ಭಾರತದ ಮೊದಲ ವಾಹನ ಅಪಘಾತದ ಸಾವು ಎಲ್ಲಿ, ಯಾವಾಗ ಸಂಭವಿಸಿದ್ದು ಗೊತ್ತೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ
ದೇಶದಲ್ಲಿ ಮೊದಲ ವಾಹನ ಅಪಘಾತ ಮತ್ತು ಅದರಿಂದ ಸಾವು ಸಂಭವಿಸಿದ್ದು 1914ರಲ್ಲಿ. ಅಂದರೆ 111 ವರ್ಷಗಳ ಹಿಂದೆ. ಕೇರಳದಲ್ಲಿ ಸಂಭವಿಸಿದ ಈ ಐತಿಹಾಸಿಕ ಘೋರ ಅಪಘಾತಕ್ಕೆ ಸೆಪ್ಟೆಂಬರ್ 22ಕ್ಕೆ ಭರ್ತಿ 111 ವರ್ಷ ತುಂಬಿತು. ಆ ಕುರಿತಾದ ವಿವರ ಇಲ್ಲಿದೆ.

ಕೇರಳವರ್ಮ ಕೋಯಿಲ್ ತಂಬುರಾನ್ -

ತಿರುವನಂತಪುರಂ: ಈಗಂತೂ ದೇಶಾದ್ಯಂತ ಪ್ರತಿದಿನ ಹಲವು ರಸ್ತೆ ಅಪಘಾತಗಳು, ಅದರಿಂದ ಸಾವು ಸಂಭವಿಸುತ್ತಲೇ ಇರುತ್ತದೆ (Road Accident). ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರೂ, ಚಾಲಕರಿಗೆ ಸೂಕ್ತ ತರಬೇತಿ ನೀಡಿದರೂ ಯಾವುದಾದರೊಂದು ಕಾರಣಕ್ಕೆ ಆ್ಯಕ್ಸಿಡೆಂಟ್ ಆಗುತ್ತಲೇ ಇರುತ್ತದೆ. ರಸ್ತೆ ಸಾರಿಗೆ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ಗಂಟೆಗೆ 52 ರಸ್ತೆ ಅಪಘಾತಗಳಲ್ಲಿ 20 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದಲ್ಲದೇ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ಮಧ್ಯೆ ದೇಶದಲ್ಲಿ ಮೊದಲ ಮೋಟಾರ್ ವಾಹನ ಅಪಘಾತ, ಅದರಿಂದ ಸಾವು ಸಂಭವಿಸಿದ್ದು ಯಾವಾಗ, ಎಲ್ಲಿ ಎನ್ನುವ ಕುತೂಹಲ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ. ವಿಶೇಷ ಎಂದರೆ ದೇಶದ ಮೊದಲ ವಾಹನ ಅಪಘಾತದ ಸಾವು ಸಂಭವಿಸಿ ಇಂದಿಗೆ 1 ಶತಮಾನ ಕಳೆದಿದೆ.
ದೇಶದಲ್ಲಿ ಮೊದಲ ವಾಹನ ಅಪಘಾತ ಮತ್ತು ಅದರಿಂದ ಸಾವು ಸಂಭವಿಸಿದ್ದು 1914ರಲ್ಲಿ. ಅಂದರೆ 111 ವರ್ಷಗಳ ಹಿಂದೆ. ಕೇರಳದಲ್ಲಿ ಸಂಭವಿಸಿದ ಈ ಐತಿಹಾಸಿಕ ಘೋರ ಅಪಘಾತಕ್ಕೆ ಸೆಪ್ಟೆಂಬರ್ 22ಕ್ಕೆ ಭರ್ತಿ 111 ವರ್ಷ ತುಂಬಿತು.
ಈ ಸುದ್ದಿಯನ್ನೂ ಓದಿ: F-35 Fighter Jet: ಪಾರ್ಕ್ ಮಾಡಿರೋ ಯುಕೆ ಎಫ್-35 ಯುದ್ಧ ವಿಮಾನದಿಂದ ತಿರುವನಂತಪುರಂ ಏರ್‌ಪೋರ್ಟ್ ಗಳಿಸ್ತಿರೋದು ಎಷ್ಟು?
ಘಟನೆಯ ವಿವರ
ದೇಶದ ಮೊದಲ ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಕೇರಳದ ರಾಜಮನೆತನವೊಂದರ ರಾಜಕುಮಾರ. ಅವರೇ ಆಧುನಿಕ ಮಲಯಾಳಂನ ಪ್ರಸಿದ್ಧ ಕವಿಯೂ ಆಗಿದ್ದ, ʼಕೇರಳದ ಕಾಳಿದಾಸʼ ಎಂದೇ ಕರೆಯಲ್ಪಡುತ್ತಿದ್ದ ಕೇರಳವರ್ಮ ಕೋಯಿಲ್ ತಂಬುರಾನ್ (Keralavarma Valiya Koithampuran).
