ನವದೆಹಲಿ: ಪಾಕಿಸ್ತಾನ (Pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (Pakistan-Occupied Kashmir) ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ಆಪರೇಷನ್ ಸಿಂದೂರ್ ಹೆಸರಿನಲ್ಲಿ ದಾಳಿ ನಡೆಸಿದ ಮೂರು ತಿಂಗಳ ನಂತರ, ವಾಯುಸೇನೆಯ ಉಪಮುಖ್ಯಸ್ಥ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ (Narmdeshwar Tiwari) ಎನ್‌ಡಿಟಿವಿ ಡಿಫೆನ್ಸ್ ಸಮ್ಮಿಟ್‌ನಲ್ಲಿ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಆಪರೇಷನ್ ಸಿಂದೂರದ (Operation Sindoor) ಹೊಸ ದೃಶ್ಯಗಳು ಮತ್ತು ವಿವರಗಳನ್ನು ತೆರೆದಿಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಹತ್ಯೆಗೈದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ಪ್ರಾರಂಭವಾಯಿತು. ಭಾರತೀಯ ವಾಯುಸೇನೆಯು 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳನ್ನು ಬಳಸಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿತು ಎಂದಿದ್ದಾರೆ.
ʼʼನಾವು ಹಲವು ಗುರಿಗಳನ್ನು ಆಯ್ಕೆ ಮಾಡಿದ್ದೆವು. ಕೊನೆಗೆ ಒಂಬತ್ತು ಗುರಿಗಳನ್ನು ಮಾತ್ರ ಟಾರ್ಗೆಟ್ ಮಾಡಿದ್ವಿ. ಕಡಿಮೆ ಶಸ್ತ್ರಾಸ್ತ್ರಗಳಿಂದ ಸಂಘರ್ಷವನ್ನು ನಿಯಂತ್ರಿಸಲಾಯಿತುʼʼ ಎಂದು ತಿವಾರಿ ಅವರು ಹೇಳಿದ್ದಾರೆ. "ಯುದ್ಧ ಪ್ರಾರಂಭಿಸುವುದು ಸುಲಭ, ಆದರೆ ಕೊನೆಗೊಳಿಸುವುದು ಕಷ್ಟ. ನಮ್ಮ ಸೇನೆಯನ್ನು ಸಕ್ರಿಯಗೊಳಿಸಿ, ಯಾವುದೇ ಸಂದರ್ಭಕ್ಕೂ ಸಿದ್ಧವಾಗಿರುವಂತೆ ಮಾಡಲಾಯಿತು" ಎಂದು ಅವರು ವಿವರಿಸಿದ್ದಾರೆ. ಈ ಯಶಸ್ಸಿಗೆ ಭಾರತದ ಸಂಯೋಜಿತ ವಾಯು ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ (IACCS) ಪ್ರಮುಖವಾಗಿತ್ತು, ಇದು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಸಂಯೋಜಿಸಿತು.
ಈ ಸುದ್ದಿಯನ್ನು ಓದಿ: Viral Video: ಬೈಕ್‍ನಲ್ಲಿದ್ದ ಚೀಲ ಎತ್ತಿಕೊಂಡ ಮಂಗ; 80,000 ರೂಪಾಯಿ ಹಣವನ್ನು ಸುರಿದು ಕಪಿಚೇಷ್ಟೆ, ವ್ಯಕ್ತಿಗೆ ಪರದಾಟ
ದೆಹಲಿಯಿಂದ ಮೂರು ರೀತಿಯ ಆದೇಶ
ದಾಳಿಗಳು ಗೋಚರವಾಗಿರಬೇಕು, ಭವಿಷ್ಯದ ಆಕ್ರಮಣಗಳನ್ನು ತಡೆಯುವ ಸಂದೇಶವಾಗಿರಬೇಕು, ಮತ್ತು ಸೇನೆಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವಿರಬೇಕು. ಈ ಸ್ವಾತಂತ್ರ್ಯವು ತಕ್ಷಣವೇ ಪ್ರತಿಕ್ರಿಯಿಸಲು ಸಹಾಯ ಮಾಡಿತು. ಭಾರತದ ಶಕಸ್ತವಾದ ಪ್ರತಿದಾಳಿಯ ಬಳಿಕ ಮೇ 10ರ ಸಂಜೆಯಿಂದ ಭಾರತ ಮತ್ತು ಪಾಕಿಸ್ತಾನ ಎಲ್ಲ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡವು. ಆದರೆ ಬಳಿಕ ಪಾಕಿಸ್ತಾನದ ಡ್ರೋನ್‌ಗಳು ಜಮ್ಮು ಕಾಶ್ಮೀರ ಮತ್ತು ಗುಜರಾತ್‌ನಲ್ಲಿ ಕಂಡುಬಂದವು. ಇದಕ್ಕೆ ಭಾರತ ಸೂಕ್ತ ಪ್ರತಿಕ್ರಿಯೆ ನೀಡಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದರು.
ಮೇ 10ರ ವೇಳೆಗೆ ಭಾರತೀಯ ವಾಯುಪಡೆಯ ಬ್ರಹ್ಮೋಸ್-ಎ ಕ್ಷಿಪಣಿಗಳು ಪಾಕಿಸ್ತಾನದ ಚಕ್ಲಾಲಾ ಮತ್ತು ಸರ್ಗೋಧಾ ವಾಯುನೆಲೆಗಳ ಮೇಲೆ ದಾಳಿ ನಡೆಸಿದವು. ಜಾಕೋಬಾಬಾದ್, ಭೋಲಾರಿ ನೆಲೆಗಳ ಮೇಲಿನ ದಾಳಿಗಳು ಖಚಿತವಾದವು. ಮಧ್ಯಾಹ್ನ ಪಾಕಿಸ್ತಾನದ ಆಕ್ರಮಣಕಾರಿ ತಂತ್ರಗಳನ್ನು ತಡೆದ ನಂತರ, ಪಾಕ್ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಭಾರತದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರಿಗೆ ಕರೆ ಮಾಡಿದರು, ಇದು ಶಾಂತಿಯ ಮಾತುಕತೆಗೆ ದಾರಿ ಮಾಡಿಕೊಟ್ಟಿತು.