IIT Baba: ಕುಂಭಮೇಳ ಖ್ಯಾತಿಯ IIT ಬಾಬಾ ಅರೆಸ್ಟ್; ಗಾಂಜಾ ಸಮೇತ ಅಂದರ್
ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸದ್ದು ಮಾಡುತ್ತಿರುವ ಕುಂಭಮೇಳ ಖ್ಯಾತಿಯ ಐಐಟಿ ಬಾಬಾ ಇಂದು ಅರೆಸ್ಟ್ ಆಗಿದ್ದಾನೆ. ಜೈಪುರದ ಹೊಟೇಲ್‌ವೊಂದರಲ್ಲಿ ಭಾರೀ ಪ್ರಮಾಣದ ಗಾಂಜಾ ಸಮೇತ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.


ಜೈಪುರ: ಮಹಾಕುಂಭ ಮೇಳ ಖ್ಯಾತಿಯ ಐಐಟಿ ಬಾಬಾ(IIT Baba) ಅಲಿಯಾಸ್ ಅಭಯ್ ಸಿಂಗ್ ಇಂದು ಅರೆಸ್ಟ್ ಆಗಿದ್ದಾನೆ. ಜೈಪುರದ ಹೊಟೇಲ್‌ವೊಂದರಲ್ಲಿ ಗಾಂಜಾ ಸಮೇತ ಐಐಟಿ ಬಾಬಾ ಪೊಲೀಸರ ಬಲೆ ಬಿದ್ದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಸ್ಥಾನ ರಾಜಧಾನಿ ಜೈಪುರದ ರಿದ್ಧಿ ಸಿದ್ಧಿ ಪಾರ್ಕ್ ಬಳಿಯ ಕ್ಲಾಸಿಕ್ ಹೋಟೆಲ್‌ಗೆ ಶಿಪ್ರಾ ಪಾತ್ ಪೊಲೀಸ್ ಠಾಣೆಯ ಪೊಲೀಸರ ತಂಡ ದೌಡಾಯಿಸಿ ಐಐಟಿ ಬಾಬಾನನ್ನು ವಶಕ್ಕೆ ಪಡೆದುಕೊಂಡಿದೆ.
ಈ ಸುದ್ದಿಯನ್ನೂ ಓದಿ: IIT Baba : ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಐಐಟಿ ಬಾಬಾ ಮೇಲೆ ಹಲ್ಲೆ; ನಡೆದಿದ್ದೇನು?
ಬಂಧನದ ವೇಳೆ ಪೊಲೀಸರು ಅಭಯ್ ಸಿಂಗ್ ಬಳಿ ಗಾಂಜಾ (ಗಾಂಜಾ) ಇರುವುದು ಪತ್ತೆ ಮಾಡಿದ್ದಾರೆ. ಆತನ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಎರಡು ದಿನಗಳ ಹಿಂದೆ ಹಲ್ಲೆ ಆರೋಪ ಮಾಡಿದ್ದ ಐಐಟಿ ಬಾಬಾ
ಶುಕ್ರವಾರ ನೋಯ್ಡಾದಲ್ಲಿ ಖಾಸಗಿ ಚಾನೆಲ್ ಒಂದರ ಸುದ್ದಿ ಚರ್ಚಾ ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಕೇಸರಿ ಬಟ್ಟೆ ಧರಿಸಿದ ಕೆಲವು ಜನರು ಸುದ್ದಿ ಕೊಠಡಿಗೆ ಬಂದು ತನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಕೋಲುಗಳಿಂದ ಹೊಡೆದಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಐಐಟಿ ಬಾಬಾ' ಸೆಕ್ಟರ್ 126 ರ ಪೊಲೀಸ್ ಹೊರ ಠಾಣೆ ಹೊರಗೆ ಕುಳಿತು ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಅವರ ಮನವೊಲಿಸಿದ ನಂತರ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಐಐಟಿ ಬಾಬಾ ಅವರು ನೋಯ್ಡಾದ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಚರ್ಚೆಯಲ್ಲಿ ಭಾಗವಹಿಸಲು ಭೇಟಿ ನೀಡಿದ್ದರು. ಈ ಸಮಯದಲ್ಲಿ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಐಐಟಿ ಬಾಬಾ ತಮ್ಮ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಅವರು ಪೊಲೀಸರಿಗೆ ಸಲ್ಲಿಸಿದ ದೂರು ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪತ್ರದಲ್ಲಿ ಅವರು "ನನ್ನನ್ನು ಚರ್ಚೆಗೆ ಆಹ್ವಾನಿಸಲಾಗಿತ್ತು. ಈ ಸಮಯದಲ್ಲಿ, ಹೊರಗಿನಿಂದ ಬಂದ ಕೆಲವು ಕೇಸರಿ ವಸ್ತ್ರಧಾರಿ ವ್ಯಕ್ತಿಗಳು ಸುದ್ದಿ ಕೋಣೆಗೆ ನುಗ್ಗಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ಆ ಕ್ಷಣದಲ್ಲಿ, ಒಬ್ಬ ವ್ಯಕ್ತಿ ನನಗೆ ಕೋಲಿನಿಂದ ಹೊಡೆದನು. ನಂತರ, ನನ್ನನ್ನು ಬಲವಂತವಾಗಿ ಕೋಣೆಯಲ್ಲಿ ಬಂಧಿಸಲಾಯಿತು. ನಾನು ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ." ಎಂದು ಹೇಳಿದ್ದರು.