ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ಹೊರ್ಮುಜ್ ಸಂಘರ್ಷದ ವೇಳೆ ಭಾರತೀಯ ನಾವಿಕ ಮೃತಪಟ್ಟಿಲ್ಲ”: ಸುಪ್ರೀಂ ಕೋರ್ಟ್ ಮೊರೆ ಹೋದ ಮರ್ಚೆಂಟ್ ನೇವಿ ಕ್ಯಾಪ್ಟನ್ ಪತ್ನಿ

Indian Sailor: ಮರ್ಚೆಂಟ್ ನೇವಿ ಕ್ಯಾಪ್ಟನ್ ಆಶಿಶ್ ಕುಮಾರ್ ಜೀವಂತವಾಗಿದ್ದಾರೆ. ವಿದೇಶಿ ವ್ಯಕ್ತಿಗಳ ಅಕ್ರಮ ಬಂಧನದಲ್ಲಿದ್ದಾರೆ ಎಂದು ಹೇಳಿರುವ ಅವರ ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂತಾರಾಷ್ಟ್ರೀಯ ಸಂಖ್ಯೆಯಿಂದ ತನಗೆ ಸುಲಿಗೆ ಕರೆ ಬಂದಿದೆ, ಅವರ ಬಿಡುಗಡೆಗಾಗಿ 20 ಲಕ್ಷ ರುಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಮರ್ಚೆಂಟ್ ನೇವಿ ಕ್ಯಾಪ್ಟನ್ ಆಶಿಶ್ ಕುಮಾರ್ (ಸಂಗ್ರಹ ಚಿತ್ರ)

ನವದೆಹಲಿ, ಆ. 4: ಇರಾನ್ ಯುದ್ಧದ (Iran War) ಆರಂಭದಲ್ಲಿ ಒಮನ್ ಕೊಲ್ಲಿಯಲ್ಲಿ ಲಂಗರು ಹಾಕಲಾಗಿದ್ದ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಮರ್ಚೆಂಟ್ ನೇವಿ ಕ್ಯಾಪ್ಟನ್ ಆಶಿಶ್ ಕುಮಾರ್ ಜೀವಂತವಾಗಿದ್ದಾರೆ ಎಂದು ಅವರ ಪತ್ನಿ ಹೇಳಿದ್ದಾರೆ. ತಮ್ಮ ಪತಿ ಜೀವಂತವಾಗಿದ್ದಾರೆ, ವಿದೇಶಿ ವ್ಯಕ್ತಿಗಳ ಅಕ್ರಮ ಬಂಧನದಲ್ಲಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಲಾಗಿದೆ. ಅಂತಾರಾಷ್ಟ್ರೀಯ ಸಂಖ್ಯೆಯಿಂದ ತನಗೆ ಸುಲಿಗೆ ಕರೆ ಬಂದಿದೆ, ಅವರ ಬಿಡುಗಡೆಗಾಗಿ 20 ಲಕ್ಷ ರುಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಆಶಿಶ್ ಕುಮಾರ್ ಅವರ ಪತ್ನಿ ಅಂಶು ಹೇಳಿದ್ದಾರೆ.

ಮಾರ್ಚ್ 1ರಂದು ಒಮಾನ್‌ನ ಖಾಸಬ್ ಬಂದರಿನ ಬಳಿ ತೈಲ ಟ್ಯಾಂಕರ್ ಸ್ಕೈ ಲೈಟ್ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ ಬಿಹಾರದ ಬೆಟ್ಟಿಯಾ ಮೂಲದ 37 ವರ್ಷದ ಆಶಿಶ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ದಾಳಿ ನಡೆದಾಗ ಲಂಗರು ಹಾಕಿದ್ದ ಹಡಗಿನಲ್ಲಿ 10 ಮಂದಿ ಭಾರತೀಯ ನಾವಿಕರು ಇದ್ದರು ಎಂದು ಅಂದಿನ ಭಾರತೀಯ ರಾಯಭಾರ ಕಚೇರಿ ತಿಳಿಸಿತ್ತು. ದಾಳಿಯ ವೇಳೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೊರ್ಮುಜ್ ಜಲಸಂಧಿಯು ಯುದ್ಧ ವಲಯವಾಗಿ ಪರಿವರ್ತನೆಗೊಂಡಾಗ ಆರಂಭಿಕ ಸಂಘರ್ಷದಲ್ಲಿ ಈ ಘಟನೆ ನಡೆದಿತ್ತು.

ಆ ಸಮಯದಲ್ಲಿ ಎಂಟು ಸಿಬ್ಬಂದಿಯನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದರು. ಆದರೆ ಎಂಜಿನ್ ಕೋಣೆಯಲ್ಲಿದ್ದ ಕ್ಯಾಪ್ಟನ್ ಕುಮಾರ್ ಮತ್ತು ಸಿಬ್ಬಂದಿ ದಲಿಪ್ ನಾಪತ್ತೆಯಾಗಿದ್ದರು. ಮಾರ್ಚ್ 4ರಂದು ಓಮಾನ್‌ ಕೋಸ್ಟ್ ಗಾರ್ಡ್ ಕ್ಯಾಪ್ಟನ್ ಕೋಣೆಯಲ್ಲಿ ಸುಟ್ಟ ತಲೆಬುರುಡೆ ಮತ್ತು ಮೂಳೆಗಳು ಕಂಡುಬಂತು. ಕ್ಯಾಪ್ಟನ್ ಕೋಣೆಗೆ ಯಾರೂ ಪ್ರವೇಶಿಸಿಲ್ಲ. ಅವಶೇಷಗಳು ಕ್ಯಾಪ್ಟನ್ ಕುಮಾರ್ ಅವರದ್ದಾಗಿರಬಹುದು ಎಂದು ರಾಯಭಾರ ಕಚೇರಿ ಹೇಳಿತ್ತು.

