ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs BAN: ಬಾಂಗ್ಲಾದೇಶ ವಿರುದ್ಧ 41 ರನ್‌ಗಳಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಭಾರತ!

IND vs BAN Match Highlights: ಅಭಿಷೇಕ್‌ ಶರ್ಮಾ ಅರ್ಧಶತಕ ಹಾಗೂ ಕುಲ್ದೀಪ್‌ ಯಾದವ್‌ ಸ್ಪಿನ್‌ ಮೋಡಿಯಿಂದ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 41 ರನ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ 2025ರ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಸೂಪರ್‌-4 ಪಂದ್ಯದಲ್ಲಿ ಭಾರತ ನೀಡಿದ್ದ 169 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾ 127 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಬಾಂಗ್ಲಾ ವಿರುದ್ಧ ಗೆದ್ದು ಏಷ್ಯಾ ಕಪ್‌ ಫೈನಲ್‌ಗೇರಿದ ಭಾರತ!

ಬಾಂಗ್ಲಾದೇಶ ವಿರುದ್ಧದ ಸೂಪರ್‌-4ರ ಪಂದ್ಯದಲ್ಲಿ ಭಾರತಕ್ಕೆ 41 ರನ್‌ಗಳ ಜಯ. -

Profile Ramesh Kote Sep 24, 2025 11:51 PM

ದುಬೈ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡ ತನ್ನ ಗೆಲುವಿನ ಲಯವನ್ನು ಮುಂದುವರಿಸಿದೆ. ಅಭಿಷೇಕ್‌ ಶರ್ಮಾ (Abhishek Sharma) ಅರ್ಧಶತಕ ಹಾಗೂ ಕುಲ್ದೀಪ್‌ ಯಾದವ್‌ ಸ್ಪಿನ್‌ ಮೋಡಿಯ ಸಹಾಯದಿಂದ ಟೀಮ್‌ ಇಂಡಿಯಾ ಸೂಪರ್‌-4ರ ಪಂದ್ಯದಲ್ಲಿ (IND vs BAN) ಬಾಂಗ್ಲಾದೇಶ ವಿರುದ್ಧ 41 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, 20 ಓವರ್‌ಗಳ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಭಾರತದ ಈ ಗೆಲುವಿನ ಮೂಲಕ ಶ್ರೀಲಂಕಾ ತಂಡ ಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.

ಬುಧವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 169 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾದೇಶ ತಂಡ, ಸೈಫ್‌ ಹಸನ್‌ (69 ರನ್‌) ಅವರ ಅರ್ಧಶತಕದ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸೋಲು ಅನುಭವಿಸಬೇಕಾಯಿತು. ಕುಲ್ದೀಪ್‌ ಯಾದವ್‌ (18ಕ್ಕೆ 3) ಹಾಗೂ ಜಸ್‌ಪ್ರೀತ್‌ ಬುಮ್ರಾ (18ಕ್ಕೆ 2) ಅವರ ಶಿಸ್ತುಬದ್ದ ಬೌಲಿಂಗ್‌ ದಾಳಿಗೆ ನಲುಗಿದ ಬಾಂಗ್ಲಾದೇಶ ತಂಡ 19.3 ಓವರ್‌ಗಳಿಗೆ 127 ರನ್‌ಗಳಿಗೆ ಆಲ್‌ಔಟ್‌ ಆಯಿತು. ಏಷ್ಯಾ ಕಪ್‌ ಫೈನಲ್‌ಗೆ ಪ್ರವೇಶ ಮಾಡಬೇಕೆಂದರೆ ಸೆಪ್ಟಂಬರ್‌ 25 ರಂದು ಪಾಕಿಸ್ತಾನ ವಿರುದ್ಧ ಗೆಲ್ಲಬೇಕು, ಇಲ್ಲವಾದಲ್ಲಿ ಟೂರ್ನಿಯಿಂದ ಹೊರ ಬೀಳಲಿದೆ. ಬಾಂಗ್ಲಾ ಹಾಗೂ ಪಾಕ್‌ ನಡುವಣ ಪಂದ್ಯವನ್ನು ಇದೀಗ ಸೆಮಿಫೈನಲ್‌ ಎಂದು ಹೇಳಬಹುದು.

