ನವದೆಹಲಿ, ಅ. 7: ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಹಲ್ಲೆಯಿಂದ ತೀವ್ರ ಗಾಯಗೊಂಡು ಸದ್ಯ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ಧೈರ್ಯಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತೊಮ್ಮೆ ಅವರ ಸಾಹಸ ಕೊಂಡಾಡಿದ್ದಾರೆ. ಹಾಗೇ ಮುಂದೊಂದು ದಿನ ಭಾರತದಲ್ಲಿ ತಯಾರಾಗುವ ವಿಮಾನಗಳ ಬಗ್ಗೆಯೂ ಇಡೀ ಜಗತ್ತು ಮಾತನಾಡುವ ದಿನ ಬರಲಿದೆ ಎಂದು ಹೇಳಿದ್ದಾರೆ.
‘ಸೇವಾ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ʼʼಇತ್ತೀಚೆಗೆ ಫ್ಲೈದುಬೈ ವಿಮಾನದಲ್ಲಿ ನಡೆದ ಹಲ್ಲೆ ಘಟನೆಯ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತೋರಿದ ಧೈರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ತೀವ್ರ ಗಾಯಗಳಾಗಿದ್ದರೂ ಅವರು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸುವ ಕಾರ್ಯವನ್ನು ಮಾಡಿದರು. ಇದರ ಪ್ರತಿಫಲವಾಗಿ ಕ್ಯಾಪ್ಟನ್ ಸ್ಮಿತ್ ಅವರ ಅಸಾಧಾರಣ ತಾಳ್ಮೆ, ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ. ಇವತ್ತು ಭಾರತದ ಕ್ಯಾಪ್ಟನ್ ಬಗ್ಗೆ ಮಾತನಾಡುತ್ತಿರುವವರು ಭವಿಷ್ಯದಲ್ಲಿ ಭಾರತದಲ್ಲಿ ತಯಾರಾದ ವಿಮಾನಗಳ ಬಗ್ಗೆಯೂ ಇಡೀ ಜಗತ್ತು ಮಾತನಾಲಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾಷಣ:
ಫ್ಲೈದುಬೈ ವಿಮಾನದಲ್ಲಿ ನಡೆದ ಗಂಭೀರ ಘಟನೆ ಸಂದರ್ಭದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೈರ್ಯ ಮತ್ತು ಸಮಯಪ್ರಜ್ಞೆ 9/11 ಮಾದರಿಯ ದುರಂತವನ್ನು ತಪ್ಪಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್‌ಪಿಟ್ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಗಿತ್ತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಈ ಘಟನೆಯ ಬಳಿಕ ಮಚ್ಚಾರ್ ಅವರ ಧೈರ್ಯ ಮತ್ತು ಸಮಯಪ್ರಜ್ಞೆಗೆ ಭಾರತ ಸೇರಿ ಹಲವು ದೇಶಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಕೂಡ ಈ ಹಿಂದೆ ಅವರನ್ನು ʼಹೀರೋʼ ಎಂದು ಕರೆದಿದ್ದು, ಅವರ ಧೈರ್ಯದಿಂದ ನೂರಾರು ಪ್ರಯಾಣಿಕರ ಜೀವ ಉಳಿಯಲು ಸಾಧ್ಯವಾಯಿತು ಎಂದು ಶ್ಲಾಘಿಸಿದ್ದರು.
ಸೇವಾ ಸಂಕಲ್ಪ ಯಾತ್ರೆಗೆ ತೆರೆ
ಪ್ರಧಾನಿ ಮೋದಿ ತಮ್ಮ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಗುರುತಿಸುವ ಸಲುವಾಗಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ಸೇವಾ ಸಂಕಲ್ಪ ಯಾತ್ರೆ’ಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೆಪ್ಟೆಂಬರ್ 17ರಂದು ಆರಂಭಗೊಂಡಿದ್ದ ಯಾತ್ರೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, ಮೋದಿ ಅವರ ಜೀವನ ಮತ್ತು ಆಧ್ಯಾತ್ಮಿಕ ಹಿನ್ನೆಲೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ವಾರಾಣಸಿ ಮತ್ತು ವಡ್ನಾಗರದಲ್ಲಿ ಸಮಾರೋಪಗೊಂಡಿತು.
ವಾರಾಣಸಿಯಲ್ಲಿ ಸೇವಾ ಯಾತ್ರಿಗಳು ಕಾಶಿ ವಿಶ್ವನಾಥ ಧಾಮದಲ್ಲಿ ಜಲಾಭಿಷೇಕ ನೆರವೇರಿಸುವ ಮೂಲಕ ಯಾತ್ರೆಯನ್ನು ಪೂರ್ಣಗೊಳಿಸಿದರು. ಕಾರ್ಯಕ್ರಮದಲ್ಲಿ ಸೇವಾ ಯಾತ್ರಿಗಳು, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಯುವಕರು ಭಾಗವಹಿಸಿದ್ದರು.
ಇತ್ತ ವಡ್ನಾಗರದ ಐತಿಹಾಸಿಕ ಹಾಟಕೇಶ್ವರ ಮಹಾದೇವ ದೇವಸ್ಥಾನದಲ್ಲಿ ಯಾತ್ರೆಯ ಸಮಾರೋಪ ನಡೆಯಿತು.
ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹೇಮಂಗ್ ಜೋಶಿ ಮತ್ತಿತರರು ಭಾಗವಹಿಸಿದ್ದರು.