ನವದೆಹಲಿ, ಜೂ. 7: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ದುಬೈಯಲ್ಲಿರುವ ಇರಾನಿಯನ್ ಆಸ್ಪತ್ರೆ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ವಿಶೇಷವಾಗಿ ಕೇರಳಂನ (Keralam) ನೂರಾರು ನರ್ಸ್‌ಗಳು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ತುರ್ತು ಹಸ್ತಕ್ಷೇಪ ಮಾಡುವಂತೆ ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ (Keralam CM Satheesan) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ವಿ.ಡಿ. ಸತೀಶನ್, ಈ ಪರಿಸ್ಥಿತಿಯನ್ನು ವಿದೇಶದಲ್ಲಿರುವ ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಮಾನವೀಯ ಸಮಸ್ಯೆಯೆಂದು ವಿವರಿಸಿದ್ದಾರೆ. ಅಲ್ಲದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ಯುಎಇ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಆರೋಗ್ಯ ಸಿಬ್ಬಂದಿ ಈಗ ಉದ್ಯೋಗ ವೀಸಾ, ಡಿಪೆಂಡೆಂಟ್ ವೀಸಾ ಹಾಗೂ ವಿಸಿಟ್ ವೀಸಾಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಹಲವು ಮಲಯಾಳಿ ಕುಟುಂಬಗಳು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಕೇರಳಂ ಮುಖ್ಯಮಂತ್ರಿ ತಿಳಿಸಿದ್ದಾರೆ.
ಕೇರಳಂ ವಿಧಾನಸಭೆಯಲ್ಲೂ ಮೊಳಗಿದ ಕನ್ನಡ; ಬಸವಣ್ಣನ ವಚನ ವಾಚಿಸಿದ ಮುಸ್ಲಿಂ ಲೀಗ್ ಶಾಸಕ ಎ.ಕೆ.ಎಂ. ಅಶ್ರಫ್
ಪಶ್ಚಿಮ ಏಷ್ಯಾದಲ್ಲಿನ ಪ್ರಾದೇಶಿಕ ಅಸ್ಥಿರತೆಯು ಗಲ್ಫ್ ಉದ್ಯೋಗವನ್ನು ಅವಲಂಬಿಸಿರುವ ವಲಸಿಗ ಸಮುದಾಯಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ. ದುಬೈಯಲ್ಲಿರುವ ಇರಾನಿಯನ್ ಆಸ್ಪತ್ರೆ ಹೆಚ್ಚಿನ ಸಂಖ್ಯೆಯ ಭಾರತೀಯ ಆರೋಗ್ಯ ಕಾರ್ಯಕರ್ತರನ್ನು ವಿಶೇಷವಾಗಿ ಮಲಯಾಳಿ ದಾದಿಯರನ್ನು ನೇಮಿಸಿಕೊಂಡಿದೆ. ಅವರಲ್ಲಿ ಹಲವರು ಯುಎಇಯಲ್ಲಿ ಹಲವು ವರ್ಷಗಳಿಂದ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.
ವಿ.ಡಿ. ಸತೀಶನ್ ಅವರಿಗೆ ಕಳುಹಿಸಿದ ಮನವಿಯಲ್ಲಿ ಅಲ್ಲಿರುವ ಕೇರಳಿಗರು, ದುಬೈ ಆರೋಗ್ಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರೂ, ಇರಾನಿಯನ್ ಆಸ್ಪತ್ರೆ ಮುಚ್ಚಿದ ಬಳಿಕ ಹೊಸ ಉದ್ಯೋಗ ವೀಸಾಗಳನ್ನು ಪಡೆಯಲು ಅಥವಾ ಈಗಿರುವ ವೀಸಾಗಳನ್ನು ವರ್ಗಾಯಿಸಿಕೊಳ್ಳಲು ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಆಸ್ಪತ್ರೆ ಮುಚ್ಚರಿರುವುದರಿಂದ ಕುಟುಂಬ ಸದಸ್ಯರಿಗಾಗಿ ಡಿಪೆಂಡೆಂಟ್ ವೀಸಾಗಳು ಹಾಗೂ ವಿಸಿಟ್ ವೀಸಾಗಳನ್ನು ಪಡೆಯುವುದಕ್ಕೂ ತೊಂದರೆ ಉಂಟಾಗಿದೆ ಎಂದು ಆರೋಗ್ಯ ಸಿಬ್ಬಂದಿ ನೋವು ತಫಡಿಕೊಂಡಿದ್ದಾರೆ.
ನರ್ಸ್‌ಗಳು ಕೇರಳಂ ಮುಖ್ಯಮಂತ್ರಿಗೆ ನೀಡಿದ ಮಾಹಿತಿಯ ಪ್ರಕಾರ, ಅವರಲ್ಲಿ ಹಲವರು ಯುಎಇಯಲ್ಲಿ ನೀಡಲಾದ ಗ್ರೇಸ್ ಪಿರಿಯಡ್‌ನ ಅಂತಿಮ ಹಂತಕ್ಕೆ ತಲುಪಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಶೀಘ್ರದಲ್ಲೇ ದೇಶವನ್ನು ಸಂಪೂರ್ಣವಾಗಿ ತೊರೆಯಬೇಕಾದ ಅನಿವಾರ್ಯತೆ ಎದುರಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕೇರಳಂ ಗಲ್ಫ್ ಪ್ರದೇಶದಲ್ಲಿ ದೇಶದ ಅತಿದೊಡ್ಡ ವಲಸಿಗ ಜನಸಂಖ್ಯೆಯನ್ನು ಹೊಂದಿದೆ. ವಿದೇಶಿ ಕಾರ್ಮಿಕರಿಂದ ಬರುವ ಹಣವು ರಾಜ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಮಲಯಾಳಿ ವಲಸಿಗರನ್ನು ಬಾಧಿಸುವ ಸಂಕಷ್ಟಗಳು ಎದುರಾದಾಗ, ಕೇರಳಂ ಸರ್ಕಾರವು ಹಲವು ಬಾರಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಕೋರಿದೆ.