರ್ಭಿಕ ಚಿತ್ರ

ಜೈಪುರ, ಫೆ. 15: ʼಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕʼ ಎಂಬ ಗಾದೆ ಹಳೆಯದಾಯಿತು. ಇದೀಗ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾದರೂ ಪತಿ-ಪತ್ನಿ ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ (Divorce) ಪಡೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಮದುವೆಯಾದ ದಿನ ಅಥವಾ ಮಾರನೇ ದಿನ, ಒಂದು ತಿಂಗಳ ನಂತರ ಹೀಗೆ ವಿಚ್ಛೇದನವಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಆದರೆ ಬಹಳಷ್ಟು ವರ್ಷಗಳ ಕಾಲ ದಾಂಪತ್ಯ ಮಾಡಿ ದೂರವಾಗುವುದು ತೀರಾ ಅಪರೂಪ. ಕೇವಲ ಸೆಲೆಬ್ರಿಟಿಗಳು ಈ ರೀತಿ ದೂರವಾಗುತ್ತಾರೆ. ಇದೀಗ ಇಲ್ಲೊಂದೆಡೆ ದಂಪತಿಯ 58 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ (Rajasthan High Court) ತೀರ್ಪು ನೀಡಿದೆ.

ಕ್ಷುಲ್ಲಕ ಕಿರಿಕಿರಿಗಳು, ಜಗಳಗಳು ಮತ್ತು ದಂಪತಿಯ ನಡುವೆ ಸಾಮಾನ್ಯವಾಗಿರುವ ವಾಗ್ಯುದ್ಧಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾ, ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠವು, 58 ವರ್ಷಗಳ ದಾಂಪತ್ಯವನ್ನು ಕೊನೆಗಾಣಿಸಲು ನಿರಾಕರಿಸಿದೆ.

10 ಲಕ್ಷ ಪಾವತಿಸುವಂತೆ ಧೋನಿಗೆ ಮದ್ರಾಸ್‌ ಹೈಕೋರ್ಟ್ ಸೂಚನೆ

ನ್ಯಾಯಮೂರ್ತಿಗಳಾದ ಅನಿಲ್ ಕುಮಾರ್ ಉಪ್ಮಾನ್ ಮತ್ತು ಸುದೇಶ್ ಬನ್ಸಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಶುಕ್ರವಾರ (ಫೆಬ್ರವರಿ 13) ತೀರ್ಪು ನೀಡಿದೆ. ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಭರತ್‌ಪುರದ ಕುಟುಂಬ ನ್ಯಾಯಾಲಯದ 2019ರ ಆದೇಶವನ್ನು ಎತ್ತಿಹಿಡಿದಿದೆ.

ಕುಟುಂಬದೊಳಗಿನ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಮತ್ತು ಆಸ್ತಿ ವಿವಾದಗಳು ದೀರ್ಘ ಕಾಲದ ದಾಂಪತ್ಯವನ್ನು ಕೊನೆಗೊಳಿಸುವುದನ್ನು ಸಮರ್ಥಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ವೃದ್ಧಾಪ್ಯದಲ್ಲಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಎಲ್ಲ ಕುಟುಂಬಗಳಲ್ಲೂ ದಿನನಿತ್ಯದ ಜೀವನದಲ್ಲಿ ಕ್ಷುಲ್ಲಕ ಕಿರಿಕಿರಿಗಳು, ಜಗಳಗಳು ಸಾಮಾನ್ಯವಾಗಿದೆ. ಹೀಗಾಗಿ ಇದಕ್ಕೆಲ್ಲ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ದಂಪತಿ 1967ರಲ್ಲಿ ವಿವಾಹವಾದರು. ಯಾವುದೇ ವಿವಾದವಿಲ್ಲದೆ 2013ರವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ. ಅವರೆಲ್ಲರಿಗೂ ಮದುವೆಯೂ ಆಗಿದೆ.

ಸರ್ಕಾರಿ ಶಾಲೆಯ ನಿವೃತ್ತ ಪ್ರಾಂಶುಪಾಲರಾಗಿರುವ ಪತಿಗೆ ಈಗ 75 ವರ್ಷ ವಯಸ್ಸಾಗಿದ್ದು, 2014ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಪತ್ನಿ ಐಪಿಸಿ ಸೆಕ್ಷನ್ 498 ಎ (ವರದಕ್ಷಿಣೆ ಕಿರುಕುಳ), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 323/34 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ತನಿಖೆಯ ನಂತರ ಪೊಲೀಸರು ನಕಾರಾತ್ಮಕ ಅಂತಿಮ ವರದಿಯನ್ನು ಸಲ್ಲಿಸಿದರೂ, ಎಫ್‌ಐಆರ್ ತನಗೆ ಅವಮಾನವನ್ನುಂಟು ಮಾಡಿದೆ ಮತ್ತು ತನ್ನ ಸ್ವಾಭಿಮಾನಕ್ಕೆ ಹಾನಿ ಮಾಡಿದೆ ಎಂದು ಪತಿ ವಾದಿಸಿದರು.

"ಈಗಲೇ ಭಾರತಕ್ಕೆ ಮರಳಿ"; ವಿಜಯ್ ಮಲ್ಯಗೆ ಕೊನೆಯ ಎಚ್ಚರಿಕೆ ನೀಡಿದ ಬಾಂಬೆ ಹೈಕೋರ್ಟ್

ತನ್ನ ಪತ್ನಿ ಹಿರಿಯ ಮಗ ವೀರೇಂದ್ರ ಸಿಂಗ್‌ನ ಮಾತನ್ನು ಕೇಳುತ್ತಿದ್ದು, ಮಗನ ಹೆಸರಿಗೆ ಸ್ಥಿರಾಸ್ತಿಯನ್ನು ವರ್ಗಾಯಿಸುವಂತೆ ಒತ್ತಡ ಹೇರಿದ್ದಾಳೆ ಎಂದು ಆರೋಪಿಸಿದ್ದಾರೆ. ಆದರೆ ಪತಿ ತನ್ನಿಬ್ಬರೂ ಪುತ್ರರಿಗೂ ಆಸ್ತಿಯನ್ನು ಸಮಾನವಾಗಿ ಹಂಚಬೇಕೆಂದು ಬಯಸಿರುವುದಾಗಿ ಹೇಳಿದ್ದಾರೆ. ಇದು ಕೌಟುಂಬಿಕ ಆರೋಪ ಹಾಗೂ ವಿಚ್ಛೇದನ ಅರ್ಜಿ ಸಲ್ಲಿಸಲು ಕಾರಣವಾಯಿತು. 2019ರ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿದ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿತು.