ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಯದ ವಾತಾವರಣ, ಇಂಟರ್‌ನೆಟ್ ಇಲ್ಲ; ಅಶಾಂತಿಯ ನಡುವೆ ಇರಾನ್‌ನಿಂದ ತಾಯ್ನಾಡಿಗೆ ಮರಳಿದ ಭಾರತೀಯರು ಹೇಳಿದ್ದೇನು?

ಇರಾನ್‌ನಲ್ಲಿ ಉಂಟಾಗಿರುವ ಅಶಾಂತಿ ಮತ್ತು ಇಂಟರ್‌ನೆಟ್ ಸ್ಥಗಿತದಿಂದ ಸಂಕಷ್ಟ ಅನುಭವಿಸಿದ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ. ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂದೆ ಎಂದು ಅವರು ಹೇಳಿದ್ದಾರೆ. ಸರ್ಕಾರದ ಸಹಾಯದಿಂದ ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಿದ್ದು, ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಇರಾನ್‌ನಿಂದ ದೇಶಕ್ಕೆ ಮರಳಿದ ಭಾರತೀಯರು.

ಟೆಹರಾನ್‌, ಜ. 17: ಇರಾನ್‌(Iran)ನಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳು ಮತ್ತು ಅಸ್ಥಿರ ಭದ್ರತಾ ಪರಿಸ್ಥಿತಿಯ ನಡುವೆ ದೇಶ ತೊರೆಯುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದ ಕೆಲವೇ ದಿನಗಳಲ್ಲಿ ಅನೇಕ ಭಾರತೀಯ ನಾಗರಿಕರು ಶುಕ್ರವಾರ (ಜನವರಿ 16) ರಾತ್ರಿ ಭಾರತಕ್ಕೆ ಮರಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ಹಾಗೂ ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಿಗಳು ಮತ್ತು ಪ್ರವಾಸಿಗರನ್ನು ಒಳಗೊಂಡಂತೆ ಇರಾನ್‌ನಲ್ಲಿದ್ದ ಭಾರತೀಯರು ಲಭ್ಯವಿರುವ ಸಾರಿಗೆ ವ್ಯವಸ್ಥೆಗಳ ಮೂಲಕ ದೇಶ ತೊರೆಯುವಂತೆ ಸೂಚಿಸಿದ್ದವು. ಸರ್ಕಾರವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಅವರ ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ಹೇಳಿದೆ.

ಇರಾನ್‌ನಿಂದ ಮರಳಿದ ನಾಗರಿಕರು ಅಲ್ಲಿ ದಿನೇ ದಿನೆ ಹದಗೆಡುತ್ತಿರುವ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ಅಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಭಾರತ ಸರ್ಕಾರ ನಮಗೆ ಬಹಳ ಸಹಕಾರ ನೀಡಿದೆ. ರಾಯಭಾರ ಕಚೇರಿ ಅಧಿಕಾರಿಗಳು ಆದಷ್ಟು ಬೇಗ ಇರಾನ್‌ ತೊರೆಯುವಂತೆ ಸೂಚಿಸಿದ್ದರು. ಮೋದಿ ಜಿ ಇದ್ದರೆ ಎಲ್ಲವೂ ಸಾಧ್ಯ” ಎಂದು ದೆಹಲಿಗೆ ಆಗಮಿಸಿದ ಭಾರತೀಯ ನಾಗರಿಕರೊಬ್ಬರು ಹೇಳಿದ್ದಾರೆ.

ಇರಾನ್‌ನಿಂದ ಭಾರತಕ್ಕೆ ಮರಳಿದ ಭಾರತೀಯ:



ಕಳೆದ ಕೆಲವು ವಾರಗಳಲ್ಲಿ ಅಸುರಕ್ಷಿತ ಭಾವನೆ ಹೆಚ್ಚಿದ ಬಗ್ಗೆ ಮಾತನಾಡಿದ ಮತ್ತೊಬ್ಬ ಭಾರತೀಯ, “ನಾವು ಒಂದು ತಿಂಗಳಿನಿಂದ ಅಲ್ಲಿ ಇದ್ದೆವು. ಆದರೆ ಕಳೆದ ಒಂದು–ಎರಡು ವಾರಗಳಿಂದ ಸಮಸ್ಯೆಗಳು ಆರಂಭವಾದವು. ನಾವು ಹೊರಗೆ ಹೋಗುವಾಗ ಪ್ರತಿಭಟನಾಕಾರರು ಕಾರಿನನ್ನು ಅಡ್ಡಗಟ್ಟಿ ತೊಂದರೆ ನೀಡುತ್ತಿದ್ದರು. ಇಂಟರ್‌ನೆಟ್ ಸಂಪೂರ್ಣ ಸ್ಥಗಿತಗೊಂಡಿತ್ತು. ಅದರಿಂದ ನಮ್ಮ ಕುಟುಂಬದವರಿಗೆ ಏನೂ ತಿಳಿಸಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದರು.