IND vs BAN: ಅರ್ಧಶತಕ ಬಾರಿಸಿ ಯುವರಾಜ್‌ ಸಿಂಗ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಸೈಫ್‌ ಹಸನ್‌ ಅರ್ಧಶತಕ ವ್ಯರ್ಥ

ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾದೇಶ ತಂಡದ ಪರ ಆರಂಭಿಕ ಸೈಫ್‌ ಹಸನ್‌ ಏಕಾಂಗಿ ಹೋರಾಟ ನಡೆಸಿದರು. ಇವರು ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 51 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 69 ರನ್‌ ಗಳಿಸಿ ಜಸ್‌ಪ್ರೀತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಪರ್ವೇಝ್‌ ಹೊಸೇನ್‌ ( 21) ಸ್ವಲ್ಪ ಸಮಯ ಹಸನ್‌ಗೆ ಸಾಥ್‌ ನೀಡಿದ್ದು, ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲು ಭಾರತೀಯ ಬೌಲರ್‌ಗಳು ಅವಕಾಶ ನೀಡಲಿಲ್ಲ. ವಿಶೇಷವಾಗಿ ಜಸ್‌ಪ್ರೀತ್‌ ಬುಮ್ರಾ ಹಾಗೂ ವರುಣ್‌ ಚಕ್ರವರ್ತಿ ಉತ್ತಮವಾಗಿ ಬೌಲ್‌ ಮಾಡಿ ತಲಾ ಎರಡೆರಡು ವಿಕೆಟ್‌ ಕಿತ್ತರೆ, ಕುಲ್ದೀಪ್‌ ಯಾದವ್‌ ಮೂರು ವಿಕೆಟ್‌ ಪಡೆದರು.



168 ರನ್‌ಗಳನ್ನು ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಅಭಿಷೇಕ್‌ ಶರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ಅವರ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 168 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 169 ರನ್‌ಗಳ ಗುರಿಯನ್ನು ನೀಡಿತ್ತು.



ಮತ್ತೊಂದು ಅರ್ಧಶತಕ ಬಾರಿಸಿದ ಅಭಿಷೇಕ್‌ ಶರ್ಮಾ

ಭಾರತ ತಂಡದ ಇನಿಂಗ್ಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಅಭಿಷೇಕ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌. ಅವರು ಆರಂಭದಲ್ಲಿ ನಿಧಾನಗತಿಯಿಂದ ಆಡಿದರೂ ನಂತರ ಉಗ್ರರೂಪ ತಾಳಿದರು. ಅವರು ಆಡಿದ ಕೇವಲ 37 ಎಸೆತಗಳಲ್ಲಿ 202.70ರ ಸ್ಟ್ರೈಕ್‌ ರೇಟ್‌ನಲ್ಲಿ 5 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಬಾರಿಸಿದರು. ಶುಭಮನ್‌ ಗಿಲ್‌ (29) ಉತ್ತಮವಾಗಿ ಆಡಿದರೂ ದೊಡ್ಡ ಇನಿಂಗ್ಸ್‌ ಆಡುವಲ್ಲಿ ಎಡವಿದರು. ಆದರೆ, ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ 38 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದ್ದರು.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 168-8 (ಅಭಿಷೇಕ್‌ ಶರ್ಮಾ 74, ಹಾರ್ದಿಕ್‌ ಪಾಂಡ್ಯ 38, ಶುಭಮನ್‌ ಗಿಲ್‌ 29; ರಿಷದ್‌ ಹೊಸೇನ್‌ 27ಕ್ಕೆ 2)

ಬಾಂಗ್ಲಾದೇಶ: 19.3 ಓವರ್‌ಗಳಿಗೆ 127-10 (ಸೈಫ್‌ ಹಸನ್‌ 69, ಪರ್ವೇಜ್‌ ಹೊಸೇನ್‌ 21; ಜಸ್‌ಪ್ರೀತ್‌ ಬುಮ್ರಾ18ಕ್ಕೆ 2, ಕುಲ್ದೀಪ್‌ ಯಾದವ್ 18‌ ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಅಭಿಷೇಕ್‌ ಶರ್ಮಾ