Navjot Kaur Sidhu: ಕಾಂಗ್ರೆಸ್ನಿಂದ ನವಜೋತ್ ಕೌರ್ ಸಿಧು ಉಚ್ಛಾಟನೆ; ಮಾಜಿ ಕ್ರಿಕೆಟರ್ ಪತ್ನಿಗೆ ಮುಳುವಾಯ್ತು ‘500 ಕೋಟಿ ರೂ.’ ಹೇಳಿಕೆ
Navjot Kaur Sidhu: ಖ್ಯಾತ ಕ್ರಿಕೆಟರ್, ಕಮೆಂಟೇಟರ್ ಹಾಗೂ ರಾಜಕೀಯ ಮುಖಂಡ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರನ್ನು ಕಾಂಗ್ರೆಸ್ನಿಂದ ಉಚ್ಛಾಟನೆ ಮಾಡಲಾಗಿದೆ. ಈ ಬಗ್ಗೆ ಕೌರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿ ಕೊಂಡಿದ್ದಾರೆ. 500 ಕೋಟಿ ರೂ. ಸೂಟ್‌ಕೇಸ್ ಹೇಳಿಕೆ ಕೌರ್ ಅವರಿಗೆ ಇದೀಗ ಮುಳುವಾಗಿದೆ. ಏನಿದು ವಿವಾದ?
ನವಜೋತ್ ಕೌರ್ ಸಿಧು ಮತ್ತು ನವಜೋತ್ ಸಿಂಗ್ ಸಿಧು (ಸಂಗ್ರಹ ಚಿತ್ರ) -
ಚಂಡಿಗಢ, ಡಿ. 8: ಖ್ಯಾತ ಕ್ರಿಕೆಟರ್, ವೀಕ್ಷಕ ವಿವರಣೆಕಾರ ಹಾಗೂ ರಾಜಕೀಯ ಮುಖಂಡ ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಪತ್ನಿ ನವಜೋತ್ ಕೌರ್ ಸಿಧು (Navjot Kaur Sidhu) ಅವರನ್ನು ಕಾಂಗ್ರೆಸ್ನಿಂದ (Congress Party) ಉಚ್ಛಾಟನೆ ಮಾಡಲಾಗಿದೆ. ‘500 ಕೋಟಿ ರೂಪಾಯಿ ಸೂಟ್‌ಕೇಸ್’ ಹೇಳಿಕೆ ಕೌರ್ ಅವರಿಗೆ ಇದೀಗ ಮುಳುವಾಗಿದೆ. ಈ ಬಗ್ಗೆ ಕೌರ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರೂ ಇದು ಕಾಂಗ್ರೆಸ್ ನಾಯಕರನ್ನು ಸಮಾಧಾನಪಡಿಸುವಲ್ಲಿ ವಿಫಲವಾಗಿದೆ. ‘ʼ500 ಕೋಟಿ ರೂ. ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿ ಪಟ್ಟ ಪಡೆದುಕೊಳ್ಳುತ್ತಾರೆʼ’ ಎಂಬ ಹೇಳಿಕೆಯನ್ನು ನೀಡುವ ಮೂಲಕ ಭಾರಿ ವಿವಾದ ಹುಟ್ಟು ಹಾಕಿದ್ದರು.
ಇದರಿಂದ ಕಾಂಗ್ರೆಸ್ ಮುಖಂಡರಿಗೆ ಭಾರಿ ಮುಖಭಂಗವಾಗಿದ್ದು ಮಾತ್ರವಲ್ಲದೇ ಬಿಜೆಪಿ ಹಾಗೂ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಕೈ ವಿರುದ್ಧ ಹರಿಹಾಯಲು ಪ್ರಮುಖ ಅಸ್ತ್ರ ಸಿಕ್ಕಿದಂತಾಗಿತ್ತು. ತನ್ನ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತ, ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಮಾಜಿ ಶಾಸಕಿ ಕೌರ್, ‘ʼನನ್ನ ನೇರವಾದ ಹೇಳಿಕೆ ಈ ರೀತಿಯ ತಿರುವನ್ನು ಪಡೆದುಕೊಂಡಿರುವುದು ತಿಳಿದು ನನಗೆ ಆಘಾತವಾಗಿದೆ. ಕಾಂಗ್ರೆಸ್ ನಮ್ಮಿಂದ ಯಾವತ್ತೂ ಏನನ್ನೂ ಡಿಮ್ಯಾಂಡ್ ಮಾಡಿಲ್ಲ ಎಂಬ ರೀತಿಯ ಹೇಳಿಕೆಯನ್ನು ನಾನು ನೀಡಿದ್ದೆʼʼ ಎಂದಿದ್ದಾರೆ.
ನವಜೋತ್ ಕೌರ್ ಸಿಧು ಅವರ ಉಚ್ಛಾಟನೆ:
Dr Navjot Kaur Sidhu has been suspended from the Congress party with immediate effect. pic.twitter.com/8dGjNaLn5n
— ANI (@ANI) December 8, 2025
ʼʼಪತಿ ನವಜೋತ್ ಸಿಂಗ್ ಸಿಧು ಯಾವುದೇ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗುವರೇ ಎಂಬ ಪ್ರಶ್ನೆಗೆ ಉತ್ತರಿಸುತ್ತ ನಾನು, ಮುಖ್ಯಮಂತ್ರಿ ಪಟ್ಟವನ್ನು ಪಡೆಯುವಷ್ಟು ಹಣ ನಮ್ಮಲ್ಲಿಲ್ಲ ಎಂದಷ್ಟೇ ನಾನು ಪ್ರತಿಕ್ರಿಯಿಸಿದ್ದೆ. ಇದನ್ನು ಎಚ್ಚರಿಕೆಯಿಂದ ಗಮನಿಸಿʼ’ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ: ತಜ್ಞರ ಸಮಿತಿ ರಚನೆಗೆ ಡಿಕೆ ಶಿವಕುಮಾರ್ ಸೂಚನೆ
ತನ್ನ ಪತಿಯನ್ನು ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ, ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ಹೇಳುವ ಭರದಲ್ಲಿ ಕೌರ್ ಈ ಮೇಲಿನ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಪಂಜಾಬ್ ಕಾಂಗ್ರೆಸ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು ಮತ್ತು ಸ್ಥಳೀಯ ಹಾಗೂ ರಾಷ್ಟ್ರೀಯ ನಾಯಕರ ಕಣ್ಣು ಕೆಂಪಗಾಗಿಸಿತ್ತು.
ವೃತ್ತಿಯಲ್ಲಿ ವೈದ್ಯೆಯಾಗಿರುವ ನವಜೋತ್ ಕೌರ್ ಸಿಧು 2012ರಲ್ಲಿ ಬಿಜೆಪಿಯಿಂದ ಅಮೃತಸರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇವರು ಮುಖ್ಯ ಪಾರ್ಲಿಮೆಂಟರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.