ಇರಾನ್ ಮೇಲೆ ಜೋರ್ಡಾನ್ ಪ್ರತೀಕಾರದ ದಾಳಿ ಆರಂಭಿಸಿದ ಅಮೆರಿಕ; ಹೊರ್ಮುಜ್‌ನಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಳ

ಕುಮಾರ್ ಅವರ ಕುಟುಂಬವು ಇದನ್ನು ಒಪ್ಪಿಕೊಂಡಿಲ್ಲ. ಕಿರಿಯ ಸಹೋದರ ಒದಗಿಸಿದ ಮಾದರಿಗಳೊಂದಿಗೆ ಅವಶೇಷಗಳ ವಿಧಿವಿಜ್ಞಾನ ಮತ್ತು ಡಿಎನ್ಎ ಪರೀಕ್ಷೆಯು ನಕಾರಾತ್ಮಕ ಫಲಿತಾಂಶ ನೀಡಿದೆ ಎಂದು ಹೇಳಿದೆ.

ಲಭ್ಯವಿರುವ ಎಲ್ಲ ರಾಜತಾಂತ್ರಿಕ, ದೂತಾವಾಸ ಮತ್ತು ಗುಪ್ತಚರ ಮಾರ್ಗಗಳನ್ನು ಬಳಸಿಕೊಂಡು ಕ್ಯಾಪ್ಟನ್ ಕುಮಾರ್ ಅವರನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳ ಮೂಲಕ ಭಾರತ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಅವರ ಪತ್ನಿ ತಮ್ಮ ಅರ್ಜಿಯ ಮೂಲಕ ಕೋರಿದ್ದಾರೆ.

ಇನ್ನು ಪತ್ತೆಯಾಗಿರುವ ಅವಶೇಷಗಳು ಕ್ಯಾಪ್ಟನ್ ಆಶಿಶ್ ಕುಮಾರ್ ಅವರಿಗೆ ಸೇರಿದ್ದಲ್ಲ ಎಂದು ಮೇ 15ರಂದು ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿತ್ತು. ಡಿಎನ್‌ಎ ಸಾಕ್ಷ್ಯಗಳ ಹೊರತಾಗಿಯೂ ಕ್ಯಾಪ್ಟನ್ ಆಶಿಶ್ ಕುಮಾರ್ ದಾಳಿಯ ಬಳಿಕವೂ ಜೀವಂತವಾಗಿದ್ದರು ಎಂದು ಹೇಳಲು ಅರ್ಜಿಯಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನೂ ಉಲ್ಲೇಖಿಸಲಾಗಿದೆ.

ಇರಾನ್ ಮೇಲೆ ಅಮೆರಿಕದಿಂದ ಮತ್ತೆ ವೈಮಾನಿಕ ದಾಳಿ; ಎದಿರೇಟು ನೀಡಿದ ಇರಾನ್‌

ದಾಳಿ ನಡೆದ ದಿನ ಅಂಶು ಕಳುಹಿಸಿದ್ದ ವ್ಯಾಟ್ಸ್‌ಆ್ಯಪ್‌ ಸಂದೇಶವು ಹಡಗಿನ ಮೇಲೆ ದಾಳಿ ನಡೆದ ಮೂರು ಗಂಟೆಗಳಿಗೂ ಹೆಚ್ಚು ಸಮಯದ ನಂತರವೂ ಕ್ಯಾಪ್ಟನ್ ಅವರ ಎರಡನೇ ಮೊಬೈಲ್ ಫೋನ್‌ಗೆ ಯಶಸ್ವಿಯಾಗಿ ತಲುಪಿದೆ. ಇದರಿಂದ ಆ ಮೊಬೈಲ್ ದಾಳಿಯ ಸಂದರ್ಭದಲ್ಲಿ ಹಾನಿಗೊಳಗಾಗದೆ ಉಳಿದಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕ್ಯಾಪ್ಟನ್ ಆಶಿಶ್ ಕುಮಾರ್ ಅವರ ಬಿಡುಗಡೆಗಾಗಿ 20 ಲಕ್ಷ ರುಪಾಯಿ ನೀಡಬೇಕು ಎಂಬ ಬೇಡಿಕೆಯಿಟ್ಟು, ಅಂತಾರಾಷ್ಟ್ರೀಯ ಮತ್ತು ದೇಶೀಯ ಸಂಖ್ಯೆಗಳಿಂದ ಸುಲಿಗೆ ಕರೆಗಳು ಬಂದಿವೆ. ಅವರು ಜೀವಂತವಾಗಿದ್ದಾರೆ, ತಮ್ಮ ವಶದಲ್ಲಿದ್ದಾರೆ ಎಂಬ ಕರೆಗಳು ಬಂದಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.