ರಾಯ್ಪುರ್, ಜ.26: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ (ಜನವರಿ 25) ನಡೆದ ಮಾವೋವಾದಿ ವಿರೋಧಿ ಕಾರ್ಯಾಚರಣೆಯ (anti-Maoist operation) ಸಂದರ್ಭದಲ್ಲಿ ಆರು ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗಳಲ್ಲಿ ಹನ್ನೊಂದು ಭದ್ರತಾ ಸಿಬ್ಬಂದಿ (security personnel) ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ. ಹೇಳಿದರು.
ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕಾರೆಗುಟ್ಟ ಬೆಟ್ಟಗಳ ಬಳಿಯ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ಇರುವಿಕೆ ಬಗ್ಗೆ ಮಾಹಿತಿ ಪಡೆದ ನಂತರ ನಡೆಸಲಾದ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಫೋಟಗೊಂಡವು. ಈ ಪ್ರದೇಶವು ಮಾವೋವಾದಿಗಳ ಸಶಸ್ತ್ರ ವಿಭಾಗವಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಸೈನ್ಯದ ಮೊದಲ ಬೆಟಾಲಿಯನ್‌ನ ಭದ್ರಕೋಟೆಯಾಗಿದೆ ಎಂದು ಹೇಳಲಾಗಿದೆ.
Naxal Encounter: 26 ಸಶಸ್ತ್ರ ದಾಳಿಗಳ ರೂವಾರಿ ನಕ್ಸಲ್ ಕಮಾಂಡರ್ ಮದ್ವಿ ಹಿಡ್ಮಾ ಎನ್‌ಕೌಂಟರ್
ಮೂವರು ಸಿಬ್ಬಂದಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದರೆ, ಇತರ ಮೂವರ ಕಣ್ಣುಗಳಿಗೆ ಗಾಯಗಳಾಗಿವೆ. ಈ ವರ್ಷ, ರಾಜ್ಯದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 20 ಮಾವೋವಾದಿಗಳು ಮೃತಪಟ್ಟಿದ್ದಾರೆ.
2024 ಮತ್ತು 2025 ರಲ್ಲಿ ಹೆಚ್ಚಿನ ದಂಗೆ ನಿಗ್ರಹ ಪ್ರಯತ್ನಗಳ ನಡುವೆಯೂ ಬಿಜಾಪುರವು ಹೆಚ್ಚಿನ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿತು. ಎಡಪಂಥೀಯ ದಂಗೆಯನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರವು ಮಾರ್ಚ್ 31, 2026ರ ಗಡುವನ್ನು ನಿಗದಿಪಡಿಸಿದೆ.
ಮೇ 20ರಂದು ಮಾವೋವಾದಿ ಮುಖ್ಯಸ್ಥ ನಂಬಾಳ ಕೇಶವ ರಾವ್ ಅಲಿಯಾಸ್ ಬಸವರಾಜು ಹತ್ಯೆಯಾಗುವುದರೊಂದಿಗೆ, ಮಾವೋವಾದಿಗಳ ವಿರುದ್ಧ ಕಳೆದ ಹಲವು ವರ್ಷಗಳಲ್ಲಿ ಅತ್ಯಂತ ಮಹತ್ವದ ಯಶಸ್ಸು ಸಾಧಿಸಿದಂತೆ ಆಯಿತು. ಎಡಪಂಥೀಯ ದಂಗೆ ಪೀಡಿತ ಜಿಲ್ಲೆಗಳ ಸಂಖ್ಯೆ ಏಪ್ರಿಲ್‌ನಲ್ಲಿ 18 ರಿಂದ 11ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜಾರ್ಖಂಡ್‍ನಲ್ಲಿ 17 ಮಾವೋವಾದಿಗಳ ಹತ್ಯೆಗೈದಿದ್ದ ಭದ್ರತಾ ಪಡೆ
ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿಯ ಉನ್ನತ ಪದಾಧಿಕಾರಿಯಾಗಿದ್ದ ಪಟಿರಾಮ್ ಮಾಝಿ ಅಲಿಯಾಸ್ ಅನಲ್ ದಾ ಎಂಬಾತನನ್ನು ಗುರುವಾರ (ಜನವರಿ 22) ನಡೆದಿದ್ದ ಮಹತ್ವದ ಸಂಯುಕ್ತ ನಕ್ಸಲ್ ವಿರೋಧಿ ಕಾರ್ಯಾಚರಣೆ ಮೇಘಬುರು ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜಾರ್ಖಂಡ್‍ನ ಚೈಬಾಸಾದಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಐವರು ಮಹಿಳೆಯರು ಸೇರಿದಂತೆ 17 ಮಾವೋವಾದಿಗಳ ಹತ್ಯೆ ಮಾಡಲಾಗಿತ್ತು.
ಗುರುವಾರ (ಜನವರಿ 22) ಸಾರಂಡಾ ಅರಣ್ಯದಲ್ಲಿ 209 ಕೋಬ್ರಾ ಪಡೆ, ಚೈಬಾಸಾ ಜಿಲ್ಲಾ ಪೊಲೀಸರು ಮತ್ತು ಜಾರ್ಖಂಡ್ ಜಾಗ್ವಾರ್ ಜಂಟಿಯಾಗಿ ಆಪರೇಷನ್ ಮೇಘಬುರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಜಾರ್ಖಂಡ್‌ನಲ್ಲಿ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದ್ದ ಪಟಿರಾಮ್ ಮಾಝಿ ಅಲಿಯಾಸ್ ಅನಲ್ ದಾ ಸೇರಿದಂತೆ ಒಟ್ಟು 14 ಮಾವೋವಾದಿಗಳು ಹತರಾದರು. ಎರಡನೇ ದಿನದ ಕಾರ್ಯಾಚರಣೆ ವೇಳೆ ಮೂವರಿಗೆ ಗುಂಡು ಹಾರಿಸಲಾಯಿತು. ಹೀಗಾಗಿ ಸಾವಿನ ಸಂಖ್ಯೆ 17ಕ್ಕೆ ತಲುಪಿತು.