ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

E20 ಪೆಟ್ರೋಲ್‌ನಿಂದ ಎಂಜಿನ್‌ಗೆ ಹಾನಿಯಿಲ್ಲ, ಮೈಲೇಜ್ ಮೇಲೂ ದೊಡ್ಡ ಪರಿಣಾಮವಿಲ್ಲ: IIT ಕಾನ್ಪುರ್ ಸಂಶೋಧನೆಯಿಂದ ದೃಢ

E20 Petrol: E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುವುದಿಲ್ಲ ಹಾಗೂ ಮೈಲೇಜ್‌ನಲ್ಲಿ ಗಮನಾರ್ಹ ಕುಸಿತವೂ ಕಂಡುಬರುವುದಿಲ್ಲ ಎಂದು ಐಐಟಿ ಕಾನ್ಪುರ್ ಸಂಶೋಧನೆ ತಿಳಿಸಿದೆ. ಚಾಲನಾ ಶೈಲಿ, ರಸ್ತೆ ಪರಿಸ್ಥಿತಿ ಮತ್ತು ವಾಹನದ ನಿರ್ವಹಣೆಯೇ ಮೈಲೇಜ್ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

E20 ಕುರಿತು ವದಂತಿ ತಳ್ಳಿ ಹಾಕಿದ IIT

ಎಐ ರಚಿತ ಚಿತ್ರ -

Profile
Sushmitha Jain Jul 15, 2026 9:20 PM

ನವದೆಹಲಿ, ಜು. 15: ದೇಶಾದ್ಯಂತ 20 ಪ್ರತಿಶತ ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಆತಂಕಗಳ ನಡುವೆಯೇ ಐಐಟಿ ಕಾನ್ಪುರ್ (IIT Kanpur) ಸಂಶೋಧಕರು E20 ಪೆಟ್ರೋಲ್ ವಾಹನಗಳ ಎಂಜಿನ್‌ಗೆ ಹಾನಿ ಉಂಟುಮಾಡುತ್ತದೆ ಅಥವಾ ಮೈಲೇಜ್‌ನಲ್ಲಿ ಗಮನಾರ್ಹ ಕುಸಿತ ಉಂಟುಮಾಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಐಐಟಿ ಕಾನ್ಪುರ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಎಂಜಿನ್ ರಿಸರ್ಚ್ ಲ್ಯಾಬ್‌ನ ಪ್ರಾಜೆಕ್ಟ್ ಸೈಂಟಿಸ್ಟ್ ಧ್ರುವ್ ರಾಜ್ ಕರಣ್‌ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ʼʼಸಂಸ್ಥೆ ಹಲವು ವರ್ಷಗಳಿಂದ E20 ಸೇರಿ ವಿವಿಧ ಎಥನಾಲ್ ಮಿಶ್ರಿತ ಇಂಧನಗಳ ಕುರಿತು ವ್ಯಾಪಕ ಸಂಶೋಧನೆ ನಡೆಸಿದ್ದು, ಪರೀಕ್ಷೆಗಳಲ್ಲಿ ಇಂಧನ ದಕ್ಷತೆಯಲ್ಲಿ 5 ಪ್ರತಿಶತಕ್ಕಿಂತ ಕಡಿಮೆ ಪ್ರಮಾಣದ ವ್ಯತ್ಯಾಸ ಮಾತ್ರ ಕಂಡುಬಂದಿದೆʼʼ ಎಂದು ತಿಳಿಸಿದ್ದಾರೆ.

ಮುಂದುವರಿದು, "ಮೈಲೇಜ್‌ನಲ್ಲಿ ಕಂಡುಬರುವ ಸಣ್ಣ ಪ್ರಮಾಣದ ವ್ಯತ್ಯಾಸಕ್ಕೆ ಇಂಧನ ಮಾತ್ರ ಕಾರಣವಲ್ಲ. ಚಾಲನಾ ಶೈಲಿ, ರಸ್ತೆ ಪರಿಸ್ಥಿತಿ, ವಾಹನದ ನಿರ್ವಹಣೆ ಹಾಗೂ ಹವಾಮಾನದಂತಹ ಅಂಶಗಳೂ ಪ್ರಮುಖ ಪಾತ್ರವಹಿಸುತ್ತವೆ. ಶುದ್ಧ ಪೆಟ್ರೋಲ್‌ನಲ್ಲಿಯೂ ಸತತ ಪರೀಕ್ಷೆ ನಡೆಸಿದರೆ ಇದೇ ರೀತಿಯ ವ್ಯತ್ಯಾಸ ಕಂಡುಬರಬಹುದು" ಎಂದು ವಿವರಿಸಿದ್ದಾರೆ.

