ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಾಲಾ ಬಾಲಕಿಯರಿಗೆ ದೊರೆಯಲಿದೆ 3 ದಿನಗಳ ಮುಟ್ಟಿನ ರಜೆ

Menstrual Leave for Schoolgirls: ಶಾಲಾ ಬಾಲಕಿಯರಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ ನೀಡಲು ಕೇರಳಂನ ಯುಡಿಎಫ್ ಸರ್ಕಾರವು ಮುಂದಾಗಿದೆ. ಮಹಿಳಾ ಮತ್ತು ಮಕ್ಕಳ ಸ್ನೇಹಿ ಕ್ರಮ ಜಾರಿಗೊಳಿಸುವುದು ಮುಖ್ಯಮಂತ್ರಿ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರದ ಯೋಜನೆ. ಇದನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಶುಕ್ರವಾರ (ಮೇ 29) ರಾಜ್ಯ ವಿಧಾನಸಭೆಯಲ್ಲಿ ವಾಚಿಸಿದರು.

ಶಾಲಾ ಬಾಲಕಿಯರಿಗೆ 3 ದಿನಗಳ ಮುಟ್ಟಿನ ರಜೆ ಘೋಷಿಸಲು ಮುಂದಾದ ಕೇರಳಂ

ಎಐ ರಚಿತ ಚಿತ್ರ -

Priyanka P
Priyanka P May 30, 2026 3:04 PM

ತಿರುವನಂತಪುರಂ, ಮೇ 30: ಶಾಲಾ ಬಾಲಕಿಯರಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ ನೀಡಲು ಕೇರಳಂನ (Keralam) ಯುಡಿಎಫ್ ಸರ್ಕಾರ ಮುಂದಾಗಿದೆ. ಪ್ರತಿ ತಿಂಗಳು ಮುಟ್ಟು (Menstruation) ಆಗುವ ಸಮಯದಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ 3 ದಿನಗಳ ರಜೆ ನೀಡುವ ಯೋಜನೆ ಇದಾಗಿದೆ. ಹಾಗೆಯೇ 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲ ಸಂಸ್ಥೆಗಳು, ಕಚೇರಿಗಳು ಮತ್ತು ಉದ್ಯೋಗದ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಮಕ್ಕಳ ಆರೈಕೆ ಕೇಂದ್ರಗಳು (Daycare Centres), ಶಿಶು ವಿಹಾರಗಳನ್ನು ಸ್ಥಾಪಿಸಬೇಕು ಎಂಬ ಪ್ರಸ್ತಾಪವೂ ಇದೆ. ಉದ್ಯೋಗ ಮಾಡುವ ಮಹಿಳೆಯರಿಗೆ ಇದು ಸಹಾಯವಾಗಲಿದೆ.

ಮಹಿಳಾ ಮತ್ತು ಮಕ್ಕಳ ಸ್ನೇಹಿ ಕ್ರಮಗಳನ್ನು ಜಾರಿಗೊಳಿಸುವುದು ವಿ.ಡಿ. ಸತೀಶನ್ ನೇತೃತ್ವದ ಸರ್ಕಾರದ ಉದ್ದೇಶ. ಇದನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಶುಕ್ರವಾರ (ಮೇ 29) ರಾಜ್ಯ ವಿಧಾನಸಭೆಯಲ್ಲಿ ವಾಚಿಸಿದರು. “ಬಾಲಕಿಯರ ಬಗ್ಗೆ ನಮ್ಮ ಬದ್ಧತೆಯು ಮುಟ್ಟಿನ ರಜೆ ಯೋಜನೆಯಲ್ಲಿ ಪ್ರತಿಫಲಿಸುತ್ತದೆ. ಈ ಯೋಜನೆಯಡಿ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಾಲಕಿಯರು ಮತ್ತು ಮಹಿಳೆಯರಿಗೆ ಹೆಚ್ಚು ಸ್ನೇಹಪರ, ಸುರಕ್ಷಿತ ಹಾಗೂ ಅನುಕೂಲವಾಗಿಸುವ ಉದ್ದೇಶ ಹೊಂದಿದ್ದೇವೆ” ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.