ಅದು 1900ರ ಕಾಲಘಟ್ಟ. ದೇಶದಲ್ಲಿ ಮೋಟಾರ್ ವಾಹನಗಳು ಇನ್ನೂ ಜನಪ್ರಿಯವಾಗಿರಲಿಲ್ಲ. ಕುದುರೆ ಬಂಡಿ, ಎತ್ತಿನ ಗಾಡಿಗಳಲ್ಲಿ ಜನರು ಓಡಾಡುತ್ತಿದ್ದರು. 1910–1912ರಲ್ಲಿ ಕೇರಳದಲ್ಲಿ (ತಿರುವಾಂಕೂರು) ಬಿಟಿಷರು ಮೋಟಾರು ವಾಹನಗಳನ್ನು ಪರಿಚಯಿಸಿದರು. ಶಬ್ದ ಮಾಡುತ್ತ ಅವು ರಸ್ತೆಯಲ್ಲಿ ಓಡಾಡುತ್ತಿದ್ದರೆ ಎರಡೂ ಬದಿ ಈ ವಿಸ್ಮಯವನ್ನು ನೋಡಲು ಜನರು ಗುಂಪುಗೂಡಿ ನಿಲ್ಲುತ್ತಿದ್ದರು.
ಶ್ರೀಮೂಲಂ ತಿರುನಾಳ್ ಮಹಾರಾಜ 1910ರಲ್ಲಿ ವಿದೇಶದಿಂದ ಕಾರು ಖರೀದಿಸಿ ಅದರಲ್ಲಿ ಓಡಾಡತೊಗಿದರು. ಕೇರಳವರ್ಮ ಕೋಯಿಲ್ ತಂಬುರಾನ್ ಅವರಿಗೆ ಒಮ್ಮೆ ಕಾರಿನಲ್ಲಿ ದೀರ್ಘ ದೂರ ಪ್ರಯಾಣ ಮಾಡಬೇಕು ಎನ್ನುವ ಬಯಕೆ ಮೂಡಿತು. ಅದರಂತೆ ಅವರು 1914ರ ಸೆಪ್ಟೆಂಬರ್‌ನಲ್ಲಿ ತಿರುವನಂತಪುರಂನಿಂದ ಕೋಟಯಂನಲ್ಲಿರುವ ವೈಕಂ ದೇವಸ್ಥಾನಕ್ಕೆ ತಮ್ಮ ಸಂಬಂಧಿ ಎ.ಆರ್. ರಾಜರಾಜವರ್ಮ ಅವರೊಂದಿಗೆ ಶ್ರೀಮೂಲಂ ತಿರುನಾಳ್ ಮಹಾರಾಜ ಅವರ ಕಾರಿನಲ್ಲಿ ತೆರಳಿದರು.
ದೇವರ ದರ್ಶನದ ಬಳಿಕ ಹರಿಪ್ಪಾಡ್ ಅರಮನೆಯಲ್ಲಿ 2 ದಿನ ತಂಗಿ ಸೆಪ್ಟೆಂಬರ್ 20ರಂದು ಕೇರಳವರ್ಮ ಮತ್ತು ಸಂಗಡಿಗರು ಕಾರಿನಲ್ಲಿ ತಿರುವನಂತಪುರಂಗೆ ಹಿಂದಿರುಗತೊಡಗಿದರು. ಆದರೆ ಈ ವೇಳೆ ಅಪಾಯವೊಂದು ಎದುರಾಯ್ತು. ಕಾರು ಆಲಪ್ಪುಳದ ಕಾಯಂಕುಳಂದ ಕುಟ್ಟಿತೆರವು ಬಳಿ ಬಂದಾಗ ರಸ್ತೆ ಮಧ್ಯ ಭಾಗಕ್ಕೆ ಇದ್ದಕ್ಕಿದ್ದಂತೆ ನಾಯಿಯೊಂದು ಓಡಿಬಂತು. ಇದರಿಂದ ಚಾಲಕ ಒಮ್ಮೆಲೇ ಕಾರು ತಿರುಗಿಸಿದ. ಕೂಡಲೇ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆಯಲ್ಲಿ ಮಗುಚಿ ಬಿತ್ತು. ಈ ವೇಳೆ ಕೇರಳವರ್ಮ ಅವರಿಗೆ ಗಂಭೀರ ಗಾಯವಾಯ್ತು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದರೆ ಸೆಪ್ಟೆಂಬರ್ 22ರಂದು ಅವರು ಮೃತಪಟ್ಟರು. ಆಗ ಅವರಿಗೆ 69 ವರ್ಷ ವಯಸ್ಸಾಗಿತ್ತು. ಎ.ಆರ್. ರಾಜರಾಜವರ್ಮ ಮತ್ತು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಬಚವಾಗಿದ್ದರು. ಹೀಗೆ ಕೇರಳವರ್ಮ ಅವರ ಸಾವು ದೇಶದ ಮೊದಲ ರಸ್ತೆ ಅಪಘಾತದ ಮರಣ ಎನಿಸಿಕೊಂಡಿದೆ. ಈ ದುರಂತಕ್ಕೆ ಈಗ 111 ವರ್ಷ.