E20 ಪೆಟ್ರೋಲ್‌ನಿಂದ ಎಂಜಿನ್ ಹಾನಿ, ತುಕ್ಕು (Corrosion) ಅಥವಾ ಇತರ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತವೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ಅವರು ʼವೈಜ್ಞಾನಿಕ ಆಧಾರವಿಲ್ಲದ ವದಂತಿಗಳುʼ ಎಂದು ತಳ್ಳಿಹಾಕಿದ್ದಾರೆ. ವಾಹನ ಚಾಲಕರು ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ನಂಬುವುದಕ್ಕಿಂತ ವಾಹನ ತಯಾರಕರ ಕೈಪಿಡಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

E20 ಪೆಟ್ರೋಲ್ ಬಳಕೆಗೆ ಎನ್‌ಡಿಎ ಬೆಂಬಲಿಗರಲ್ಲೂ ಹಿಂದೇಟು: ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿರಂಗ

ಪ್ರೊ. ಅವಿನಾಶ್ ಕುಮಾರ್ ಅಗರ್‌ವಾಲ್ ನೇತೃತ್ವದ ಐಐಟಿ ಕಾನ್ಪುರ್‌ನ ಎಂಜಿನ್ ರಿಸರ್ಚ್ ಲ್ಯಾಬ್ E20 ಮಾತ್ರವಲ್ಲದೆ, 85 ಪ್ರತಿಶತ ಎಥನಾಲ್ ಹೊಂದಿರುವ E85 ಇಂಧನದ ಮೇಲೂ ಯಶಸ್ವಿ ಪರೀಕ್ಷೆ ನಡೆಸಿದೆ. ಆದರೆ E85 ಬಳಕೆಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಎಂಜಿನ್ ಮತ್ತು ಹೊಂದಾಣಿಕೆಯ ಇಂಧನ ವ್ಯವಸ್ಥೆ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಬಿಡುಗಡೆ ಮಾಡಿದ್ದ ಪ್ರಶ್ನೋತ್ತರ (FAQ) ದಾಖಲೆಯಲ್ಲಿ, E20 ಬಳಕೆಯಿಂದ ಕೆಲವು ವಾಹನಗಳಲ್ಲಿ ಗರಿಷ್ಠ 5 ಪ್ರತಿಶತದವರೆಗೆ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿತ್ತು.

ಆದರೆ ಅದರಿಂದ ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗುವುದು, ಕಚ್ಚಾ ತೈಲ ಆಮದು ಮೇಲಿನ ಅವಲಂಬನೆ ಇಳಿಯುವುದು, ರೈತರಿಗೆ ಹೆಚ್ಚುವರಿ ಆದಾಯ ದೊರೆಯುವುದು ಹಾಗೂ ಪರಿಸರ ಸಂರಕ್ಷಣೆಗೆ ನೆರವಾಗುವುದು ಸೇರಿಹಲವು ಪ್ರಯೋಜನಗಳು ದೊರೆಯುತ್ತವೆ ಎಂದು ಸಚಿವಾಲಯ ತಿಳಿಸಿತ್ತು.

ಭಾರತ ಸರ್ಕಾರವು 2025ರಿಂದ ದೇಶಾದ್ಯಂತ E20 ಪೆಟ್ರೋಲ್ ಅನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದು, ಇದರಿಂದ ಇಂಧನ ಆಮದು ವೆಚ್ಚ ಕಡಿಮೆ ಮಾಡುವುದರ ಜತೆಗೆ ಹಸಿರು ಇಂಧನ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.