ಇರಾನ್ ಪ್ರತಿಭಟನೆಗಳಲ್ಲಿ 3,428ಕ್ಕೂ ಹೆಚ್ಚು ಮಂದಿ ಸಾವು, ದೇಶ ತೊರೆಯಲು ಭಾರತೀಯರಿಗೆ ಎಚ್ಚರಿಕೆ

ಇರಾನ್‌ಗೆ ಯಾತ್ರೆಗೆ ಹೋಗಿದ್ದ ಪತ್ನಿಯ ಅತ್ತೆಯನ್ನು ಕಾಯುತ್ತಿದ್ದ ವ್ಯಕ್ತಿಯೊಬ್ಬರು, "ಭಾರತದ ಕ್ರಮಗಳಿಂದ ಕುಟುಂಬಕ್ಕೆ ಧೈರ್ಯ ಬಂದಿತ್ತು. ಇರಾನ್ ಯಾವಾಗಲೂ ಭಾರತದ ಒಳ್ಳೆಯ ಸ್ನೇಹಿತ...ಮೋದಿ ಸರ್ಕಾರದ ಮೇಲೆ ನಮಗೆ ಪೂರ್ಣ ವಿಶ್ವಾಸವಿತ್ತು. ಇದನ್ನು ಸಾಧ್ಯವಾಗಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದಗಳು. ನಮ್ಮ ಕುಟುಂಬದ ಸದಸ್ಯರು ಮರಳುತ್ತಿರುವುದರಿಂದ ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.

ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಬದಲಾಗುತ್ತಿರುವ ಪರಿಸ್ಥಿತಿಯನ್ನು ಉಲ್ಲೇಖಿಸಿ, ವಾಣಿಜ್ಯ ವಿಮಾನಗಳು, ಲಭ್ಯವಿರುವ ಇತರ ಮಾರ್ಗಗಳ ಮೂಲಕ ದೇಶ ತೊರೆಯುವಂತೆ ಭಾರತೀಯರಿಗೆ ಮನವಿ ಮಾಡಿತ್ತು. ಜತೆಗೆ ದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮುಂದಿನ ಸೂಚನೆ ಬರುವವರೆಗೂ ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಸ್ಪಷ್ಟ ಎಚ್ಚರಿಕೆ ನೀಡಿತ್ತು.

ಇರಾನ್‌ನ ಅಶಾಂತಿ ಡಿಸೆಂಬರ್ 28ರಂದು ಟೆಹರಾನ್‌ನ ಗ್ರ್ಯಾಂಡ್ ಬಜಾರ್‌ನಲ್ಲಿ ಆರಂಭವಾಗಿದ್ದು, ರಿಯಾಲ್ ಕರೆನ್ಸಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದ ಬಳಿಕ ದೇಶವ್ಯಾಪಿ ಪ್ರತಿಭಟನೆಗಳಾಗಿ ವಿಸ್ತರಿಸಿತು. ನೀರಿನ ಕೊರತೆ, ವಿದ್ಯುತ್ ವ್ಯತ್ಯಯ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ದುಬಾರಿ ದರ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಆರ್ಥಿಕ ಸಂಕಷ್ಟ ಉಂಟಾಗಿ, ಸಾರ್ವಜನಿಕ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರತೀಯರು ಮರಳುವ ನಿರೀಕ್ಷೆಯಿರುವುದರಿಂದ, ಪರಿಸ್ಥಿತಿ ವೇಗವಾಗಿ ಬದಲಾಗುತ್ತಿರುವುದನ್ನು ಭಾರತ ಮೌಲ್ಯಮಾಪನ ಮಾಡುತ್ತಿದ್ದು, ರಾಯಭಾರ ಕಚೇರಿಯೊಂದಿಗೆ ಸಮನ್ವಯ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.