“ಬಾಲಕಿಯರು ತಮ್ಮ ಅಧ್ಯಯನದಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಶಾಲಾ ವಿದ್ಯಾರ್ಥಿನಿಯರಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ ಮತ್ತು ವಾರಾಂತ್ಯಗಳಲ್ಲಿ ವಿಶೇಷ ಪೂರಕ ತರಗತಿಗಳನ್ನು ನಡೆಸುವ ಉದ್ದೇಶವೂ ಇದೆ” ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ವಿವಾದದ ಕಿಡಿ ಹೊತ್ತಿಸಿದ ಕೇರಳಂ ಸಿಎಂ ಗುರುವಾಯೂರು ದೇವಸ್ಥಾನ ಭೇಟಿ: ಹೈಕೋರ್ಟ್ ಆದೇಶ ಉಲ್ಲಂಘನೆ ಎಂದ ಬಿಜೆಪಿ

ʼʼ1961ರ ಮಾತೃತ್ವ ಪ್ರಯೋಜನ ಕಾಯ್ದೆಯಡಿ ಕಡ್ಡಾಯವಾಗಿ ಮಕ್ಕಳ ಆರೈಕೆ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆʼʼ ಎಂದು ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ. ʼʼʼಎಲ್ಲ ಸಾರ್ವಜನಿಕ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳು, ಐಟಿ ಪಾರ್ಕ್‌ಗಳು ಮತ್ತು 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲ ಸಂಸ್ಥೆಗಳು ಸುರಕ್ಷಿತ, ಉತ್ತಮ ಗುಣಮಟ್ಟದ ಡೇಕೇರ್ ಕೇಂದ್ರಗಳು ಮತ್ತು ಶಿಶುವಿಹಾರಗಳನ್ನು ನಡೆಸುವುದನ್ನು ಖಚಿತಪಡಿಸಬೇಕುʼʼ ಎಂದು ಅವರು ತಿಳಿಸಿದ್ದಾರೆ.

ದತ್ತು ಸ್ವೀಕಾರ ಅಭಿಯಾನ

ʼʼನಿರ್ಗತಿಕರು ಮತ್ತು ಅನಾಥ ಮುಕ್ತ ಯೋಜನೆಯಡಿ ಸರ್ಕಾರವು ದತ್ತು ಸ್ವೀಕಾರ ಅಭಿಯಾನಗಳನ್ನು ಉತ್ತೇಜಿಸಲು ಹಾಗೂ ಬಾಲ ನ್ಯಾಯ ಕಾಯ್ದೆಯ ಆಧಾರದ ಮೇಲೆ ತರಬೇತಿ ಪಡೆದ ಮತ್ತು ಉತ್ತಮ ಸಂಭಾವನೆ ಪಡೆಯುವ ದತ್ತು ಕುಟುಂಬಗಳ ಜಾಲವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಕೇರಳಂ ಅನ್ನು ಭಾರತದ ಮೊದಲ ಅನಾಥ-ಮುಕ್ತ (Orphan-Free State) ರಾಜ್ಯವಾಗಿಸುವ ಗುರಿ ಇದೆʼʼ ಎಂದು ರಾಜ್ಯಪಾಲರು ವಿವರಿಸಿದ್ದಾರೆ.

ʼʼಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವಿಶೇಷ ಸವಲತ್ತುಗಳನ್ನು ವಿಸ್ತರಿಸಲಾಗುವುದು ಮತ್ತು ಆರು ತಿಂಗಳ ಹೆರಿಗೆ ರಜೆ ನೀಡಲಾಗುವುದುʼʼ ಎಂದು ಅವರು ಹೇಳಿದ್ದಾರೆ. ʼʼಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್, ಪಾದರಕ್ಷೆಗಳು ಮತ್ತು ಇತರ ಅಗತ್ಯ ವಸ್ತುಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಮಾಹಿತಿ ನೀಡಿದ್ದಾರೆ.