ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯ ಮೇಲೆ ಪರಿಣಾಮ ಬೀರಿದೆ. ಕಚ್ಚಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆಯ (petrol price) ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಇದಕ್ಕೆ ಮುಖ್ಯ ಕಾರಣ ಎಥೆನಾಲ್ (E20) ಮಿಶ್ರಣ (ethanol blending) ವಾಗಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟಿನ (Middle East crisis) ಪರಿಣಾಮವಾಗಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 135 ಡಾಲರ್ ತಲುಪಿದಾಗ ಆಗ ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಲೀಟರ್‌ಗೆ 125 ರೂ. ಗೆ ಏರಿಕೆಯಾಗುವ ಸಾಧ್ಯತೆ ಇತ್ತು. ಆದರೆ ಇದನ್ನು ಎಥೆನಾಲ್ ಮಿಶ್ರಣದಿಂದ ನಿಯಂತ್ರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣ ಮಾಡುತ್ತಿರುವುದರಿಂದ ವಾಹನಗಳ ಮೈಲೇಜ್, ಎಂಜಿನ್ ಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಳವಳ ಹೆಚ್ಚಾಗಿರುವಾಗಲೇ ಈ ಕುರಿತು ಶುಕ್ರವಾರ ಸ್ಪಷ್ಟನೆಯನ್ನು ನೀಡಿರುವ ಕೇಂದ್ರ ಸರ್ಕಾರ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಮಯದಲ್ಲಿ ಎಥೆನಾಲ್ ಅನ್ನು ಮಿಶ್ರಣ ಮಾಡದಿದ್ದರೆ ಪೆಟ್ರೋಲ್ ಹೆಚ್ಚು ದುಬಾರಿಯಾಗಿರುತ್ತಿತ್ತು. ಎಥೆನಾಲ್ ಮಿಶ್ರಣವು ದೇಶದ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದೆ.
ದೇಶದಲ್ಲಿ ಪೆಟ್ರೋಲ್ ಬೆಲೆ ಸಾಮಾನ್ಯವಾಗಿರುವುದರಿಂದ ಇದು ಜನ ಸಾಮಾನ್ಯರ ಮೇಲೆ ಪರಿಣಾಮ ಬೀರಿಲ್ಲ. ದೇಶದಲ್ಲಿ ಎಥೆನಾಲ್ ಮಿಶ್ರಣ ನೀತಿಯು ಕಚ್ಚಾ ತೈಲದ ಲಭ್ಯತೆ ಮತ್ತು ತೈಲ ಕಂಪೆನಿಗಳ ಖರೀದಿ ನಿಯಮಗಳಿಗೆ ಅನುಸಾರವಾಗಿ ನಡೆಸಲಾಗುತ್ತದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ ಭಾರತದಲ್ಲಿ ಸುಮಾರು 94.77 ರೂ. ಗೆ ಲಭ್ಯವಿರುತ್ತಿತ್ತು. ಯಾಕೆಂದರೆ ಪ್ರತಿ ಲೀಟರ್ ಪೆಟ್ರೋಲ್ ಗೆ ಶೇಕಡಾ 20 ರಷ್ಟು ದೇಶೀಯವಾಗಿ ಉತ್ಪಾದಿಸಲಾದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇದರೊಂದಿಗೆ ಜಾಗತಿಕ ಕಚ್ಚಾ ತೈಲವನ್ನು ಸ್ಥಿರವಾದ ಪೂರ್ವ ಒಪ್ಪಂದದ ಬೆಲೆಗಳಲ್ಲಿ ಖರೀದಿ ಮಾಡಿ ಸಂಗ್ರಹಿಸಲಾಗಿತ್ತು.
ಎಥೆನಾಲ್ ಮಿಶ್ರಣದಿಂದ ಪ್ರತಿ ಲೀಟರ್‌ಗೆ ಸುಮಾರು 30 ರೂ. ಉಳಿತಾಯವಾಗಿದೆ ಎಂದು ತಿಳಿಸಿರುವ ಸರ್ಕಾರ, ಎಥೆನಾಲ್ ಮಿಶ್ರಣವು ದೇಶದ ಜನರಿಗೆ ಅಗ್ಗದ ಇಂಧನವನ್ನು ಒದಗಿಸುವುದು ಮಾತ್ರವಲ್ಲದೆ ಜಾಗತಿಕ ತೈಲ ಮಾರುಕಟ್ಟೆಗಳಲ್ಲಿ ಆಗುವ ಬೆಲೆ ಏರಿಕೆಯ ಹೊಡೆತದಿಂದ ಭಾರತೀಯ ಗ್ರಾಹಕರನ್ನು ರಕ್ಷಿಸುತ್ತದೆ. ಇದು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. ದೇಶದ ಆರ್ಥಿಕತೆ ಹೊರೆಯನ್ನು ಕೂಡ ತಗ್ಗಿಸುತ್ತದೆ ಎಂದು ಹೇಳಿದೆ.
ವಾಹನಕ್ಕೆ ಹಾನಿಯಾಗುವುದೇ?
ಎಥೆನಾಲ್ ಮಿಶ್ರಣ ನೀತಿ ಅನುಷ್ಠಾನಕ್ಕೂ ಮೊದಲು ಅರೈ, ಸೈಮಾ, ಇಂಡಿಯನ್ ಆಯಿಲ್ ಮತ್ತು ವಾಹನ ತಯಾರಕ ಕಂಪೆನಿಗಳು ಸೇರಿ ಹಲವು ಪರೀಕ್ಷೆಗಳನ್ನು ನಡೆಸಿದೆ. ಇದರಿಂದ ವಾಹನಗಳ ಎಂಜಿನ್ ಸಾಮರ್ಥ್ಯ, ಕಾರ್ಯಕ್ಷಮತೆ ಅಥವಾ ಇತರ ಭಾಗಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ದೃಢಪಟ್ಟ ಮೇಲೆಯೇ ಈ ನೀತಿಯನ್ನು ಜಾರಿಗೊಳಿಸಲಾಗಿದೆ.
ಝೆನ್ ಜಿ ಬಗ್ಗೆ ತಿಳಿದುಕೊಳ್ಳಲು ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾದ ಬಿಜೆಪಿ
ರಾಜ್ಯಸಭೆಯಲ್ಲಿ ಈ ಕುರಿತು 2005ರಲ್ಲಿ ಮಾಹಿತಿ ನೀಡಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 2016ಕ್ಕಿಂತ ಮೊದಲು ತಯಾರಿಸಲಾದ ಬಿಎಸ್ -III ಮಾದರಿಯ ವಾಹನಗಳ ಮೇಲೆ ಇದು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು ಎಂದು ತಿಳಿಸಿದ್ದರು ಎಂದು ಕೇಂದ್ರ ಸರ್ಕಾರ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.